More

    ಮಣಿಪುರದಲ್ಲಿ ಶಾಂತಿ ಮರು ಸ್ಥಾಪಿಸಿ

    ಹುಣಸೂರು: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಮತ್ತು ಪ್ರಗತಿಪರ ಸಂಘಟನೆಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.


    ಸಂವಿಧಾನ ವೃತ್ತದಲ್ಲಿ ಜಮಾವಣೆಗೊಂಡ ಸಂಘಟನೆಗಳ ಸದಸ್ಯರು ಮಣಿಪುರದಲ್ಲಿ ಶಾಂತಿ ನೆಲೆಸಲಿ, ರಾಷ್ಟ್ರಪತಿ ಆಳ್ವಿಕೆ ಜಾರಿಗೊಳ್ಳಲಿ, ಮಣಿಪುರದ ಸಂತ್ರಸ್ತರ ಜತೆ ನಾವಿದ್ದೇವೆ. ಬುಡಕಟ್ಟು ಜನರ ಪ್ರಾಣ, ಆಸ್ತಿ ಕಾಪಾಡದ ಸರ್ಕಾರಕ್ಕೆ ಧಿಕ್ಕಾರ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸಿದರು.


    ಈ ವೇಳೆ ಮಾತನಾಡಿದ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಅಧ್ಯಕ್ಷ ಮುದಾಸಿರ್ ಖಾನ್, ಮೂರು ತಿಂಗಳಿಂದಲೂ ಮಣಿಪುರ ಜನಾಂಗೀಯ ದ್ವೇಷದ ದಳ್ಳುರಿಯಲ್ಲಿ ಬೇಯುತ್ತಿದೆ. ಅಲ್ಲಿನ ಕುಕಿ ಬುಡಕಟ್ಟು ಸಮುದಾಯದ ಮೂವರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವುದು ಅಮಾನವೀಯ ಘಟನೆ. ಇಡೀ ಮನುಕುಲವೇ ತಲೆ ತಗ್ಗಿಸುವ ಕೃತ್ಯವಿದು. ಅಲ್ಲಿನ ಮಹಿಳೆಯರು ನೆಮ್ಮದಿಯಿಂದ ಬದುಕುವ ವ್ಯವಸ್ಥೆ ನಿರ್ಮಾಣ ಮಾಡಬೇಕಿದೆ. ಮಣಿಪುರದಲ್ಲಿ ಶಾಂತಿ ಮರು ಸ್ಥಾಪಿಸಬೇಕು. ಮಹಿಳೆಯರ ಘನತೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.


    ಸೌಹಾರ್ದ ಕರ್ನಾಟಕ ವೇದಿಕೆ ಅಧ್ಯಕ್ಷ ಜೆ.ಮಹದೇವ ಮಾತನಾಡಿ, ಜನಾಂಗೀಯ ದ್ವೇಷದ ಬೆಂಕಿ ಹತ್ತಿಸಿದಾಗ ಅದು ಪ್ರಜ್ವಲಿಸುವ ಹಿಂಸೆಯ ಅಂತಿಮ ಸ್ವರೂಪವೇ ಮಹಿಳೆಯರ ಮೇಲಿನ ಅತ್ಯಾಚಾರ. ಹೆಣ್ಣೊಬ್ಬಳು ಜನಾಂಗೀಯ ಪ್ರತಿನಿಧಿಯಾಗಿ ಕಾಣುವ ವಿಕೃತಿ ಇದು. ಇದಕ್ಕೆ ತಡೆಯೊಡ್ಡುವುದು ನಾಗರಿಕರ ಜವಾಬ್ದಾರಿ. ಮಣಿಪುರದಲ್ಲಿನ ನಿರಂತರ ಜನಾಂಗೀಯ ಹಿಂಸಾಚಾರ ತಡೆಯಲು ಕೂಡಲೇ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.


    ರಾಶಿದ್, ಪಬ್ಲಿಕ್ ಪೀಸ್ ಕಮಿಟಿಯ ಶಾ ಮುನ್ನಾ, ಮುಜಾಮಿಲ್, ಜಬ್ಬಾರ್, ಜಮಾತ್ ಇಸ್ಲಾಂನ ಅಜೀಜುಲ್ಲಾ, ಮುಸ್ತಫಾ, ಅಬ್ಬಾಸ್, ಹ್ಯೂಮನ್ ಹೆಲ್ಪ್ ಫೌಂಡೇಷನ್ ಸಮಿತಿಯ ರಿಜ್ವಾನ್, ದಸಂಸ ಸಂಚಾಲಕರಾದ ರಾಮಕೃಷ್ಣ ಅತ್ತಿಗುಪ್ಪೆ , ಚಿಕ್ಕ ಹುಣಸೂರು ರಾಜು, ಮುಖಂಡರಾದ ಮೊಯಿದ್ದೀನ್, ಜಬ್ಬಾರ್, ಅಬ್ಬಾಸ್, ಉವೇ ಸಲ್ಮಾ, ಜಸೀಲಾ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts