More

    ಮತಗಟ್ಟೆಗಳಲ್ಲಿರಲಿ ಮೂಲಸೌಕರ್ಯ

    ಚಿತ್ರದುರ್ಗ: ಲೋಕಸಭಾ ಚುನಾವಣೆ ಸಂಬಂಧ ಎಲ್ಲ ಮತಗಟ್ಟೆಗಳಲ್ಲೂ ಮೂಲಸೌಕರ್ಯ ಇರುವಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಚುನಾವಣೆ ಅಂಗವಾಗಿ ಜಿಲ್ಲಾಮಟ್ಟದ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

    ಕುಡಿಯುವ ನೀರು, ಶೌಚಗೃಹ, ವಿದ್ಯುತ್, ಅಂಗವಿಕಲರಿಗೆ ರ್ಯಾಂಪ್‌ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಎಲ್ಲಿಯೂ ತೊಂದರೆ ಉಂಟಾಗದಂತೆ ಎಚ್ಚರವಹಿಸಬೇಕು. ಅದಕ್ಕಾಗಿ ತಹಸೀಲ್ದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ವರದಿ ಸಲ್ಲಿಸಿ ಎಂದು ತಾಕೀತು ಮಾಡಿದರು.

    ಎಲ್ಲ ಸ್ಥಳೀಯ ಸಂಸ್ಥೆ, ಗ್ರಾಪಂಗಳಲ್ಲೂ ಚುನಾವಣೆ ಪ್ರಚಾರ ಕಾರ್ಯಕ್ಕೆ ಸ್ಥಳ ಗುರುತಿಸಿ, ಅಧಿಸೂಚನೆ ಹೊರಡಿಸಬೇಕು. ನಿಗದಿತ ಸ್ಥಳದಲ್ಲೇ ಫ್ಲಕ್ಸ್, ಬಂಟಿಂಗ್ಸ್ ಪ್ರದರ್ಶಿಸಲು ಅವಕಾಶ ನೀಡಬೇಕು. ಇದಕ್ಕೆ ಬಾಡಿಗೆಯೊಂದಿಗೆ ಪರವಾನಿಗೆ ನೀಡಬೇಕು. ಯಾವುದೇ ಧಾರ್ಮಿಕ ಕೇಂದ್ರ, ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ಕಟ್ಟಡಗಳಲ್ಲಿ ಅನುಮತಿ ನೀಡಬಾರದು ಎಂದರು.

    ಜಿಲ್ಲೆಯ ಗ್ರಾಮೀಣ ಭಾಗಗಳಿಗಿಂತ ನಗರ ಪ್ರದೇಶಗಳಲ್ಲಿ ಕಳೆದ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಜಿಲ್ಲಾ ಸ್ವೀಪ್ ಸಮಿತಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

    ನೀತಿ ಸಂಹಿತೆ ಪಾಲಿಸಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಗರಿಷ್ಠ 95 ಲಕ್ಷ ರೂ. ವೆಚ್ಚ ನಿಗದಿಪಡಿಸಲಾಗಿದೆ. ಮೀರಿದಲ್ಲಿ, ಅಭ್ಯರ್ಥಿತನ ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ರಾಜಕೀಯ ಪಕ್ಷ, ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಬೇಕು. ಖರ್ಚು ವೆಚ್ಚಗಳ ನಿಖರ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

    ಗೆದ್ದ ಅಭ್ಯರ್ಥಿ ನಿಗದಿತ ಕಾಲಮಿತಿಯಲ್ಲಿ ವೆಚ್ಚದ ಲೆಕ್ಕ ನೀಡದಿದ್ದರೆ, ಸದಸ್ಯತ್ವದಿಂದಲೇ ಅನರ್ಹಗೊಳ್ಳುವ ಸಂಭವವಿರುತ್ತದೆ. ಧಾರ್ಮಿಕ ಕೇಂದ್ರ, ಜಾತ್ರೆ, ಉತ್ಸವ ಹಾಗೂ ನಿಗದಿತವಲ್ಲದ ಸ್ಥಳಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಬಾರದು. ಉಲ್ಲಂಘನೆಯಾಗದಂತೆ ನಿಗಾವಹಿಸಬೇಕು. ಮಕ್ಕಳನ್ನು ಪ್ರಚಾರಕ್ಕಾಗಿ ಬಳಸಬಾರದು. ಅಕ್ರಮ ಕಂಡುಬಂದಲ್ಲಿ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ಮಾತನಾಡಿ, ಚುನಾವಣೆ ಸಂಬಂಧ ಈವರೆಗೆ ಜಿಲ್ಲೆಯಲ್ಲಿ 600 ಜನರ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಎಸಿ, ತಾಲೂಕು ದಂಡಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು. ಗಡಿಪಾರು ಅಗತ್ಯವಿದ್ದಲ್ಲಿ ಆದೇಶಿಸಬೇಕು ಎಂದರು.

    ಈಗಾಗಲೇ ಅಂತರಾಜ್ಯ ಗಡಿಗಳಲ್ಲಿ ಪೊಲೀಸ್ ತಪಾಸಣೆ ಕೇಂದ್ರ ಸ್ಥಾಪಿಸಲಾಗಿದೆ. ನೀತಿ ಸಂಹಿತೆ ಜಾರಿ ಬಳಿಕ ಅಂತರ ಇಲಾಖೆ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗುವುದು ಎಂದು ಮಾಹಿತಿ ನೀಡಿದರು.

    ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಿ.ಆರ್.ಮಧು, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಜಿಲ್ಲಾ ಮಾಸ್ಟರ್ ತರಬೇತುದಾರ ಎಸ್.ನಾಗಭೂಷಣ್, ವಿವಿಧ ಪಕ್ಷದ ಮುಖಂಡರಾದ ನರೇಂದ್ರಹೊನ್ನಾಳ್, ಗೋಪಾಲಸ್ವಾಮಿ ನಾಯಕ, ಡಿ.ಎನ್.ಮೈಲಾರಪ್ಪ, ಸಿ.ಜೆ.ನಾಸಿರುದ್ದೀನ್, ಗೌಸ್‌ಪೀರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts