More

    ಮಧುಮೇಹ ಅಗೋಚರ ಶತ್ರು

    ಚನ್ನರಾಯಪಟ್ಟಣ: ಮನುಷ್ಯರನ್ನು ಕಾಡುವ ಮಧುಮೇಹ ಅಗೋಚರ ಶತ್ರು ಎಂದು ಹೃದ್ರೋಗ ಹಾಗೂ ಮಧುಮೇಹ ತಜ್ಞ ಡಾ.ಕೆ.ನಾಗೇಶ್ ಹೇಳಿದರು.
    ಪಟ್ಟಣದ ನಾಗೇಶ್ ಆಸ್ಪತ್ರೆ ಹಾಗೂ ನಾಗೇಶ್ ಆರೋಗ್ಯ ವಿಜ್ಞಾನ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಹಾಗೂ ಮಧುಮೇಹ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.


    ದೇಶದಲ್ಲಿ ಕಳೆದ ಎರಡು ದಶಕಗಳಿಂದ ಶೇ.300 ರಷ್ಟು ಹೆಚ್ಚಾಗಿರುವ ಏಕೈಕ ಕಾಯಿಲೆ ಮಧುಮೇಹವಾಗಿದೆ. ಜನರನ್ನು ಕಾಡುತ್ತಿರುವ ಮಧುಮೇಹದಿಂದ ದೇಶದ ಆರ್ಥಿಕತೆ ಹಾಗೂ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.


    ಅವೈಜ್ಞಾನಿಕ ಆಹಾರ ಪದ್ಧತಿ, ಸಿಹಿ ಹಾಗೂ ಕೊಬ್ಬಿನಾಂಶದ ಆಹಾರಗಳ ಸೇವನೆ ಮಧುಮೇಹಕ್ಕೆ ಮುಖ್ಯ ಕಾರಣವಾಗಿದೆ. ಮಿತ ಆಹಾರ, ನಾರು ಮತ್ತು ಹಸಿರು ತರಕಾರಿಗಳ ಸೇವನೆಯೊಂದಿಗೆ ದೈಹಿಕ ಚಟುವಟಿಕೆ, ವ್ಯಾಯಾಮ, ನಿತ್ಯ 40 ನಿಮಿಷ ಬಿರುಸಿನ ನಡಿಗೆಯಿಂದ ಕಾಯಿಲೆಗಳಿಂದ ಸಾಕಷ್ಟು ಅಂತರ ಕಾಪಾಡಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.


    ಕಸಾಪ ತಾಲೂಕು ಅಧ್ಯಕ್ಷ ಎಚ್.ಎನ್.ಲೋಕೇಶ್ ಮಾತನಾಡಿ, ಮಧುಮೇಹದ ಮಾರಕತೆಗೆ ಶೇ.60 ರಷ್ಟು ಜನ ತುತ್ತಾಗಿದ್ದರೂ ರೋಗದ ಕುರಿತಾಗಿ ಬಹುತೇಕರಲ್ಲಿ ತಾತ್ಸಾರ ಇದೆ. ಸೂಕ್ತ ಚಿಕಿತ್ಸೆ ಪಡೆಯದೇ ಹೃದಯಾಘಾತ, ಪಾರ್ಶ್ವವಾಯು, ಕಿಡ್ನಿ ವೈಫಲ್ಯ ಮತ್ತು ಗ್ಯಾಂಗ್ರಿನ್‌ಗೆ ತುತ್ತಾಗುವ ಸನ್ನಿವೇಶ ತಂದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
    ಜಾಗೃತಿ ಜಾಥಾ: ನಾಗೇಶ್ ಆಸ್ಪತ್ರೆ ಬಳಿ ಜಾಗೃತಿ ಜಾಥಾಕ್ಕೆ ಕಸಾಪ ತಾಲೂಕು ಅಧ್ಯಕ್ಷ ಎಚ್.ಎನ್. ಲೋಕೇಶ್ ಚಾಲನೆ ನೀಡಿದರು. ಆಸ್ಪತ್ರೆ ರಸ್ತೆ, ಮೈಸೂರು ರಸ್ತೆ, ಕೆ.ಆರ್. ವೃತ್ತ, ನವೋದಯ ವೃತ್ತ ಮಾರ್ಗ ನಾಗೇಶ್ ಆಸ್ಪತ್ರೆ ಬಳಿ ಜಾಥಾ ಅಂತಿಮಗೊಂಡಿತು.


    ಶಿಬಿರದಲ್ಲಿ 280 ಜನರು ಮಧುಮೇಹ ಪರೀಕ್ಷೆಗೆ ಒಳಪಟ್ಟರು. ನಾಗೇಶ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಭಾರತಿ ನಾಗೇಶ್, ನಾಗೇಶ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ವಿದ್ಯಾರಾಣಿ ಮತ್ತು ಶಿಕ್ಷಕರು ಜಾಥಾದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts