More

    ಮನಸ್ಸು ಕೇಂದ್ರೀಕರಿಸಿ ಉತ್ತಮ ಪ್ರಜೆಯಾಗಿ -ಶಾರದೇಶಾನಂದ ಸ್ವಾಮೀಜಿ -ವಿದ್ಯಾಸಾಗರ ಶಾಲೆಯಲ್ಲಿ ಸಂಕಲ್ಪ ದಿನಾಚರಣೆ

    ದಾವಣಗೆರೆ: ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ವಾಣಿಯಂತೆ ಧನಾತ್ಮಕ ಅಂಶದ ಕಡೆಗೆ ದೇಹ ಮತ್ತು ಮನಸ್ಸನ್ನು ಕೇಂದ್ರೀಕರಿಸುವ ಮೂಲಕ ಉತ್ತಮ ಪ್ರಜೆಯಾಗಬೇಕು ಎಂದು ಹರಿಹರದ ರಾಮಕೃಷ್ಣಾಶ್ರಮದ ಶ್ರೀ ಶಾರದೇಶಾನಂದ ಸ್ವಾಮೀಜಿ ಹೇಳಿದರು.
    ನಗರದ ವಿದ್ಯಾಸಾಗರ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಕಲ್ಪ ದಿನಾಚರಣೆ ಹಾಗೂ ಕೈ ತುತ್ತು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
    ಧನಾತ್ಮಕ ವಿಚಾರಗಳು, ಉತ್ತಮ ವ್ಯಕ್ತಿತ್ವ, ಆರೋಗ್ಯದೊಂದಿಗೆ ವಿದ್ಯಾರ್ಥಿಗಳು ಸಬಲರಾಗಬೇಕು. ಜಾಗೃತ ಮನಸ್ಸಿನೊಂದಿಗೆ ಏಕಾಗ್ರತೆ ಕಂಡುಕೊಳ್ಳಬೇಕು. ಪರಿಶ್ರಮ ಮತ್ತು ಗಂಭೀರತೆ ನಮ್ಮನ್ನು ಎತ್ತರಕ್ಕೆ ಕರೆದೊಯ್ಯಲಿವೆ ಎಂದು ಹೇಳಿದರು.
    ಭಾರತ, ಸನಾತನ ಹಿಂದು ರಾಷ್ಟ್ರವಾಗಿದೆ. ಎಲ್ಲವನ್ನೂ, ಎಲ್ಲರನ್ನೂ ಒಳಿತಿನ ಕಡೆಗೆ ತೆಗೆದುಕೊಂಡು ಹೋಗುವ ಮಾರ್ಗವನ್ನು ತಿಳಿಸುತ್ತದೆ. ಭೇದ-ಭಾವವಿಲ್ಲದೆ ಎಲ್ಲರ ಕಲ್ಯಾಣ ಬಯಸುವ ಧರ್ಮವಾಗಿದೆ ಎಂದು ತಿಳಿಸಿದರು.
    ತಾಯಿಯ ಪ್ರೀತಿಯ ಕೈತುತ್ತು ಎಲ್ಲದಕ್ಕಿಂತಲೂ ಶ್ರೇಷ್ಠ. ಮನೆಯಲ್ಲಿ ಯಾವ ಸಾಧನಗಳನ್ನೂ ಬಳಸದೆ ನೆಲದ ಮೇಲೆ ಕೂತು ಬರಿಗೈಯಲ್ಲಿ ಊಟ ಮಾಡಬೇಕು. ಟಿವಿ ಮೊಬೈಲ್ ನೀಡದೆ ಪಾಲಕರು ಭಗವಂತನನ್ನು ಸ್ಮರಿಸುತ್ತ ಊಟ ಸೇವಿಸಬೇಕು ಎಂದು ಹೇಳಿದರು.
    ಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪೆಥಾಲಜಿ ವಿಭಾಗ ಮುಖ್ಯಸ್ಥೆ ಡಾ. ಶಶಿಕಲಾ ಕೃಷ್ಣಮೂರ್ತಿ ಮಾತನಾಡಿ ವಿದ್ಯಾರ್ಥಿಗಳು ಪ್ರಯತ್ನದಿಂದಲೇ ಯಶಸ್ಸು ಗಳಿಸಬೇಕು. ಯಶಸ್ಸು ಪಡೆಯಲು ಮಾರ್ಗ ಪ್ರಾಮಾಣಿಕವಾಗಿದ್ದು ಗುರಿ ಸ್ಪಷ್ಟವಾಗಿರಬೇಕು ಎಂದರು.
    ಶಾಲೆಯ ಸಂಸ್ಥಾಪಕ ಅಧ್ಯಕ್ಷ ಭರತ್‌ಸಿಂಗ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ, ವ್ಯಕ್ತಿತ್ವ ವೃದ್ಧಿಸುವಲ್ಲಿ ಸಂಕಲ್ಪ ಕಾರ್ಯಕ್ರಮ ಮಹತದ್ದಾಗಿದೆ ಎಂದು ಹೇಳಿದರು.
    ಶಾಲೆಯ ಆಡಳಿತಾಧಿಕರಿ ಸತ್ಯವತಿ ಭರತ್‌ಸಿಂಗ್ ಮಾತನಾಡಿ ಪ್ರಜ್ಞಾವಸ್ಥೆಯೊಂದಿಗೆ ಗುರಿ ಮುಟ್ಟುವ ಜತೆಗೆ ಅಂತರಂಗದಲ್ಲಿ ಪ್ರಬಲ ಶಕ್ತಿ ಜಾಗೃತಗೊಳಿಸಬೇಕೆಂದು ತಿಳಿಸಿದರು.
    ವಿದ್ಯಾರ್ಥಿಗಳು ಭಗವದ್ಗೀತಾ ಶ್ಲೋಕ ಪಠಿಸಿದರು. ಪಾಲಕರು ಮನೆಯಿಂದ ತಂದಿದ್ದ ಊಟವನ್ನು ಮಕ್ಕಳಿಗೆ ಕೈತುತ್ತು ನೀಡುವ ಮೂಲಕ ಉಣಬಡಿಸಿದರು. ಆಶಾ ಸ್ವಾಗತಿಸಿದರು. ರಶ್ಮಿ ಜೋಷಿ ವಂದಿಸಿದರು.
    —–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts