More

    ಮತ್ತೆ ಮೂವರು ಆರೋಪಿಗಳ ಬಂಧನ

    ಹುಬ್ಬಳ್ಳಿ: ಇಲ್ಲಿನ ಮಂಟೂರ ರಸ್ತೆ ಅರಳಿಕಟ್ಟಿ ಕಾಲನಿಯಲ್ಲಿ ಶುಕ್ರವಾರ ನಡೆದ ಪೊಲೀಸರ ಮೇಲಿನ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹರ ಠಾಣೆ ಪೊಲೀಸರು ಸೋಮವಾರ ಮತ್ತೆ ಮೂವರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 19ಕ್ಕೆ ಏರಿದೆ.

    ಅರಳಿಕಟ್ಟಿ ಕಾಲನಿಯ ಅಬ್ದುಲ್ ಮಲ್ಲಿಕ್ ಬೇಪಾರಿ, ಅಯೂಬ ಬೇಪಾರಿ ಹಾಗೂ ಸಾದಿಕ ಬೇಪಾರಿ ಬಂಧಿತ ಆರೋಪಿಗಳು.

    ಕಲ್ಲು ತೂರಾಟದ ವೇಳೆ 50ಕ್ಕೂ ಹೆಚ್ಚು ಜನರಿದ್ದರು. ಈಗಾಗಲೇ 19 ಜನರನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ವಿಡಿಯೋ ದಾಖಲೆಗಳ ಮೂಲಕ ಆರೋಪಿಗಳ ಹೆಸರು, ವಿಳಾಸ ಪತ್ತೆ ಮಾಡಲಾಗಿದೆ. ಹಲವು ಆರೋಪಿಗಳು ಪೊಲೀಸರ ಭೀತಿಯಲ್ಲಿ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತರಾಗಿ ಪರಾರಿಯಾಗಿದ್ದಾರೆ. ಅರಳಿಕಟ್ಟಿ ಕಾಲನಿಯಲ್ಲಿ ಕೆಎಸ್​ಆರ್​ಪಿ ಹಾಗೂ ನಗರ ಸಶಸ್ತ್ರ ಮೀಸಲು ಪಡೆ ಭದ್ರತೆ ಮುಂದುವರಿದಿದೆ.

    ರೌಡಿ ದಾವಲಸಾಬ್ ಆಂಡ್ ಸನ್ಸ್ ಆಟಾಟೋಪ ?: ಅರಳಿಕಟ್ಟಿ ಕಾಲನಿಯಲ್ಲಿ ರೌಡಿಶೀಟರ್ ದಾವಲಸಾಬ್ ನದಾಫ್ ಆಂಡ್ ಸನ್ಸ್ ಆಟಾಟೋಪ ಹೆಚ್ಚಾಗಿದ್ದು, ಅವರೆಲ್ಲರೂ ಈ ಪ್ರಕರಣದ ಪ್ರಮುಖ ಆರೋಪಿ ಸ್ಥಾನದಲ್ಲಿದ್ದಾರೆ. ‘ನಾನು ಮಸೀದಿಯ ಮುತುವಲ್ಲಿಯಾಗಿದ್ದೇನೆ. ನನ್ನ ಮಾತನ್ನು ಎಲ್ಲರೂ ಕೇಳಬೇಕು’ ಎನ್ನುತ್ತ ದಾವಲಸಾಬ್ ಓಡಾಡುತ್ತಿದ್ದ. ಆತನ ಮಕ್ಕಳಾದ ಇಮ್ರಾನ್, ದಾವೂದ್ ಕೂಡ ರೌಡಿ ಚಟುವಟಿಕೆಯಲ್ಲಿ ತೊಡಗಿದ್ದು, ಇತ್ತೀಚೆಗಷ್ಟೇ ಜೈಲಿಗೆ ಹೋಗಿ ಬಂದಿದ್ದಾರೆ. ಪತ್ನಿ ಫಾತಿಮಾಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಅಪ್ಪ- ಮಕ್ಕಳ ಪತ್ತೆ ಕಾರ್ಯ ಚುರುಕುಗೊಂಡಿದೆ.

    ವಿಶೇಷ ತಂಡ ರಚನೆ: ಪೊಲೀಸರ ಮೇಲೆ ಕಲ್ಲು ತೂರಾಟ ಪ್ರಕರಣ ಭೇದಿಸಲು ಶಹರ ಠಾಣೆ ಇನ್ಸ್​ಪೆಕ್ಟರ್ ಎನ್.ಎಸ್. ಪಾಟೀಲ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಈಗಾಗಲೇ 19 ಜನರನ್ನು ಬಂಧಿಸಿರುವ ತಂಡ ಉಳಿದ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts