More

    ಮತ್ಸ್ಯೊದ್ಯಮಕ್ಕೆ ಬೇಕು ಸಹಾಯಹಸ್ತ

    ಧಾರವಾಡ: ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಜಲ ಸಂಪನ್ಮೂಲ ಇಲ್ಲವಾದರೂ ಗ್ರಾಮದ ಸಮುದಾಯವೊಂದು 5 ದಶಕಗಳಿಂದ ಮೀನುಗಾರಿಕೆಯನ್ನೇ ಉದ್ಯೋಗ ಮಾಡಿಕೊಂಡಿದೆ. ಮೀನು ಉತ್ಪಾದನೆಗೆ ಬೇಡಿಕೆ ಇದ್ದರೂ ಸೂಕ್ತ ಸೌಲಭ್ಯ, ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯಂದ ಈ ಸಮುದಾಯ ಬಡವಾಗಿಯೇ ಉಳಿದಿದೆ.

    ತಾಲೂಕಿನ ಮುಗದ ಗ್ರಾಮದ ಭೋವಿ ಸಮುದಾಯದ ಬಹುತೇಕರು ಮೀನುಗಾರಿಕೆ ಮಾಡುತ್ತಾರೆ. ಹೀಗಾಗಿ, 1966ರಲ್ಲಿ ಆರಂಭಿಸಿದ, 152 ಸದಸ್ಯರ ಧಾರವಾಡ ಮೀನುಗಾರರ ಸಹಕಾರ ಸಂಘ ಇಷ್ಟೊತ್ತಿಗೆ ಬೃಹತ್ ಮಟ್ಟದಲ್ಲಿ ಬೆಳೆಯಬೇಕಿತ್ತು. ಆದರೆ, ಸರ್ಕಾರದ ಸೌಲಭ್ಯ, ಪ್ರೋತ್ಸಾಹ ಸರಿಯಾಗಿ ಸಿಗದೆ ಕುಂಟುತ್ತಲೇ ಸಾಗಿದೆ.

    ಸಹಕಾರಿ ಸಂಘ ಸ್ಥಾಪಿಸಿ ಮೀನು ಉತ್ಪಾದನೆ ಹಾಗೂ ಮಾರಾಟ ಮಾಡುತ್ತಿದ್ದಾರೆ. ಪುರುಷರು ಮೀನು ಹಿಡಿದು ತಂದರೆ, ಮಹಿಳೆಯರು ಮೀನು ಮಾರಾಟ ಮಾಡಿ ಜೀವನ ನಿರ್ವಹಿಸುತ್ತಿದ್ದಾರೆ. ಈ ಜನಾಂಗಕ್ಕೆ ಮೀನುಗಾರಿಕೆ ಉತ್ತಮ ಉದ್ಯೋಗವೂ ಹೌದು. ಆದರೆ, ಅತಿ ಮಳೆಯಾದಾಗ, ಮಳೆ ಆಗದಿದ್ದಾಗ ಮೀನು ಉತ್ಪಾದನೆಯಾಗದೆ ತೀವ್ರ ಪರದಾಡುವಂತಾಗಿದೆ.

    ಕೆರೆಯಲ್ಲಿ ಕಾಟ್ಲಾ, ಮೃಗಾಲ, ಕನಡಿ, ರೋಹೊ ಹಾಗೂ ಇತರ ತಳಿ ಮೀನುಗಳನ್ನು ಬಿಡಲಾಗಿದೆ. ಪ್ರತಿ ವರ್ಷ 2 ಲಕ್ಷ ಮೀನು ಮರಿಗಳನ್ನು ಬಿಡುವ ಸಂಘದ ಸದಸ್ಯರು, ಐದು ದಿನಕ್ಕೊಮ್ಮೆ ಮೀನು ಹಿಡಿದು ಜೀವನ ಸಾಗಿಸುತ್ತಿದ್ದಾರೆ. 2 ವರ್ಷಗಳಲ್ಲಿ ಅತಿಯಾದ ಮಳೆಯಿಂದ ಮೀನು ಸಿಗದೆ ಪರದಾಡಿದ್ದಾರೆ. ಆದ ನಷ್ಟ ಭರಿಸಲು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಸರ್ಕಾರದಿಂದ ಹೆಚ್ಚಿನ ಸೌಲಭ್ಯ ನೀಡಿದರೆ ಸಂಘವನ್ನು ಮಾದರಿ ಮಾಡಲು ಅನುಕೂಲ ಎಂಬುದು ಸದಸ್ಯರ ಆಶಯ. ಕೇವಲ ಬಲೆಗಳನ್ನು ನೀಡುವ ಮೀನುಗಾರಿಕೆ ಇಲಾಖೆಯಿಂದ ಉಳಿದ ಪ್ರೋತ್ಸಾಹ ಸಿಕ್ಕಿಲ್ಲ. ಸಂಘದ ಸದಸ್ಯರ ಮನೆ ನಿರ್ವಣಕ್ಕೆ 1.20 ಲಕ್ಷ ರೂ. ನೀಡಿದ್ದು ಸಾಕಾಗದೆ 3 ವರ್ಷಗಳಾದರೂ ಕೆಲ ಮನೆಗಳು ಅಪೂರ್ಣವಾಗಿದೆ. ಮೀನು ಮಾರಾಟಕ್ಕೆ ವಾಹನ, ಉತ್ತಮ ಬೋಟ್​ನ ಅಗತ್ಯತೆ ಇದೆ. ಇದರೊಟ್ಟಿಗೆ ಜನಪ್ರತಿನಿಧಿಗಳು, ಸರ್ಕಾರದ ಬೆಂಬಲ ಸಿಕ್ಕಲ್ಲಿ ಸಂಘ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ. ಸ್ಥಳೀಯ ಜನಪ್ರತಿನಿಧಿಗಳು ಈ ಕಾರ್ಯಕ್ಕೆ ಸಾಥ್ ನೀಡುವರೇ ಕಾದು ನೋಡಬೇಕಿದೆ.

    ಜಿಲ್ಲೆಯಲ್ಲಿ ಮೀನುಗಾರಿಕೆ ಮಾಡುತ್ತಿರುವ ಹಳೇ ಸಂಘ ನಮ್ಮದು. ಸದಸ್ಯರು ಮೀನುಗಾರಿಕೆಗೆ ಉತ್ಸುಕರಿದ್ದರೂ ಸರ್ಕಾರದ ಬೆಂಬಲವಿಲ್ಲ. ಮೀನು ಮರಿ ತರಲು ಹೊಸಪೇಟೆಗೆ ತೆರಳಬೇಕು. ಕೆರೆ ಬಳಿ ಮೀನು ಮರಿ ಉತ್ಪಾದನೆ ಕೇಂದ್ರ, ಮಾರಾಟಕ್ಕೆ ವಾಹನ, ಇತರ ಸೌಲಭ್ಯ ನೀಡಿದರೆ ಅತಿ ಹೆಚ್ಚು ಮೀನು ಉತ್ಪಾದಿಸಬಹುದು.
    ಶಿವರಾಯಪ್ಪ ಕುಂಬಾರ ಮೀನುಗಾರರ ಸಂಘದ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts