More

    ಮದ್ಯ ಮಾರಾಟಕ್ಕೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ

    ಗದಗ: ಕೋವಿಡ್ 19 ನಿಯಂತ್ರಣ ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್​ಡೌನ್ ವಿಸ್ತರಣೆ ನಡುವೆಯೇ ಸರ್ಕಾರ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದು, ಮೇ 4 ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಹೀಗಾಗಿ ಮದ್ಯದ ಅಂಗಡಿಗಳ ಮುಂದೆ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರುವ ಸಂಭವವಿದ್ದು, ಇದರಿಂದ ಅಂಗಡಿ ಮಾಲೀಕರು ಮಂಜಾಗ್ರತಾ ಕ್ರಮವಾಗಿ ತಮ್ಮ ಅಂಗಡಿಗಳ ಮುಂದೆ ಜನರ ನಿಯಂತ್ರಣಕ್ಕೆ ಬಿದಿರಿನ ಕಂಬಗಳನ್ನು ಕಟ್ಟಿ ವ್ಯವಸ್ಥೆ ಮಾಡಿದ್ದಾರೆ. ಒಬ್ಬೊಬ್ಬರಾಗಿ ಬಂದು ಸುರಕ್ಷಿತ ಅಂತರ ಕಾಯ್ದುಕೊಂಡು ಮದ್ಯವನ್ನು ಖರೀದಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ.

    ಕರೊನಾ ವೈರಸ್ ಹಾವಳಿ ಹೆಚ್ಚಾದ ನಂತರ ಅದರ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್​ಡೌನ್ ಹೇರಿದ್ದರಿಂದ ಸಂಪೂರ್ಣ ವ್ಯಾಪಾರ ವಹಿವಾಟು ಬಂದ್ ಆಗಿತ್ತು. ಮದ್ಯದಂಗಡಿಗಳೂ ಸಹ ಬಾಗಿಲು ಮುಚ್ಚಿದ್ದರಿಂದ ಮದ್ಯಪ್ರಿಯರು, ವ್ಯಸನಿಗಳಿಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಮದ್ಯಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದರು. ಗದಗ ನಗರದ ಕಳಸಾಪೂರ ರಸ್ತೆಯಲ್ಲಿರುವ ಎಂಎಸ್​ಐಎಲ್ ಮದ್ಯದಂಗಡಿ ಶೆಟರ್ಸ್ ಮುರಿದು ಸುಮಾರು 7 ಸಾವಿರ ರೂ. ಮೌಲ್ಯದ ಮದ್ಯವನ್ನು ಕಳ್ಳತನ ಮಾಡಲಾಗಿತ್ತು.

    ಇದೀಗ ಕರೊನಾ ವೈರಸ್ ಹರಡುವಿಕೆ ಕೊಂಚ ನಿಧಾನಗತಿಯಲ್ಲಿ ಇರುವುದರಿಂದ ಸರ್ಕಾರ ಲಾಕ್​ಡೌನ್ ಮಧ್ಯೆಯೂ ಮದ್ಯ ಮಾರಾಟಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ.

    ಕಟ್ಟುನಿಟ್ಟಾಗಿ ನಿಯಮಪಾಲಿಸಿ

    ಮುಂಡರಗಿ: ಪಟ್ಟಣದ ಎಂಎಸ್​ಐಎಲ್ ಮತ್ತು 3 ವೈನ್ ಶಾಪ್ ಹಾಗೂ ಹಿರೇವಡ್ಡಟ್ಟಿ ಗ್ರಾಮದ ಎಂಎಸ್​ಐಎಲ್ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಷರತ್ತುಬದ್ಧ ಅನುಮತಿ ನೀಡಿದ್ದರಿಂದ ಮಾಲೀಕರು ಮುಜಾಗ್ರತೆ ಕ್ರಮವಾಗಿ ಅಂಗಡಿ ಮುಂದೆ ಸರದಿ ಸಾಲಿನ ವ್ಯವಸ್ಥೆ ಮಾಡಿದ್ದಾರೆ. ಅಂತರ ಕಾಯ್ದುಕೊಳ್ಳಲು 1 ಮೀಟರ್​ಗೊಂದರಂತೆ ಮಾರ್ಕ್ ಮಾಡಲಾಗಿದೆ. ಪಟ್ಟಣ ಸೇರಿ ತಾಲೂಕಿನಲ್ಲಿ 13 ಮದ್ಯದಂಗಡಿಗಳಿವೆ. ಈ ಪೈಕಿ ಎರಡು ಎಂಎಸ್​ಐಎಲ್, 3 ಮದ್ಯದಂಗಡಿ ತೆರೆಯಲು ಅವಕಾಶ ಕೊಡಲಾಗಿದೆ. ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಅಂಗಡಿ ತೆರೆಯಲು ಅವಕಾಶವಿದೆ. ಮದ್ಯವನ್ನು ಪಾರ್ಸಲ್ ಕೊಡಬೇಕು. ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರದ ಷರತ್ತು, ನಿಬಂಧನೆ ಕಟ್ಟುನಿಟ್ಟಾಗಿ ಪಾಲಿಸಿಬೇಕು ಎಂದು ಮದ್ಯದ ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕ ದೀಪಕ ಎಸ್. ತಿಳಿಸಿದರು.

    6 ಅಡಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ

    ಲಕ್ಷ್ಮೇಶ್ವರ: ಕರೊನಾ ಹಿನ್ನೆಲೆ ಕಳೆದ ಒಂದೂವರೆ ತಿಂಗಳಿಂದ ಬಂದ್ ಮಾಡಿದ್ದ ಮದ್ಯ ಮಾರಾಟ ಸೋಮವಾರ ಆರಂಭವಾಗಲಿದೆ. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳ ಮುಂದೆ ದೈಹಿಕ ಅಂತರ ಕಾಯಬೇಕು, ಮದ್ಯ ಖರೀದಿಸಲು ಬರುವವರು ಮತ್ತು ಮಾರಾಟಗಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. 6 ಅಡಿ ಅಂತರ ಕಾಯಬೇಕು ಎಂಬ ಸೂಚನೆ ಹಿನ್ನೆಲೆಯಲ್ಲಿ ಮಾರಾಟಗಾರರು ತಮ್ಮ ಅಂಗಡಿಗಳ ಮುಂದೆ ಬಿದಿರಿನ ಕಂಬ ಕಟ್ಟಿ, 6 ಅಡಿ ಅಂತರದಲ್ಲಿ ಬಾಕ್ಸ್ ಹಾಕಿ ಮಾರಾಟಕ್ಕೆ ಅಣಿಯಾಗಿದ್ದಾರೆ.

    ಶಿಸ್ತಿನಿಂದ ಕಾರ್ಯ ನಿರ್ವಹಣೆ

    ಗಜೇಂದ್ರಗಡ: ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಮೂಲಕ ಗ್ರಾಮಸ್ಥರಿಗೆ ಉದ್ಯೋಗ ಖಾತ್ರಿಯೋಜನೆಯಡಿ ಕೆಲಸ ನೀಡಲಾಗಿದೆ ಎಂದು ರೋಣ ತಾಲೂಕು ಉಪವಲಯ ಅರಣ್ಯಾಧಿಕಾರಿ ಎ.ಎಸ್. ಪಾಗಾದ ಹೇಳಿದರು.

    ಸಮೀಪದ ಕುಂಟೋಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರಂಭಿಸಲಾಗಿರುವ ಅಂದಾಜು 8 ಲಕ್ಷ ರೂ. ವೆಚ್ಚದ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿ ಅವರು ಮಾತನಾಡಿದರು. ಕುಂಟೋಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವದೇಗೋಳ ಗ್ರಾಮದ ರಸ್ತೆ ಮಾರ್ಗದಲ್ಲಿ ಅರಣ್ಯೀಕರಣ ಕಾಮಗಾರಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ನಡೆಸಲಾಗುತ್ತಿದೆ ಎಂದರು. ಕಾರ್ವಿುಕ ಮುಖಂಡರಾದ ಬಾಲು ರಾಠೋಡ ಹಾಗೂ ಎಂ.ಎಸ್. ಹಡಪದ ಇತರರಿದ್ದರು.

    ಮಧುಪ್ರಿಯರ ಮುಖದಲ್ಲಿ ಮಂದಹಾಸ

    ನರೇಗಲ್ಲ: ಮದ್ಯದ ಅಂಗಡಿಗಳು ಮೇ 4ರಿಂದ ಪ್ರಾರಂಭವಾಗಲಿರುವುದರಿಂದ ಅಂಗಡಿಗಳ ಮಾಲೀಕರು ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಪಟ್ಟಣದ ಎರಡು, ಅಬ್ಬಿಗೇರಿಯ ಒಂದು ಹಾಗೂ ನಿಡಗುಂದಿ ಗ್ರಾಮದಲ್ಲಿನ ಒಂದು ಎಂಎಸ್​ಐಎಲ್ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತದೆ. ಪರಸ್ಪರ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಅಂಗಡಿಗಳ ಮುಂದೆ ಬ್ಯಾರಿಕೇಡ್, ಕಂಬಗಳನ್ನು ಹಾಕಲಾಗಿದ್ದು, ಸಾಕಷ್ಟು ಜನಸಂದಣೆ ಸೇರುವ ಸಾಧ್ಯತೆಗಳಿವೆ. ಮುನ್ನೆಚ್ಚರಿಕೆಯಾಗಿ ಪ್ರತಿಯೊಂದು ಅಂಗಡಿಗಳಿಗೂ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ನರೇಗಲ್ಲ ಠಾಣಾ ವ್ಯಾಪ್ತಿಯಲ್ಲಿನ 4 ಮದ್ಯದ ಅಂಗಡಿಗಳ ಮಾಲೀಕರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಸರ್ಕಾರ ಸೂಚಿಸಿರುವ ನಿಯಮಾವಳಿಗಳ ಪ್ರಕಾರ ಮಾರಾಟ ಮಾಡಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಿಯಮಗಳ ಉಲ್ಲಂಘನೆಯಾದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಿಎಸ್​ಐ ಬಿ.ಬಿ. ಕೊಳ್ಳಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts