More

    ಮತದಾರರಿಗೆ ಭಾವನಾತ್ಮಕ ಅಸ್ತ್ರ ಬಿಟ್ಟ ಪರಮೇಶ್ವರ

    ವಿಜಯವಾಣಿ ಸುದ್ದಿಜಾಲ ಕೊರಟಗೆರೆ
    ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಡಾ.ಜಿ.ಪರಮೇಶ್ವರ ಸಹಸ್ರಾರು ಬೆಂಬಲಿಗರೊಂದಿಗೆ ಆಗಮಿಸಿ ಬುಧವಾರ ನಾಮಪತ್ರ ಸಲ್ಲಿಸಿದರು.
    ಸಿಎಂ ರೇಸ್‌ನಲ್ಲಿ ಗುರುತಿಸಿಕೊಂಡಿರುವ ಪರಮೇಶ್ವರ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶಿಸಲು ನಾಮಪತ್ರ ಸಲ್ಲಿಕೆ ಸಂದರ್ಭವನ್ನು ಬಳಸಿಕೊಂಡಿದ್ದು ಕ್ಷೇತ್ರದೆಲ್ಲೆಡೆಯಿಂದ ಸಾವಿರಾರು ಜನರನ್ನು ಸೇರಿಸಿದ್ದು ವಿಶೇಷ ಎನಿಸಿತು. ಜತೆಗೆ ಜಿಲ್ಲೆ, ರಾಜ್ಯದ ಹಲವೆಡೆಯಿಂದಲೂ ಜನರು ಆಗಮಿಸಿದ್ದರು. ಪಟ್ಟಣದ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೂ ನಡೆದ ರೋಡ್ ಶೋ ನಡುವೆ ಎಸ್‌ಎಸ್‌ಆರ್ ವೃತ್ತದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಪರಮೇಶ್ವರ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ಸೂಚನೆ ಇದೆ. ಈ ಬಾರಿ ಯಾರು ಮುಳುಗುತ್ತಾರೆ ಎಂಬುದು ಮೇ.13 ಗೊತ್ತಾಗಲಿದೆ ಎಂದು ಸಿಎಂಗೆ ಟಾಂಗ್ ಕೊಟ್ಟರು. ಅಲ್ಲದೆ ನನಗೆ ಉನ್ನತ ಹುದ್ದೆ ಸಿಗಲಿ ಎಂಬುದು ಅಭಿಮಾನಿಗಳ ಆಸೆ ಎಂದು ಪರಮೇಶ್ವರ ಹೇಳುವ ಮೂಲಕ ಸಿಎಂ ಅಭ್ಯರ್ಥಿ ರೇಸ್‌ನಲ್ಲಿದ್ದೇನೆ ಎಂದು ಪ್ರಚಾರದ ವೇಳೆ ಪುನರುಚ್ಚರಿಸಿ, ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುವಂತೆ ಮಾತನಾಡಿದರು.
    ಬಿಜೆಪಿ ಸರ್ಕಾರ ಸಾಮಾನ್ಯ ಜನರ ಜೀವನದ ಜತೆಯಲ್ಲಿ ಆಟವಾಡುತ್ತಿದ್ದು, ಅವರಿಗೆ ಪಾಠ ಕಲಿಸುವ ಪ್ರಜ್ಞಾವಂತಿಕೆ ಮತದಾರರಿಗಿದೆ ಎಂದರು. ಕೆಪಿಸಿಸಿ ಸದಸ್ಯ ಟಿ.ಡಿ ಪ್ರನಸ್ನಕುಮಾರ್, ಹೂಲೀಕುಂಟೆ ರುದ್ರಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋಡ್ಲಹಳ್ಳಿ ಅಶ್ವತ್ಥನಾರಾಯಣ, ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಪಪಂ ಸದಸ್ಯ ಎ.ಡಿ ಬಲರಾಮಯ್ಯ, ಕೆ.ಆರ್.ಓಬಳರಾಜು, ನಾಗರಾಜು, ಮುಖಂಡರಾದ ಕೆ.ಬಿ ಲೋಕೇಶ್, ಬಿಕ್ಕೆಗುಟ್ಟೆ ವೆಂಕಟೇಶ್, ವಾಲೆ ಚಂದ್ರಯ್ಯ, ಕೆ.ಎಲ್ ಆನಂದ್ ಸೇರಿ ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಇದ್ದರು.
    ಪರಮ್’ ಟೆಂಪಲ್ ರನ್!: ಶಾಸಕ ಡಾ.ಜಿ.ಪರಮೇಶ್ವರ ನಾಮಪತ್ರ ಸಲ್ಲಿಸುವ ಮುಂಚೆ ಕ್ಷೇತ್ರದ ಪ್ರಮುಖ ಮಠಗಳು, ದೇವಾಲಯಗಳಿಗೆ ತೆರಳಿ ಆಶೀರ್ವಾದ ಪಡೆದರು. ಸಿದ್ಧರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠ, ಎಲೆರಾಂಪುರದ ಕುಂಚಿಟಿಗ ಮಹಾಂಸ್ಥಾನ ಮಠ, ಕೋರಾ ಹೋಬಳಿಯ ಕಾರದ ಮಠ, ತಂನಹಳ್ಳಿಯ ಕಾಶಿ ಅನ್ನಪೂರ್ಣೇಶ್ವರಿ ಮಠ ಹಾಗೂ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಆಯಾ ಪೀಠಾಧ್ಯಕ್ಷರ ಅಶೀರ್ವಾದ ಪಡೆದರು. ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ಮತ್ತು ಕೊರಟಗೆರೆ ಪಟ್ಟಣದ ಉದ್ಭವ ಗಣಪತಿ ಕಟ್ಟೇಗಣಪತಿ ದೇವರಿಗೂ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts