More

    ಮಣಿಪುರ ಹಿಂಸಾಚಾರಕ್ಕೆ ಬಿಎಸ್‌ಪಿ ಆಕ್ರೋಶ



    ಚಿತ್ರದುರ್ಗ: ಮಣಿಪುರದ ಹಿಂಸಾಚಾರ ಖಂಡಿಸಿ, ಕಾನೂನು ಕ್ರಮ ಕೈಗೊಂಡು ಶಾಂತಿ ನೆಲೆಸುವಂತೆ ಮಾಡಬೇಕೆಂದು ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಸಮಿತಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

    ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಆ ರಾಜ್ಯದಲ್ಲಿನ ಹಿಂಸಾಚಾರ ಹತೋಟಿಗೆ ತರಲಾಗದ ಮಣಿಪುರ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿದರು. ಕಾನೂನಾತ್ಮಕವಾಗಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ರಾಷ್ಟ್ರಪತಿ ಅವರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

    ಒಂದು ಕೋಮಿನ ಇಬ್ಬರು ಮಹಿಳೆಯರನ್ನು ನಡುಬೀದಿಯಲ್ಲಿ ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ, ಅತ್ಯಾಚಾರ ಸೇರಿ ವಿವಿಧ ರೀತಿಯ ಚಿತ್ರಹಿಂಸೆ ಮಾಡಿರುವ ಘಟನೆ ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿದೆ. ದೌರ್ಜನ್ಯ, ದುಷ್ಕೃತ್ಯಗಳು ಮುಂದುವರಿಯುತ್ತಲೇ ಇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮೀಸಲಾತಿ ಸಂಬಂಧ ಎರಡು ಕೋಮಿನ ನಡುವೆ ಉಂಟಾಗಿರುವ ಸಂಘರ್ಷ ತಾರಕಕ್ಕೇರಿದ್ದು, ಇದನ್ನು ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೇರೆ ರಾಜ್ಯಗಳಲ್ಲಿ ಅತ್ಯಾಚಾರ ನಡೆದಿಲ್ಲವೆ ಎಂದು ಅಲ್ಲಿನ ಮುಖ್ಯಮಂತ್ರಿ ಘಟನೆ ಸಮರ್ಥಿಸಿಕೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

    ಈ ಅಮಾನುಷ ಘಟನೆಯಲ್ಲಿ 200ಕ್ಕೂ ಹೆಚ್ಚು ದುಷ್ಕರ್ಮಿಗಳು ಭಾಗಿಯಾಗಿದ್ದು, ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಆ ರಾಜ್ಯದ ಸಾರ್ವಜನಿಕರ ಪ್ರಾಣ, ಆಸ್ತಿ ರಕ್ಷಣೆಗೆ ಮುಂದಾಗಬೇಕು. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕಾರಣ ಪ್ರಧಾನಿ, ಮುಖ್ಯಮಂತ್ರಿ ಇಬ್ಬರೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

    ಪಕ್ಷದ ಜಿಲ್ಲಾ ಸಂಯೋಜಕರಾದ ಕೆ.ಎನ್.ದೊಡ್ಡೆಟ್ಟೆಪ್ಪ, ಶಿವಮೂರ್ತಿ, ಜಿಲ್ಲಾಧ್ಯಕ್ಷ ಎನ್.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಹನುಮಂತರಾಯ, ಉಪಾಧ್ಯಕ್ಷ ರಾಮಸ್ವಾಮಿ, ಕಾರ್ಯದರ್ಶಿ ಶ್ರೀನಿವಾಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts