More

    ಮತದಾನಕ್ಕೆ ತಾಲೂಕಾಡಳಿತದಿಂದ ಸಕಲ ಸಿದ್ಧತೆ

    ನರಗುಂದ: ತಾಲೂಕಿನ 13 ಗ್ರಾಮ ಪಂಚಾಯಿತಿ ವ್ಯಾಪ್ತಿಯ 166 ಸದಸ್ಯ ಸ್ಥಾನಗಳ ಪೈಕಿ ಈಗಾಗಲೇ 6 ಸದಸ್ಯ ಸ್ಥಾನಗಳು ಅವಿರೋಧ ಆಯ್ಕೆಯಾಗಿವೆ. ಇನ್ನುಳಿದ 160 ಸದಸ್ಯ ಸ್ಥಾನಗಳಿಗೆ ಡಿ. 27ರಂದು ನಡೆಯುವ ಎರಡನೇ ಹಂತದ ಮತದಾನಕ್ಕೆ ತಾಲೂಕಾಡಳಿತದಿಂದ ಎಲ್ಲ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಎ.ಎಚ್. ಮಹೇಂದ್ರ ತಿಳಿಸಿದರು.

    ಗ್ರಾಪಂ ಚುನಾವಣೆ ಹಿನ್ನೆಲೆ ತಾಲೂಕಿನ ಬೆನಕನಕೊಪ್ಪ ಗ್ರಾಪಂ ವ್ಯಾಪ್ತಿಯ ಮತಗಟ್ಟೆಗಳಿಗೆ ಶುಕ್ರವಾರ ಭೇಟಿ ನೀಡಿ, ಮತಗಟ್ಟೆಗಳಲ್ಲಿ ಕಲ್ಪಿಸಿರುವ ವಿವಿಧ ಮೂಲಸೌಕರ್ಯ ಪರಿಶೀಲಿಸಿ ಅವರು ಮಾತನಾಡಿದರು.

    ಡಿ. 11ರಿಂದ ಡಿ. 16ರವರೆಗೆ 545 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಕಣಕೀಕೊಪ್ಪ ಗ್ರಾಪಂ ವ್ಯಾಪ್ತಿಯ ಗುರ್ಲಕಟ್ಟಿ ಗ್ರಾಮದ 1, ಸಿದ್ಧಾಪುರ ಗ್ರಾಮದ ಎಲ್ಲ ನಾಲ್ಕೂ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ. ರಡ್ಡೇರನಾಗನೂರ ಗ್ರಾಮದ 1 ಸ್ಥಾನ ಸೇರಿ ಒಟ್ಟು 6 ಸದಸ್ಯ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ. ಇನ್ನುಳಿದ 160 ಸದಸ್ಯ ಸ್ಥಾನಗಳ ಆಯ್ಕೆಗೆ 377 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. 13 ಗ್ರಾಪಂಗಳಲ್ಲಿ 57 ಮೂಲ, 25 ಹೆಚ್ಚುವರಿ ಸೇರಿ ಒಟ್ಟು 84 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 17 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ತಿಳಿಸಿದರು.

    ಪ್ರತಿ ಮತಗಟ್ಟೆಗೆ 1 ಪಿಆರ್​ಒ, 1 ಎಪಿಆರ್​ಒ, 2 ಪಿಒ ಸೇರಿ 13 ಪಂಚಾಯಿತಿಗೆ ಸಂಬಂಧಿಸಿ 84 ಪಿಆರ್​ಒ, 84 ಎಪಿಆರ್​ಒ, 196 ಪಿಒ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಚುನಾವಣೆ ಕರ್ತವ್ಯಕ್ಕೆ ನೇಮಿಸಲಾಗಿದೆ. 26,416 ಪುರುಷರು, 25,188 ಮಹಿಳೆಯರು ಸೇರಿ ಒಟು 51,604 ಮತದಾರರು ಮತದಾನಕ್ಕೆ ಅರ್ಹರಾಗಿದ್ದಾರೆ. 360 ಯುವ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ ಎಂದು ತಿಳಿಸಿದರು.

    ಗ್ರಾಪಂ ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ತಾಲೂಕಿನ ಕೊಣ್ಣೂರ, ಶಿರೋಳ, ಹದ್ಲಿ, ವಾಸನ ಸೇರಿ ಒಟ್ಟು 17 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯಲ್ಲಿ ಈಗಾಗಲೇ ಪೊಲೀಸ್ ಸಿಬ್ಬಂದಿಯಿಂದ ಪಥ ಸಂಚಲನ ನಡೆಸಲಾಗಿದೆ. ಡಿ. 27 ರಂದು ನಡೆಯಲಿರುವ ಚುನಾವಣೆಯ ಬಂದೋಬಸ್ತ್​ಗೆ ಒಬ್ಬ ಡಿಎಸ್​ಪಿ, ಒಬ್ಬ ಸಿಪಿಐ, 4 ಪಿಎಸ್​ಐ, 6 ಎಎಸ್​ಐ, 35 ಹೆಡ್ ಕಾನ್ಸ್​ಟೇಬಲ್, 40 ಪೊಲೀಸ್ ಕಾನ್ಸ್​ಟೇಬಲ್, 35 ಗೃಹರಕ್ಷಕ ದಳ ಸಿಬ್ಬಂದಿ, 2 ಡಿಎಆರ್, 2 ಐಆರ್​ಬಿ ತುಕಡಿ ಹಾಗೂ ನಾಲ್ಕು ಮೊಬೈಲ್ ಸೆಕ್ಟೆರ್​ಗಳನ್ನು ರಚಿಸಲಾಗಿದೆ.

    | ಡಿ.ಬಿ. ಪಾಟೀಲ

    ಸಿಪಿಐ ನರಗುಂದ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts