More

    ಮತಗಟ್ಟೆ ಬದಲಾಗಿದಕ್ಕೆ ಆಕ್ರೋಶ

    ಕುಮಟಾ: ತಾಲೂಕಿನ ಮಠ ಗ್ರಾಮದ ನೂರಾರು ಮತದಾರರ ಮತಗಟ್ಟೆ ಬದಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಅರ್ಧ ಗಂಟೆ ಮತದಾನಕ್ಕೆ ವಿಳಂಬ ಹಾಗೂ ಕೆಲ ಸಮಯ ಗೊಂದಲ ಸೃಷ್ಟಿಯಾದ ಘಟನೆ ದೇವಗಿರಿ ಪಂಚಾಯಿತಿ ವ್ಯಾಪ್ತಿಯ ಧಾರೇಶ್ವರದಲ್ಲಿ ಮಂಗಳವಾರ ನಡೆದಿದೆ.

    ಹಿಂದೆ ಧಾರೇಶ್ವರ ಮತಗಟ್ಟೆಯಲ್ಲಿ ಮತ ಚಲಾಯಿಸುತ್ತಿದ್ದ ಮಠ ಗ್ರಾಮದ ಮತದಾರರ ಯಾದಿ ಕಡೇಕೋಡಿ- ಹರನೀರ ಮತಗಟ್ಟೆ ಯಾದಿಯಲ್ಲಿ ಬಂದಿರುವುದೇ ಗೊಂದಲಕ್ಕೆ ಕಾರಣವಾಯಿತು. ಹಿಂದಿನ 2015ರ ಪಂಚಾಯಿತಿ ಚುನಾವಣೆಯಲ್ಲಿ ಮಠ ವಾರ್ಡ್​ನಲ್ಲಿ 4 ಸ್ಥಾನಗಳು ಹಾಗೂ ಕಡೇಕೋಡಿ- ಹರನೀರ ವಾರ್ಡ್​ನಲ್ಲಿ 2 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಬಾರಿಯೂ ಅದೇ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಆದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಮಠ ವ್ಯಾಪ್ತಿಯ ಹಲವು ಮತದಾರರ ಹೆಸರು ಕಡೇಕೋಡಿ- ಹರನೀರ ಮತಗಟ್ಟೆಗಳಲ್ಲಿ ಸೇರ್ಪಡೆಯಾಗಿತ್ತು. ಆದರೆ, ಪಂಚಾಯಿತಿ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ಮತಗಟ್ಟೆಗಳಲ್ಲಿ ಬದಲಾವಣೆ ಇಲ್ಲ ಎಂದು ಚುನಾವಣಾಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಮತಗಟ್ಟೆಗೆ ಬಂದ ವೇಳೆ ದೇವಗಿರಿ ಮತದಾರರಿಗೆ ಕಡೇಕೋಡಿ ಮತಗಟ್ಟೆಯಲ್ಲಿ ಮತ ಚಲಾಯಿಸುವಂತೆ ಸೂಚಿಸಿದ್ದಾರೆ. ಮತದಾರರಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ಕೂಡಲೆ ಇದನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಕಾನೂನು ರೀತಿ ಹೋರಾಟ ನಡೆಸುತ್ತೇವೆ ಎಂದು ಕುಮಾರ ಎಸ್. ಭಟ್, ನಾಗಪ್ಪ ಶಿವಪ್ಪ ಹರಿಕಂತ, ಲಲಿತಾ ವೆಂಕಟೇಶ ರೇವಣಕರ, ವೀಣಾ ದೇವರಾಯ ದುರ್ಗೆಕರ, ವನಿತಾ ಉದಯ ಹರಿಕಾಂತ, ಮಮತಾ ನಾಗೇಶ ನಾಯ್ಕ, ಸೋನಲ್ ಸಂದೇಶ ದೇಶಭಂಡಾರಿ, ವಿನಾಯಕ ಕೃಷ್ಣ ನಾಯ್ಕ, ವೆಂಕಟೇಶ ಗೋಪಾಲ ಹರಿಕಾಂತ, ಭಾಸ್ಕರ ನಾಗಪ್ಪ ಹರಿಕಾಂತ, ವಿಶ್ವನಾಥ ಮಾಸ್ತಿ ಹರಿಕಾಂತ, ನಾಗೇಶ ನಾರಾಯಣ ಗೌಡ, ಈಶ್ವರ ನಾರಾಯಣ ಹರಿಕಾಂತ, ಕೇಶವ ಈಶ್ವರ ಅಂಬಿಗ ಇತರರು ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

    ಮತದಾರರ ಸಮಸ್ಯೆ ಆಲಿಸಿದ ತಹಸೀಲ್ದಾರ್ ಬಿ.ಎಸ್. ಕಡಕಭಾವಿ, ಮತದಾರರ ಪಟ್ಟಿ ಕುರಿತು 2 ತಿಂಗಳ ಮೊದಲೇ ಯಾದಿ ಸಿದ್ಧಪಡಿಸಿ ಪ್ರಕಟಿಸಲಾಗಿದೆ. ಎಲ್ಲ ಸಂದರ್ಭದಲ್ಲೂ ಆಕ್ಷೇಪಣೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈಗ ಮತದಾನದ ದಿನ ಬದಲಾವಣೆ ಬಯಸಿದರೆ ಅದು ಅಸಾಧ್ಯ. ನಿಮ್ಮ ಮನವಿಯನ್ನು ಈಗ ಈಡೇರಿಸಲಾಗದು. ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದರು. ಬಳಿಕ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಂದುವರೆಯಿತು. ಮತಗಟ್ಟೆಗೆ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts