More

    ಮತ್ಸ್ಯ ಬೇಟೆಗೆ ಇಂದಿನಿಂದ ಷರತ್ತುಬದ್ಧ ಅನುಮತಿ

    ಕಾರವಾರ: ಮೀನುಗಾರರ ನಿರಂತರ ಬೇಡಿಕೆಯ ನಂತರ ಆಳ ಸಮುದ್ರದಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ಜಿಲ್ಲಾಡಳಿತ ಮೇ 6ರಿಂದ ಷರತ್ತು ಬದ್ಧ ಅನುಮತಿ ನೀಡಿದೆ. ಜಿಲ್ಲೆಯ 300ಕ್ಕೂ ಅಧಿಕ ಬೋಟ್​ಗಳು ಮೀನುಗಾರಿಕೆಗೆ ತೆರಳಲು ಸಜ್ಜಾಗಿವೆ.

    ಕಾರವಾರದ ಬೈತಖೋಲದಲ್ಲಿ 30, ಅಂಕೋಲಾ ಬೇಲೆಕೇರಿಯಲ್ಲಿ 20, ಕುಮಟಾ ತದಡಿಯಲ್ಲಿ 20 ಮತ್ತು ಹೊನ್ನಾವರ ಬಂದರಿನಲ್ಲಿ 30 ಬೋಟ್​ಗಳಿಗೆ ಮಾತ್ರ ಒಂದು ದಿನಕ್ಕೆ ಮೀನು ಇಳಿಸಲು ಅವಕಾಶ ನೀಡಲಾಗಿದೆ. ಮೇಲುಸ್ತುವಾರಿ ನೋಡಿಕೊಳ್ಳಲು ಪ್ರತಿ ಬಂದರುಗಳಿಗೂ ಒಬ್ಬೊಬ್ಬ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

    ಸ್ಥಳೀಯ ಕಲಾಸಿಗಳನ್ನು (ಬೋಟ್ ಕಾರ್ವಿುಕರು) ಮಾತ್ರ ಬಳಸಬೇಕು. ಎಲ್ಲರ ಹೆಸರು, ದಾಖಲೆಗಳೊಂದಿಗೆ ಮೀನುಗಾರಿಕೆ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಎಲ್ಲರ ಆರೋಗ್ಯ ತಪಾಸಣೆ ಮಾಡಿಸಿದ ನಂತರವಷ್ಟೇ ಮೀನುಗಾರಿಕೆಗೆ ತೆರಳಲು ಅನುಮತಿ ನೀಡಬೇಕು. ಕಲಾಸಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಮುಂತಾದವುಗಳನ್ನು ಮಾಲೀಕರೇ ನೀಡಬೇಕು. ಮೇ 31ರ ಒಳಗೆ ವಾಪಸ್ ಮರಳಬೇಕು. ಮೀನು ಇಳಿಸುವುದು, ಐಸ್ ತುಂಬುವುದು ಮುಂತಾದ ಕಾರ್ಯಗಳಿಗೆ ಕನಿಷ್ಠ ಜನರನ್ನು ಬಳಸಿಕೊಳ್ಳಬೇಕು. ಈ ರೀತಿ ಒಟ್ಟು 17 ಷರತ್ತುಗಳನ್ನು ವಿಧಿಸಲಾಗಿದೆ.
    ಶಾಸಕರ ಸಭೆ: ಶಾಸಕಿ ರೂಪಾಲಿ ನಾಯ್ಕ ತಾಪಂ ಕಚೇರಿಯಲ್ಲಿ ಮಂಗಳವಾರ ಮೀನುಗಾರರ ಹಾಗೂ ಅಧಿಕಾರಿಗಳ ಸಭೆ ನಡೆಸಿದರು. ಮೀನುಗಾರಿಕೆಯ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲ ನಿಯಮ ಪಾಲಿಸಬೇಕು. ಎಂದು ಮನವಿ ಮಾಡಿದರು. ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ನಾಗರಾಜ, ತಹಸೀಲ್ದಾರ್ ರಾಮಚಂದ್ರ ಕಟ್ಟಿ, ತಾಪಂ ಇಒ ಆನಂದಕುಮಾರ ಬಾಲಣ್ಣನವರ್, ಮೀನುಗಾರರ ಮುಖಂಡರಾದ ಗಣಪತಿ ಮಾಂಗ್ರೆ, ಗಣಪತಿ ಉಳ್ವೇಕರ್, ಮೋಹನ ಬೋಳಶೆಟ್ಟಿಕರ್ ಇತರರು ಇದ್ದರು.

    ಅಕ್ರಮ ಲೈಟ್ ಫಿಶಿಂಗ್ಎ ರಡು ಬೋಟ್ ವಶಕ್ಕೆ: ಅಕ್ರಮ ಲೈಟ್ ಫಿಶಿಂಗ್ ನಡೆಸುತ್ತಿದ್ದ ಮತ್ತೆರಡು ಗೋವಾ ಬೋಟ್​ಗಳನ್ನು ಕೋಸ್ಟ್ ಗಾರ್ಡ್ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದು ಕಾರವಾರ ಮೀನುಗಾರಿಕೆ ಇಲಾಖೆಗೆ ಒಪ್ಪಿಸಿದ್ದಾರೆ. ಕೋನ್​ಸಿಪ್ ಹಾಗೂ ಸೀ ಫೋಸ್ ಎಂಬ ಎರಡು ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಹಾರವಾಡದ ನಾಲ್ವರು, ಕಾರವಾರ ಕೋಡಿಬಾಗದ ಒಬ್ಬ ಮತ್ತು ಒಡಿಶಾ, ಛತ್ತೀಸ್​ಗಡ, ಗುಜರಾತ್​ನ ಅನೇಕರ ಸೇರಿ ಒಟ್ಟು 39 ಮೀನುಗಾರರಿದ್ದರು. ಬೋಟ್​ನಲ್ಲಿದ್ದ ಜನರೇಟರ್, ಎಲ್​ಇಡಿ ಲೈಟ್​ಗಳನ್ನು ವಶಕ್ಕೆ ಪಡೆಯಲಾಗಿದ್ದು, ಮೀನುಗಾರರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಎರಡು ದಿನದ ಹಿಂದೆ ವಶಪಡಿಸಿಕೊಂಡ ಎರಡು ಗೋವಾ ಬೋಟ್​ಗಳ ಮಾಲೀಕರಿಗೆ ದಂಡ ವಿಧಿಸಲಾಗಿದ್ದು, ಬೋಟ್ ಹಾಗೂ ಮೀನುಗಾರರನ್ನು ಗೋವಾಕ್ಕೆ ಕಳಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರತೀಕ ಶೆಟ್ಟಿ ಮಾಹಿತಿ ನೀಡಿದ್ದಾರೆ.

    ಈ ಬಾರಿ ನೆರೆ, ಮತ್ಸ್ಯ ಕ್ಷಾಮದಿಂದ ತೀವ್ರ ಹಾನಿಯಾಗಿದೆ ಎಂದು ಮೀನುಗಾರರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನಾವು ಮೀನುಗಾರಿಕೆಗೆ ಅನುಮತಿ ನೀಡಿದ್ದೇವೆ. ಮೀನು ಹಿಡಿದ ನಂತರ ಮಾರಾಟದ ಸಮಸ್ಯೆ, ಬೆಲೆ ಇಳಿಕೆ ಮುಂತಾದವುಗಳಿಗೆ ಜಿಲ್ಲಾಡಳಿತ ಹೊಣೆಗಾರ ಅಲ್ಲ.
    ಡಾ. ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಮೀನುಗಾರರ ಸಮಸ್ಯೆ ಅರ್ಥವಾಗಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮೀನುಗಾರಿಕೆ ಸಚಿವರಿಗೆ ಕರೆ ಮಾಡಿ ಮೀನುಗಾರಿಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಅದಕ್ಕೆ ಅವರು ಸ್ಪಂದಿಸಿದ್ದಾರೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ನಿಯಮ ಪಾಲಿಸುವ ಕುರಿತಂತೆ ಶಾಸಕರು ಜವಾಬ್ದಾರಿ ತೆಗೆದುಕೊಳ್ಳುವಂತೆ ಸಚಿವರು ಹೇಳಿದ್ದಾರೆ. ಇದರಿಂದ ಮೀನುಗಾರರು ಈ ಪರಿಸ್ಥಿತಿ ಅರ್ಥ ಮಾಡಿಕೊಂಡು ಸುರಕ್ಷಿತವಾಗಿ ಮೀನುಗಾರಿಕೆ ನಡೆಸಬೇಕು.
    ರೂಪಾಲಿ ನಾಯ್ಕ ಶಾಸಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts