More

    ಮಣಿಪುರ ಘಟನೆ ವಿರೋಧಿಸಿ ಪ್ರತಿಭಟನೆ  -ತಪ್ಪಿತಸ್ಥರ ಬಂಧನಕ್ಕೆ ಎಐಎಂಎಸ್‌ಎಸ್ ಒತ್ತಾಯ 

    ದಾವಣಗೆರೆ: ಮಣಿಪುರ ಘಟನೆ ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯ ಜಿಲ್ಲಾ ಘಟಕಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
    ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು, ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ದೇಶದ ಜನರು ಈ ಘಟನೆ ಖಂಡಿಸಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ಪ್ರತಿಭಟಿಸಬೇಕು ಎಂದು ಆಗ್ರಹಿಸಿದರು.
    ಸಭೆ ಉದ್ದೇಶಿಸಿ ಮಾತನಾಡಿದ ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ಕೆ. ಭಾರತಿ, ಮಣಿಪುರದಲ್ಲಿ ಮಹಿಳೆಯರಿಬ್ಬರ ನಗ್ನ ಮೆರವಣಿಗೆ ನಡೆಸಿ ಸಾಮೂಹಿಕ ಅತ್ಯಾಚಾರ ಮಾಡಿರುವುದು, ರಕ್ಷಣೆಗೆ ಬಂದ ಸಂತ್ರಸ್ತೆಯ ಸಹೋದರನನ್ನು ಬರ್ಬರವಾಗಿ ಹತ್ಯೆಗೈದಿರುವುದು ಮಹಿಳೆಯರಲ್ಲದೆ ದೇಶದ ಜನರಿಗೂ ಕಳವಳಕಾರಿಯಾಗಿದೆ. ಅಲ್ಲಿನ ಕರಾಳ ಪರಿಸ್ಥಿತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಹೊಣೆ ಎಂದು ಟೀಕಿಸಿದರು.
    ಎಐಡಿವೈಒ ಜಿಲ್ಲಾ ಪ್ರಭಾರಿ ಪರಶುರಾಂ ಮಾತನಾಡಿ ಈ ಘಟನೆ ಸಮಾಜವೇ ತಲೆತಗ್ಗಿಸುವಂತದ್ದಾಗಿದೆ. ಮಹಿಳೆಯರಿಗೆ ಕನಿಷ್ಠ ಗೌರವ ನೀಡದೆ ಮೃಗೀಯ ವರ್ತನೆ ತೋರಿರುವುದು ಅಕ್ಷಮ್ಯ. ಸರ್ಕಾರಗಳು ಅಶ್ಲೀಲ ಸಿನಿಮಾ ಸಾಹಿತ್ಯಕ್ಕೆ ಕಡಿವಾಣ ಹಾಕಬೇಕು. ಆದರ್ಶ ವ್ಯಕ್ತಿಗಳ ಚರಿತ್ರೆಯನ್ನು ಮಕ್ಕಳಿಗೆ, ಯುವಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ಎಐಎಂಎಸ್‌ಎಸ್‌ನ ಮಮತಾ, ಸರಸ್ವತಿ, ಸುಷ್ಮಾ, ಸರಸ್ವತಿ ದುರ್ಗಾ, ಲಲಿತಮ್ಮ, ಸುಧಮ್ಮ , ಇಂದಿರಾ, ಎಐಡಿವೈಒನ ಅನಿಲ್‌ಕುಮಾರ, ಗುರು, ಮನು ಇತರರು ಪಾಲ್ಗೊಂಡಿದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts