More

    ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ

    ಲಕ್ಷ್ಮೇಶ್ವರ: ತಾಲೂಕಿನಾದ್ಯಂತ ಸೋಮವಾರ 3 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಅನೇಕ ಕಡೆ ಅವಾಂತರ ಸೃಷ್ಟಿಸಿದೆ. ಯಳವತ್ತಿ, ಯತ್ನಳ್ಳಿ, ಮಾಗಡಿ, ಗೊಜನೂರ, ಅಕ್ಕಿಗುಂದ, ಆದ್ರಳ್ಳಿ, ಬಡ್ನಿ, ಬಟ್ಟೂರ, ಸೂರಣಗಿ, ಹುಲ್ಲೂರ, ಬಾಲೇಹೊಸೂರ, ಕೊಕ್ಕರಗೊಂದಿ, ಬೂದಿಹಾಳ, ಶಿಗ್ಲಿ, ದೊಡ್ಡೂರ, ರಾಮಗೇರಿ, ಬಸಾಪುರ, ಅಡರಕಟ್ಟಿ ಮೊದಲಾದೆಡೆ ಭಾರಿ ಮಳೆಯಾಗಿದೆ. ಇದರಿಂದ ಕೆರೆ, ಕೃಷಿ ಹೊಂಡಗಳು, ಬದುವು, ತಗ್ಗು ಪ್ರದೇಶಗಳಲ್ಲಿ ಅಪಾರ ನೀರು ನಿಂತಿದೆ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆ, ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಮತ್ತೆ ಕೆಲವು ಕಡೆ ರಸ್ತೆ ಮೇಲೆ ನೀರು ಹರಿದ ಪರಿಣಾಮ ಜನರು ಸಂಚಾರಕ್ಕೆ ಪರದಾಡಿದರು.
    ಲಕ್ಷ್ಮೇಶ್ವರದ ಬೆಣ್ಣಿಪೇಟೆ, ಜನ್ನತ್​ನಗರ, ಮುಕ್ತಿನಗರ, ಹಳ್ಳದಕೇರಿ ಓಣಿ ಮೊದಲಾದೆಡೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ನೀರು ಹೊರಹಾಕಲು ನಿವಾಸಿಗಳು ಹರಸಾಹಸಪಟ್ಟರು. ಮನೆಯಲ್ಲಿನ ವಸ್ತುಗಳು ತೋಯ್ದು ರಾತ್ರಿಯಿಡೀ ಪರದಾಡಿದರು.
    ತಾಲೂಕಿನಾದ್ಯಂತ ಶೇ.80ರಷ್ಟು ಬಿತ್ತನೆಯಾಗಿದೆ. ವಾರದಿಂದ ಬಿಸಿಲು ಗಾಳಿಯಿಂದ ಬೆಳೆಗಳು ಬಾಡುವ ಸ್ಥಿತಿಯಲ್ಲಿದ್ದವು. ಸೋಮವಾರ ಸಂಜೆ ಉತ್ತಮ ಮಳೆಯಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಮತ್ತೊಂದೆಡೆ ವ್ಯಾಪಾರ-ವಹಿವಾಟಿಗೆ ಬಂದಿದ್ದ ಹಳ್ಳಿಗಳ ಜನರು, ಬೀದಿಬದಿ ವ್ಯಾಪಾರಸ್ಥರು ಪರದಾಡಿದರು. ರಸ್ತೆಗಳಲ್ಲಿ ಮೊಣಕಾಲುದ್ದ ನೀರು ಹರಿದು ಸಂಚಾರಕ್ಕೆ ಅಡ್ಡಿಯಾಯಿತು. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಜನರಿಗೆ ಸಮಸ್ಯೆಯಾಗಿತ್ತು. ಪುರಸಭೆ ಪೌರಕಾರ್ವಿುಕರು ಮೂರ್ನಾಲ್ಕು ತಂಡಗಳಾಗಿ ಮಳೆಯಲ್ಲಿಯೇ ಸಂಚರಿಸಿ ಪಟ್ಟಣದಲ್ಲಿ ಕಟ್ಟಿದ್ದ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts