More

    ಮಣಿಪುರ ಕೋಮುಗಲಭೆ ತಡೆಯಲು ಆಗ್ರಹ- ದಾವಣಗೆರೆಯಲ್ಲಿ ಎಸ್‌ಯುಸಿ(ಸಿ) ಪ್ರತಿಭಟನೆ

    ದಾವಣಗೆರೆ: ಮಣಿಪುರದಲ್ಲಿ ನಡೆಯುತ್ತಿರುವ ಕೋಮು ಗಲಭೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೋಮು ಸಂಘರ್ಷವನ್ನು ನಿಯಂತ್ರಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ನಗರದಲ್ಲಿ ಪ್ರತಿಭಟನೆ ನಡೆಸಿತು.
    ಮಹಾತ್ಮಗಾಂಧಿ ವೃತ್ತದಲ್ಲಿ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಸಮಿತಿ ಸದಸ್ಯೆ ಬಿ.ಆರ್. ಅಪರ್ಣಾ, ಕುಕ್ಕಿ ಮತ್ತು ಇತರೆ ಬುಡಕಟ್ಟು ಜನಾಂಗದ ಆಚರಣೆ, ಕಟ್ಟುಪಾಡುಗಳನ್ನು ಕಾಪಾಡುವುದಾಗಿ ಕೇಂದ್ರ ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ ಈ ಜನಾಂಗಗಳ ಬೆಳವಣಿಗೆಗೆ ಯಾವುದೇ ನಿಲುವು ತೆಗೆದುಕೊಳ್ಳದ್ದರಿಂದ ಅವರಲ್ಲಿ ಅಭದ್ರತೆ ಹೆಚ್ಚಾಗಿದೆ. ಇದು ಸೌಹಾರ್ದತೆ ಕದಡಿದಂತಾಗಿದೆ ಎಂದು ದೂರಿದರು.
    ವಿದೇಶ ಪ್ರವಾಸ ಕೈಗೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದು ರಾಜ್ಯ ಹೊತ್ತಿ ಉರಿಯುತ್ತಿರುವುದು ಕಾಣುತ್ತಿಲ್ಲವೇ. 1949ರಲ್ಲಿ ಭಾರತವನ್ನೇ ನಂಬಿ ಬಂದ ಮಣಿಪುರದ ಜನರ ವಿಶ್ವಾಸಕ್ಕೆ ಬರೆ ಹಾಕಿದಂತಾಗಿದೆ. ಅಲ್ಲಿನ ಸಾಮಾನ್ಯ ಜನರ ಜೀವಗಳನ್ನು ಉಳಿಸಲು ಹಾಗೂ ಶಾಂತಿಯ ಮರುಸ್ಥಾಪನೆಗೆ ತುರ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
    ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ ಮಾತನಾಡಿ ಮಣಿಪುರದಲ್ಲಿನ ಕೋಮುಗಲಭೆ ಕುರಿತು ಪ್ರಧಾನಿ ಮೌನ ತಾಳಿರುವುದು ಸರಿಯಲ್ಲ. ಸಾಮಾನ್ಯ ಜನರ ಜೀವನದೊಂದಿಗೆ ಸರ್ಕಾರ ಚೆಲ್ಲಾಟ ಆಡಬಾರದು ಎಂದರು.
    ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಷನ್ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ್ ಮಾತನಾಡಿ, ಜನಾಂಗೀಯ ಕಲಹ ತಡೆದು ಕೋಮ ಸೌಹಾರ್ದ ಕಾಪಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾದ ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ಸುಬ್ಬರಾಜು, ಮಂಜುನಾಥ ಕುಕ್ಕುವಾಡ, ಕೆ.ಭಾರತಿ, ಬನಶ್ರೀ, ಪರಶುರಾಮ, ಕಾವ್ಯಾ, ಪೂಜಾ ನಂದಿಹಳ್ಳಿ, ಮಮತಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts