More

    ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

    ಕಾರವಾರ: ರಸ್ತೆ ಮಾಡಿಕೊಡದ ಆಡಳಿತದ ವರ್ತನೆಯಿಂದ ಬೇಸತ್ತ ಜೊಯಿಡಾ ತಾಲೂಕಿನ ಉಳವಿ ಗ್ರಾಪಂ ವ್ಯಾಪ್ತಿಯ ನೇತುರ್ಗ, ಹೆಬ್ಬುಳ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಪಕ್ಕದ ಶಿವಪುರ ಗ್ರಾಮಸ್ಥರೂ ಈ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ.

    ಉಳವಿ ಗ್ರಾಪಂನ ಉಳವಿ ವಾರ್ಡ್​ಗೆ ಸೇರಿದ ನೇತುರ್ಗ, ಹೆಬ್ಬುಳ, ಗದ್ದೆಮನೆ, ಚಿಲುಮಿ ಮುಂತಾದ ಊರುಗಳಲ್ಲಿ ಅಂದಾಜು 250 ಜನಸಂಖ್ಯೆ ಇದ್ದು, ಮೂರು ಸದಸ್ಯ ಸ್ಥಾನಗಳಿವೆ. ಶಿವಪುರ ಗ್ರಾಮದಲ್ಲಿ 300ರಷ್ಟು ಜನಸಂಖ್ಯೆಯಿದ್ದು, ಒಂದು ಸದಸ್ಯ ಸ್ಥಾನವಿದೆ.

    ಸಮಸ್ಯೆ ಏನು?: ಉಳವಿಯಿಂದ ಶಿವಪುರಕ್ಕೆ 11 ಕಿ.ಮೀ. ರಸ್ತೆ ನಿರ್ವಣಕ್ಕೆ 2015ರಲ್ಲಿ 12 ಕೋಟಿ ರೂ. ಮಂಜೂರಾಗಿತ್ತು. ಟೆಂಡರ್ ಆಗಿ ಕಾಮಗಾರಿಯೂ ಪ್ರಾರಂಭವಾಗಿತ್ತು. 2.5 ಕಿ.ಮೀ. ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಕೆಲವೆಡೆ ಡಾಂಬರು ಹಾಕಲಾಗಿದೆ. ಆದರೆ, ಈ ಪ್ರದೇಶ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಗೆ ಬರುತ್ತದೆ ಎಂಬ ಕಾರಣಕ್ಕೆ ಕಾಮಗಾರಿಗೆ ಅರಣ್ಯ ಇಲಾಖೆ ತಡೆ ಒಡ್ಡಿದೆ. ಗ್ರಾಮಸ್ಥರ ಓಡಾಟಕ್ಕೆ ತೊಂದರೆ ತಲೆದೋರಿದೆ.

    ಕಚ್ಚಾ ರಸ್ತೆಯಲ್ಲಿ ವಾಹನಗಳು ಬರುವುದಿಲ್ಲ. ಆರೋಗ್ಯ ಸಮಸ್ಯೆ ಎದುರಾದರೆ ಕಂಬಳಿಯಲ್ಲಿ ಕಟ್ಟಿ ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯುವ ಪರಿಸ್ಥಿತಿ ಇದೆ. ಶಾಲೆ, ಅಂಗನವಾಡಿಗೆ ತೆರಳಲೂ ಸಮಸ್ಯೆ ಇದೆ. ಇದರಿಂದ ಗ್ರಾಮಸ್ಥರು ಬೇಸತ್ತಿದ್ದಾರೆ.

    ಹಿಂದೆಯೂ ಬಹಿಷ್ಕಾರ: 2015ರಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲೂ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡಿದ್ದರು. ನಂತರ ರಸ್ತೆ ಮಾಡಿಕೊಡುವ ಭರವಸೆಯನ್ನು ಆಡಳಿತ ನೀಡಿತ್ತು. ರಸ್ತೆಗೆ ಹಣವೇನೋ ಮಂಜೂರಾಯಿತು ಆದರೆ, ಕಾಮಗಾರಿ ಮಾತ್ರ ಇದುವರೆಗೂ ನಡೆದಿಲ್ಲ.

    ಮತಗಟ್ಟೆಯೂ ಇಲ್ಲ: ಗ್ರಾಮದ ರಸ್ತೆ ಸಮರ್ಪಕವಾಗಿಲ್ಲ. ಮತದಾನಕ್ಕೆ ಏಳೆಂಟು ಕಿ.ಮೀ. ನಡೆದು ಉಳವಿಗೆ ತೆರಳಬೇಕಿದೆ. ಗ್ರಾಮದಲ್ಲೇ ಒಂದು ಮತಗಟ್ಟೆ ತೆರೆಯುವಂತೆ ಗ್ರಾಮಸ್ಥರು ಕಾರವಾರ ಉಪವಿಭಾಗಾಧಿಕಾರಿಗೆ ಮನವಿ ಮಾಡಿದ್ದಾರೆ. ಗ್ರಾಮಸ್ಥರ ಅಹವಾಲು ಈಡೇರಿಸುವುದಾಗಿ ಉಪವಿಭಾಗಾಧಿಕಾರಿ ಭರವಸೆ ನೀಡಿದ್ದಾರೆ. ಆದರೆ, ಮತಗಟ್ಟೆ ತೆರೆಯುವ ಬಗ್ಗೆಯೂ ಯಾವುದೇ ಖಚಿತ ಮಾಹಿತಿ ತಮಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

    ಕಚ್ಚಾ ರಸ್ತೆಯಲ್ಲಿ ಸಂಚರಿಸುವಾಗ ಅಪಘಾತಗಳು ಸಂಭವಿಸಿವೆ. ಪಕ್ಕಾ ರಸ್ತೆ ಮಾಡಿಕೊಡುವಂತೆ ಎರಡು ಬಾರಿ ತಹಸೀಲ್ದಾರರಿಗೆ ಮನವಿ ಮಾಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ.
    | ವಾಸುದೇವ ಗೌಡ ಶಿವಪುರ ಗ್ರಾಮಸ್ಥ

    ಗ್ರಾಮದಲ್ಲಿ ಮೂಲಸೌಕರ್ಯ ಇರದ್ದರಿಂದ ನಾವು ಬೇಸತ್ತಿದ್ದೇವೆ. ಇದರಿಂದ ಮತದಾನ ಬಹಿಷ್ಕಾರ ಮಾಡಲು ಮುಂದಾಗಿದ್ದೇವೆ.
    | ವೆಂಕಣ್ಣ ಗೌಡ ಚಿಲುಮಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts