More

    ಮನೆಗೆಲಸದವಳ ಮಗಳು ಪಿಎಸ್​ಐ

    ರೋಣ: ಮನೆಯಲ್ಲಿ ಕಡುಬಡತನ. ಚಿಕ್ಕಂದಿನಲ್ಲಿಯೇ ತಂದೆಯ ಸಾವು. ಅವರಿವರ ಮನೆಯಲ್ಲಿ ಕಸ-ಮುಸುರಿ ಕೆಲಸ ಮಾಡಿ ಸಾಕಿ ಸಲುಹಿದ ತಾಯಿ. ಹೆತ್ತಮ್ಮನ ಕಷ್ಟವನ್ನರಿತು ಛಲದಿಂದ ಓದಿ, ಪಿಎಸ್​ಐ ಆದ ಸಾಧಕಿಯೊಬ್ಬಳ ಯಶೋಗಾಥೆಯಿದು.

    ಸಾಧನೆಗೆ ಯಾವುದೂ ಅಡ್ಡಿಯಿಲ್ಲ. ಛಲ, ನಿರಂತರ ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಪಿಎಸ್​ಐ ಆಗುವ ಮೂಲಕ ತಾಲೂಕಿನ ಮಲ್ಲಾಪುರ ಗ್ರಾಮದ ಸವಿತಾ ಚಲವಾದಿ ತೋರಿಸಿದ್ದಾರೆ. ಸವಿತಾ ಬಸವರಾಜ ಚಲವಾದಿ ರೋಣ ತಾಲೂಕಿನ ಮಲ್ಲಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ರೋಣ ವಿ.ಎಫ್. ಪಾಟೀಲ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಗಜೇಂದ್ರಗಡದಲ್ಲಿ ಪಿಯುಸಿ, ಬಿಎಸ್​ಸಿ ಪದವಿ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎಸ್​ಸಿ ಪದವಿ ಶಿಕ್ಷಣ ಪೂರೈಸಿದರು. ಐಪಿಎಸ್​ಗಾಗಿ ವಿಜಯಪುರದ ಚಾಣಕ್ಯ ಕೋಚಿಂಗ್ ಸೆಂಟರ್​ನಲ್ಲಿ ತರಬೇತಿ ಪಡೆದರು. 2021ರ ಅಕ್ಟೋಬರ್​ನಲ್ಲಿ ಪಿಎಸ್​ಐ ಪರೀಕ್ಷೆ ಬರೆದಿದ್ದರು. 2022ರ ಜ. 19ರಂದು ಪ್ರಕಟವಾದ ಫಲಿತಾಂಶದಲ್ಲಿ ಸವಿತಾ ಪಿಎಸ್​ಐ ಆಗಿ ಆಯ್ಕೆಯಾಗಿದ್ದಾರೆ.

    ಐಪಿಎಸ್ ಆಗಲು 35 ವರ್ಷದವರೆಗೆ ಕಾಲಾವಕಾಶವಿದೆ. ಪಿಎಸ್​ಐ ಸೇವೆ ಸಲ್ಲಿಸುತ್ತ ಐಪಿಎಸ್ ಆಗುವ ಗುರಿ ಹೊಂದಿದ್ದೇನೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡಲು ನನ್ನಂತೆಯೇ ಬಡತನದಲ್ಲಿ ಬೆಳೆದು ಐಪಿಎಸ್ ಅಧಿಕಾರಿಯಾಗಿರುವ ರವಿ ಡಿ. ಚನ್ನಣ್ಣವರ ಅವರು ನನಗೆ ಪ್ರೇರಣೆ. ನಾನು ಅವರನ್ನು ರೋಲ್ ಮಾಡಲ್ ಆಗಿಟ್ಟುಕೊಂಡಿದ್ದೇನೆ. ಅವರಂತೆಯೇ ಆಗಿ ತೋರಿಸುತ್ತೇನೆ ಎನ್ನುತ್ತಾರೆ 25ರ ಹರೆಯದ ಸವಿತಾ ಚಲವಾದಿ.

    ತುತ್ತಿಗಾಗಿ ಹೆಣಗಾಟ

    ಚಿಕ್ಕಂದಿನಲ್ಲಿ ತಂದೆಯ ನಿಧನ. ಆಗ ತಾಯಿ ಪಾರ್ವತೆವ್ವ, ಐವರು ಹೆಣ್ಣುಮಕ್ಕಳು ಅತಂತ್ರರಾದರು. ಜೀವನೋಪಾಯಕ್ಕಾಗಿ ಉದ್ಯೋಗ ಅರಸಿ ತಾಯಿ ಮಲ್ಲಾಪುರ ಗ್ರಾಮವನ್ನು ತೊರೆದು ರೋಣ ಪಟ್ಟಣವನ್ನು ಸೇರಿದರು. ಪಟ್ಟಣದಲ್ಲಿ ಅವರಿವರ ಮನೆಗಳಲ್ಲಿ ಕಸ-ಮುಸುರಿ ಚಾಕರಿ ಮಾಡಿದರಷ್ಟೇ ಆರು ಜನರ ಹೊಟ್ಟೆಗೆ ಊಟ. ಇಲ್ಲದಿದ್ದರೆ ತಣ್ಣೀರು ಬಟ್ಟೆಯೇ ಗತಿ ಎಂಬಂತಹ ಸ್ಥಿತಿಯಿತ್ತು. ಸಂಸಾರದ ಭಾರ ಹೊತ್ತ ತಾಯಿ ಪಾರ್ವತೆವ್ವ, ‘ನನ್ನಂತೆ ನನ್ನ ಮಕ್ಕಳಾಗದಿರಲಿ, ಕಷ್ಟದ ದಿನಗಳು ನನಗೇ ಕೊನೆಗೊಳ್ಳಲಿ’ ಎಂದು ಐವರು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರು.

    ವಿವಿಧ ಹುದ್ದೆಯಲ್ಲಿ ಸಹೋದರಿಯರು

    ತಾಯಿ ಕಷ್ಟ ನೋಡಿ ಬೆಳೆದ ಹೆಣ್ಣುಮಕ್ಕಳು ಶಿಕ್ಷಣವಂತರಾಗಿ ಈಗ ವಿವಿಧ ಹುದ್ದೆಗಳಲ್ಲಿದ್ದಾರೆ. ಮೊದಲ ಮಗಳು ಕಾವ್ಯಾ ಬಿ.ಇಡಿ ಪದವಿ ಪಡೆದು ಶಿಕ್ಷಕಿಯಾಗಿದ್ದಾರೆ. ಎರಡನೆಯವಳು ಕವಿತಾ ಡಿಪ್ಲೊಮಾ ಇಂಜಿನಿಯರಿಂಗ್ ಪದವಿ ಪಡೆದು ಇಂಜಿನಿಯರ್ ಆಗಿದ್ದಾರೆ. ಮೂರನೆಯವಳು ಸವಿತಾ ಪಿಎಸ್​ಐ ಆಗಿ ಆಯ್ಕೆಯಾಗಿದ್ದಾರೆ. ನಾಲ್ಕನೆಯವಳು ಸರೋಜಾ ಎಂ.ಕಾಂ. ಪದವಿ ಪೂರೈಸಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ. ಐದನೆಯವಳು ಭೀಮವ್ವ ಬಿಇ ಪದವಿ ಅಂತಿಮ ವರ್ಷದ ಪರೀಕ್ಷೆ ಬರೆದಿದ್ದಾರೆ.

    ಕಡುಬತನದಲ್ಲಿದ್ದ ನಮ್ಗೆ ಗೇಣು ಜಾಗವಿರಲಿಲ್ಲ. ವಿಧಿಯಾಟದಂತೆ ಐವರು ಹೆಣ್ಣುಮಕ್ಕಳನ್ನು ನನ್ನ ಉಡಿಯಲ್ಲಿ ಹಾಕಿ ಗಂಡ ನಿಧನ ಹೊಂದಿದರು. ಆಗ ದಿಕ್ಕು ತೋಚದಂತಾಗಿ ಮಲ್ಲಾಪುರ ಗ್ರಾಮ ಬಿಟ್ಟು 15 ವರ್ಷಗಳ ಹಿಂದೆಯೇ ರೋಣಕ್ಕೆ ಬಂದು ಅವರಿವರ ಮನೆಯಲ್ಲಿ ಕಸ-ಮುಸುರಿ ಹಾಗೂ ವಸತಿ ನಿಲಯಗಳಲ್ಲಿ ಅಡುಗೆ ಮಾಡಿ ಐವರು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದೇನೆ. ಮಕ್ಕಳು ಉತ್ತಮ ಉದ್ಯೋಗದಲ್ಲಿರುವುದಕ್ಕೆ ಖುಷಿ ಇದೆ.

    | ಪಾರ್ವತೆವ್ವ ಚಲವಾದಿ ಸವಿತಾ ಅವರ ತಾಯಿ

    ಯಾರೊಬ್ಬರೂ ಬಡತನದ ಕಾರಣ ಮುಂದಿಟ್ಟುಕೊಂಡು ತಮ್ಮ ಕನಸು ಮೂಲೆಗುಂಪು ಮಾಡುವುದು ಸರಿಯಲ್ಲ. ಎಷ್ಟೇ ಕಷ್ಟದ ಕಾಯಕವಾದರೂ ಅದನ್ನು ಸಾಧಿಸುವ ಮೂಲಕ ಕೀರ್ತಿ ಶಿಖರವೇರಬೇಕು. ನಿರಂತರ ಅಧ್ಯಯನ, ಪರಿಶ್ರಮಪಟ್ಟರೆ ಅದಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ.

    | ಸವಿತಾ ಚಲವಾದಿ

    ಪಿಎಸ್​ಐ ಆಗಿ ಆಯ್ಕೆಯಾದವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts