More

    ಮಣ್ಣು ಸವಕಳಿ ಪರಿಹಾರ ಮರೀಚಿಕೆ

    ಗಿರೀಶ ದೇಶಪಾಂಡೆ ಹಾನಗಲ್ಲ

    2019ರ ಆಗಸ್ಟ್, ಸೆಪ್ಟೆಂಬರ್​ನಲ್ಲಿ ಸುರಿದ ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಗೀಡಾದ ಜಮೀನಿಗೆ ಈವರೆಗೂ ಪರಿಹಾರ ನೀಡದೇ ಇರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವಂತಾಗಿದೆ.

    ಕಳೆದ ವರ್ಷದ ಮುಂಗಾರಿನಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಹೊಲದಲ್ಲಿನ ಫಸಲು ನಾಶವಾಗಿತ್ತು. ಇದರೊಂದಿಗೆ ತಾಲೂಕಿನಲ್ಲಿ ಅಲ್ಲಲ್ಲಿ ಕೆರೆ-ಕಟ್ಟೆಗಳು, ಧರ್ವ ಕಾಲುವೆ ಒಡೆದು ಹೋಗಿದ್ದರಿಂದ ನೀರು ಹೊಲಗಳಿಗೆ ನುಗ್ಗಿ ಬೆಳೆಗಳ ಮೇಲೆ ಮಣ್ಣಿನ ರಾಶಿಯೇ ಹರಡಿತ್ತು. ಫಲವತ್ತಾದ ಮಣ್ಣು ಹರಿದು ಹೋಗಿ ಕಲ್ಲುಗಳ ರಾಶಿಗಳು ಹೊಲದ ತುಂಬೆಲ್ಲ ಹರಡಿಕೊಂಡ ಪರಿಣಾಮ ರೈತರು ಅಪಾರ ನಷ್ಟ ಅನುಭವಿಸಿದ್ದರು. ಇದನ್ನು ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಎರಡು ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು, ಹಾನಿಯ ಪ್ರಮಾಣ ನಿರ್ಧರಿಸಿದ್ದರು. ಹೊಲವನ್ನು ಮತ್ತೆ ಮೊದಲಿನಂತೆ ಸರಿಪಡಿಸಿಕೊಳ್ಳಲು ತಗುಲಬಹುದಾದ ವೆಚ್ಚದ ವಿವರಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಸರ್ಕಾರವೂ ಇದಕ್ಕೆ ಸಮ್ಮತಿಸಿ, ಪ್ರತ್ಯೇಕ ಪರಿಹಾರ ನೀಡುವುದಾಗಿ ಭರವಸೆ ನೀಡಿತ್ತು. ಸರ್ಕಾರದ ಪರಿಹಾರ ನಂಬಿ ರೈತರು ಜಮೀನನ್ನು ಸಮತಟ್ಟು ಮಾಡಿಸಿ, ಕಲ್ಲು, ಮಣ್ಣುಗಳನ್ನು ಸಾಗಿಸಲು ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ, ಸರ್ಕಾರದ ಪರಿಹಾರದ ಭರವಸೆ ಮಾತ್ರ ಹಾಗೆಯೇ ಉಳಿದಿದೆ.

    ಹಾನಗಲ್ಲ ತಾಲೂಕಿನ ಮೂರು ಹೋಬಳಿಗಳಲ್ಲಿ ಒಟ್ಟು 450ಕ್ಕೂ ಅಧಿಕ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಮಣ್ಣು ಹರಿದು ಬಂದು ಬೆಳೆ ಮುಚ್ಚಿ ಹೋಗಿರುವ ಮತ್ತು ಹೊಲದಲ್ಲಿನ ಮಣ್ಣು ಕೊಚ್ಚಿ ಹೋಗಿರುವ ಸಮಸ್ಯೆಯ ಅರ್ಜಿಗಳು ಇದರಲ್ಲಿವೆ. ಕೆಲವು ರೈತರ ಬ್ಯಾಂಕ್ ಖಾತೆಗಳು ಎನ್​ಪಿಸಿಐ ಲಿಂಕ್ ಇಲ್ಲದೆ ಇರುವುದರಿಂದ ಪರಿಹಾರ ಜಮಾ ಆಗಿಲ್ಲ ಎನ್ನಲಾಗಿದೆ. ಇದನ್ನು ಸರಿಪಡಿಸಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸುವಂತೆ ಹಲವು ಬಾರಿ ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ರೈತರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭೂಮಿ ಕೊಚ್ಚಿ ಹೋಗಿರುವ ಪ್ರಕರಣಗಳ ತಾಲೂಕಿನ ನೂರಾರು ರೈತರಿಗೆ ಪರಿಹಾರ ಇದುವರೆಗೂ ಜಮಾ ಆಗಿಲ್ಲ.

    ಕಾನೂನಿನಲ್ಲಿ ನೆರವಿಗೆ ಅವಕಾಶ: ಅತಿವೃಷ್ಟಿ ಹಾಗೂ ಪ್ರವಾಹದ ಸಂದರ್ಭದಲ್ಲಿ ಕೃಷಿ ಭೂಮಿಯಲ್ಲಿ ಆಗಬಹುದಾದ ಕೊರಕಲು, ಭೂ ಸವಕಳಿಯಂಥ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು, ಹೊಲ ಸಮತಟ್ಟುಗೊಳಿಸಲು ರೈತರಿಗೆ ಸರ್ಕಾರದಿಂದ ಅಗತ್ಯ ಪರಿಹಾರ ವಿತರಿಸಲು ಎನ್​ಡಿಆರ್​ಎಫ್ ಕಾನೂನಿನಲ್ಲಿ ಅವಕಾಶವಿದೆ. ಈ ಹಿನ್ನೆಲೆಯಲ್ಲಿಯೇ ಕಂದಾಯ ಕೃಷಿ ಇಲಾಖೆ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಕುರಿತು ಸಚಿವರು ಹಾಗೂ ಅಧಿಕಾರಿಗಳ ಸಭೆಯಲ್ಲಿ ರ್ಚಚಿಸಿ, ಪರಿಹಾರಕ್ಕೆ ಒತ್ತಾಯಿಸಿದಾಗ ಒಪ್ಪಿಗೆ ಸೂಚಿಸಿದ್ದರು ಎಂದು ರೈತ ಮುಖಂಡರು ಹೇಳುತ್ತಿದ್ದಾರೆ. ಆದರೂ, ಪರಿಹಾರ ಈವರೆಗೆ ಏಕೆ ಬಿಡುಗಡೆಗೊಂಡಿಲ್ಲ ಎಂಬುದಕ್ಕೆ ಸಂಬಂಧಿಸಿದ ಅಧಿಕಾರಿಗಳಿಂದ ಸಮಂಜಸ ಉತ್ತರ ದೊರಕುತ್ತಿಲ್ಲ.

    ಮಣ್ಣು ಸವಕಳಿ ಹಾಗೂ ಬೆಳೆಗಳ ಮೇಲೆ ಮಣ್ಣು ಮುಚ್ಚಿ ಬೆಳೆ ಹಾನಿಯಾದ ಪ್ರಕರಣಗಳನ್ನು ಕಳೆದ ಸೆಪ್ಟೆಂಬರ್​ನಲ್ಲಿಯೇ ಕೃಷಿ ಇಲಾಖೆ ಅಧಿಕಾರಿಗಳು ಡಿ-ಶಿಲ್ಟಿಂಗ್ ಸಾಫ್ಟವೇರ್​ನಲ್ಲಿ ಅಳವಡಿಸಿ, ಅಪ್ರೂವಲ್ ನೀಡಿದ್ದಾರೆ. ಕಳೆದ ವರ್ಷದ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಾದ ಅಕ್ರಮದ ಹಿನ್ನೆಲೆಯಲ್ಲಿ ಸರ್ಕಾರವು ರೈತರ ಪರಿಹಾರ ಪೋರ್ಟಲ್ ಅನ್ನು ಲಾಕ್ ಮಾಡಿದೆ. ಹೀಗಾಗಿ ಯಾವ ಪರಿಹಾರವನ್ನೂ ವಿತರಣೆ ಮಾಡಲಾಗಿಲ್ಲ ಎನ್ನಲಾಗುತ್ತಿದೆ. ಮಣ್ಣು ಸವಕಳಿ ಪ್ರಕರಣಕ್ಕೂ, ಬೆಳೆ ಹಾನಿ ಪರಿಹಾರ ವಿತರಣೆಯಲ್ಲಾದ ಅಕ್ರಮ ಪ್ರಕರಣಗಳಿಗೂ ಯಾವುದೇ ಸಂಬಂಧ ಕಲ್ಪಿಸಬಾರದು. ಹೊಲ ಸರಿಪಡಿಸಿಕೊಳ್ಳಲು ತಕ್ಷಣ ಪರಿಹಾರ ಬಿಡುಗಡೆಗೊಳಿಸಬೇಕು.

    | ಮರಿಗೌಡ ಪಾಟೀಲ, ರೈತ ಸಂಘದ ಅಧ್ಯಕ್ಷ ಹಾನಗಲ್ಲ

    ತಾಲೂಕಿನಲ್ಲಿ ಕಳೆದ ವರ್ಷದ ಅತಿವೃಷ್ಟಿಯಿಂದ ಹೊಲಗಳಿಗೆ ಹರಿದುಬಂದ ನೀರಿನೊಂದಿಗೆ ಕಲ್ಲು ಹಾಗೂ ಮಣ್ಣು ಹರಡಿಕೊಂಡಿರುವ ಬಗ್ಗೆ ಹಾನಗಲ್ಲ, ಬೊಮ್ಮನಹಳ್ಳಿ, ಅಕ್ಕಿಆಲೂರು ಹೋಬಳಿಗಳಲ್ಲಿ ಒಟ್ಟು 450ಕ್ಕೂ ಹೆಚ್ಚು ಅರ್ಜಿಗಳು ದಾಖಲಾಗಿವೆ. ಅವೆಲ್ಲವನ್ನೂ ಆನ್​ಲೈನ್ ಮೂಲಕ ನೋಂದಣಿ ಮಾಡಲಾಗಿದೆ. ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿ, ಸರ್ಕಾರದ ಗಮನ ಸೆಳೆಯಲಾಗಿತ್ತು. ಸರ್ಕಾರದ ಮಟ್ಟದಲ್ಲಿ ಇದು ತೀರ್ವನವಾಗಬೇಕಿದೆ. ರೈತರಿಗೆ ಪರಿಹಾರ ವಿತರಣೆ ಮಾಡುವಂತೆ ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ.

    | ದೇವೇಂದ್ರಪ್ಪ ಕಡ್ಲೇರ, ಸಹಾಯಕ ಕೃಷಿ ನಿರ್ದೇಶಕ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts