More

    ಮತಗಟ್ಟೆವಾರು ಆರೋಗ್ಯ ಸಮೀಕ್ಷೆ ನಡೆಸಿ

    ಕಾರವಾರ: ಜಿಲ್ಲೆಯಲ್ಲಿ ಆರೋಗ್ಯ ಸಮೀಕ್ಷಾ ಕಾರ್ಯವನ್ನು ಚುನಾವಣೆ ಆಯೋಗದಿಂದ ನೇಮಕಗೊಂಡ ಜಿಲ್ಲೆಯ ಎಲ್ಲ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್​ಒ) ಶಿಸ್ತುಬದ್ಧವಾಗಿ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರು ಸೂಚಿಸಿದರು.

    ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು ಹಾಗೂ ತಾಲೂಕು ವೈದ್ಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

    ಚುನಾವಣೆ ಸಂದರ್ಭದಲ್ಲಿ ಬೂತ್ ಮಟ್ಟದಲ್ಲಿ ಸಮೀಕ್ಷೆ ಕೈಗೊಂಡಂತೆ ಕೊವಿಡ್-19 ಸನ್ನಿವೇಶದಲ್ಲೂ ಬಿಎಲ್​ಒಗಳು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರ ಯಾದಿಯನ್ನು ಇಟ್ಟುಕೊಪಂಡು ಸಮೀಕ್ಷೆ ನಡೆಸಿದರೆ, ಯಾವುದೇ ಮನೆ ಬಿಟ್ಟು ಹೊಗದಂತೆ ಆರೋಗ್ಯ ಸಮೀಕ್ಷೆಯನ್ನು ಮಾಡಬಹುದಾಗಿದ್ದು, ತಹಸೀಲ್ದಾರರು ಇದರ ಜವಾಬ್ದಾರಿ ಹೊತ್ತು ಕಾರ್ಯ ನಿರ್ವಹಿಸಿ ಎಂದು ಹೇಳಿದರು.

    ಈ ಆರೋಗ್ಯ ಸಮೀಕ್ಷೆ ವರದಿಯನ್ನು ವಿಳಬಂಬವಾಗದಂತೆ ಶಿಸ್ತುಬದ್ದವಾಗಿ ಸಲ್ಲಿಸಿ. ಆಶಾ ಕಾರ್ಯಕರ್ತೆಯರಿಗೆ ವಾರದಲ್ಲಿ ಎರಡು ಬಾರಿ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಮಾಹಿತಿ ಸಂಗ್ರಹಿಸಲು ಈಗಾಗಲೇ ಸೂಚಿಸಿದೆ. ಔಷಧ ಅಂಗಡಿಗಳಲ್ಲಿ ಜ್ವರ ಹಾಗೂ ಯಾವ ಕಾಯಿಲೆಗೆ ಯಾವ ಔಷಧ ಎಷ್ಟು ಮಾರಾಟವಾಗುತ್ತಿದೆ ಎಂಬುದರ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಇದರಿಂದ ಬಚ್ಚಿಟ್ಟಂತಹ ಆರೋಗ್ಯ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಸಮುದಾಯವನ್ನು ಒಳಗೊಂಡು ಕಾರ್ಯನಿರ್ವಹಿಸಿದಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸಬಹುದಾಗಿರುತ್ತದೆ ಎಂದರು.

    ಮೇ 3 ರ ನಂತರ ಗ್ರಾಮಗಳಲ್ಲಿ ಕಾವಲು ಸಮಿತಿ ರಚಿಸಲಾಗುವುದು ಇದರಿಂದ ಗ್ರಾಮೀಣ ಪ್ರದೇಶಗಳಿಗೆ ಆಗಮಿಸಿದವರ ಮಾಹಿತಿ ಸಿಗಲಿದೆ ಅಲ್ಲದೇ, ಜಿಲ್ಲೆಯಿಂದ ಹೊರ ಹೊಗುವ ಮತ್ತು ಒಳ ಬರುವ ಜನರ ಸಮೀಕ್ಷೆ ಕೂಡ ನಡೆಸಬೇಕಾಗುತ್ತದೆ ಎಂದರು.

    ಜಿಪಂ ಸಿಇಒ ಎಂ.ರೋಷನ್ ಅವರು ಮಾತನಾಡಿ, ಭಟ್ಕಳ ಸೇರಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬಯೋಮೇಡಿಕಲ್ ತಾಜ್ಯ ವಿಲೇವಾರಿ ಮಾಡಿದಂತೆ, ಬಳಸಿದ ಮಾಸ್ಕ್​ಗಳನ್ನು ಕೂಡ ವಿಲೇವಾರಿ ಮಾಡಬೇಕು. ಹೋಮ್ ಕ್ವಾರಂಟೈನ್ ಮಾಡಿದ ಮನೆಗಳಿಗೆ ಹಳದಿ ಬಣ್ಣದ ಚೀಲಗಳನ್ನು ನೀಡಿ ಆ ಚೀಲಗಳಲ್ಲೇ ಮಾಸ್ಕ್​ಗಳನ್ನು ಹಾಕುವಂತೆ ತಿಳಿಸಿ ಜಾಗರೂಕತೆಯಿಂದ ವಿಲೇವಾರಿ ಮಾಡಬೇಕು ಎಂದರು.

    ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದರೆ ಅಂತಹ ಆಸ್ಪತ್ರೆ ಸಿಬ್ಬಂಧಿಗಳಿಗೆ ಜಿಲ್ಲಾಡಳಿತದಿಂದ ಒಂದು ಬಾರಿಗೆ ಎನ್-95 ಮಾಸ್ಕ್ ಉಚಿತವಾಗಿ ನೀಡಲಾಗುವುದು ಈ ನಿಟ್ಟಿನಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳು ಆರೋಗ್ಯ ಸೇವೆ ನೀಡಲು ಮುಂದಾಗಬೇಕು ಎಂದು ತಿಳಿಸಿದರು.

    ಕಾರವಾರ ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ.ಎನ್. ಅಶೋಕಕುಮಾರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ವಿನೋದ ಭೂತೆ, ತಹಸೀಲ್ದಾರ್ ಆರ್.ವಿ.ಕಟ್ಟಿ, ತಾಲೂಕು ವೈದ್ಯಾಧಿಕಾರಿ ಡಾ. ಸೂರಜಾ ನಾಯಕ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts