More

    ಮಗುವಿಗೆ ಕರೊನಾ ಸೋಂಕು ಶಂಕೆ

    ಗದಗ: ಕರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಕಟ್ಟೆಚ್ಚರ ವಹಿಸಿರುವ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ನಿರಾಳರಾಗಿದ್ದ ಜಿಲ್ಲೆಯ ಜನರಿಗೆ ಮಂಗಳವಾರ ಮತ್ತೆ ಆತಂಕ ಕವಿದಿದೆ. ಒಂದು ವಾರದ ಹಿಂದೆ ಲಂಡನ್​ನಿಂದ ಪಟ್ಟಣಕ್ಕೆ ಆಗಮಿಸಿರುವ ದಂಪತಿಯ ಮಗುವಿಗೆ ಕರೊನಾ ವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದಿದ್ದರಿಂದ ಚಿಂತೆಗೀಡು ಮಾಡಿದೆ.

    ಪ್ರಕರಣ ಗೊತ್ತಾದ ಕೂಡಲೆ ಜಿಲ್ಲಾಡಳಿತ ಮಗುವಿನ ರಕ್ತದ ಮಾದರಿ ಮತ್ತು ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಿದೆ. ಮಗುವಿನ ಪಾಲಕರ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಕರೊನಾ ನಿಯಂತ್ರಿಸಲು ಸರ್ಕಾರದ ಆದೇಶದನ್ವಯ ಜಿಲ್ಲಾದ್ಯಂತ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಜಿಲ್ಲೆಯಲ್ಲಿ 60 ಜನರು ಆರೋಗ್ಯ ಪರೀಕ್ಷೆಗಾಗಿ ನಿಗಾದಲ್ಲಿದ್ದಾರೆ. ಇದರಲ್ಲಿ ಐವರು 28 ದಿನಗಳನ್ನು ಪೂರೈಸಿ ಆರೋಗ್ಯದಿಂದಿದ್ದಾರೆ. ಒಬ್ಬರು ವೈದ್ಯಕೀಯ ಸೌಲಭ್ಯದೊಂದಿಗೆ ಪ್ರತ್ಯೇಕ ನಿಗಾದಲ್ಲಿದ್ದಾರೆ. ಒಟ್ಟು ಪರೀಕ್ಷೆಗಾಗಿ 9 ಮಂದಿಯ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, 7 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದೆ. ಮಂಗಳವಾರ ಕಳುಹಿಸಿದ ಮಗುವಿನ ಮಾದರಿ ಸೇರಿ ಇನ್ನೂ ಎರಡು ಪ್ರಕರಣಗಳ ವರದಿಗಳು ಬರಬೇಕಿದೆ. ಕರೊನಾ ವೈರಸ್ ದೃಢಪಟ್ಟ ಪ್ರಕರಣಗಳು ಜಿಲ್ಲೆಯಲ್ಲಿ ಇಲ್ಲ ಎಂಬುದು ಕೊಂಚ ಸಮಾಧಾನ ತರುವಂತಹ ಸಂಗತಿಯಾಗಿದೆ.

    ಸಭೆ, ಸಮಾರಂಭಗಳು, ಚಿತ್ರಮಂದಿರ, ಮಾಲ್​ಗಳು, ಶಾಲಾ ಕಾಲೇಜ್​ಗಳು ಬಂದ್ ಆಗಿವೆ. ಪ್ರಯೋಗಾಲಯಕ್ಕೆ ಕಳುಹಿಸಿದ ಮಾದರಿಗಳು ನೆಗೆಟಿವ್ ಬಂದಿದ್ದರಿಂದ ಜನಜೀವನ ಯಥಾಪ್ರಕಾರ ಮುಂದುವರಿದಿದೆ. ವೈರಸ್ ಭಯದಿಂದ ಕೆಲವೆಡೆ ಮಹಿಳೆಯರು, ಮಕ್ಕಳು ಮನೆ ಬಿಟ್ಟು ಹೊರಗೆ ಬರುತ್ತಿಲ್ಲ.

    ಗಾಳಿ ಸುದ್ದಿ ಹರಡಬೇಡಿ

    ಗದಗ: ದಿ.ಕೆ.ಎಚ್. ಪಾಟೀಲರ 96ನೇ ಜನ್ಮದಿನ ನಿಮಿತ್ತ ಯಂಗ್ ಇಂಡಿಯಾ ಪರಿವಾರದ ವತಿಯಿಂದ ಮಂಗಳವಾರ ಆಟೋ ರಿಕ್ಷಾ ಚಾಲಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ 1000 ಮಾಸ್ಕ್​ಗಳನ್ನು ವಿತರಿಸಲಾಯಿತು. ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಗೋವಿಂದಗೌಡ್ರ ಮಾತನಾಡಿ, ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು ಹಾಗೂ ಅಂತಹ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಡಬಾರದು ಎಂದು ವಿನಂತಿಸಿದರು. ಗೌರವ ಅಧ್ಯಕ್ಷ ಸುರೇಶ ಕಲಬುರ್ಗಿ, ರವಿ ಕರಬಸಣ್ಣವರ, ಅಮರೇಶ ಅಂಗಡಿ, ಮನೋಜಸಿಂಗ್, ಜಹೀರ್ ದೊಡ್ಡಮನಿ, ಮಲ್ಲಿಕಾರ್ಜುನ ಭಜಂತ್ರಿ, ಮಲ್ಲೇಶ ಕರಮುಡಿ, ಮಂಜುನಾಥ ಜಡಿ, ಮುತ್ತಪ್ಪ ಬುಳ್ಳನ್ನವರ, ಮಲ್ಲೇಶ ಚವಡಿ, ವೀರೇಶ ಮುದೇನಗುಡಿ, ಗಜಾನನಸಿಂಗ ದೊಡ್ಡಮನಿ, ಪರಶುರಾಮ ಭಜಂತ್ರಿ, ಲಾಲಸಾಬ್ ಬಾಗಳಿ, ಕಣಕಪ್ಪ ಗೂಳನವರ, ಮೆಹಬೂಬಸಾಬ್ ಸಂಶಿ, ಇತರರು ಉಪಸ್ಥಿತರಿದ್ದರು.

    ಮಾಸ್ಕ್ ವಿತರಣೆ

    ಗದಗ ನಗರದಲ್ಲಿ ಮುನ್ಸಿಪಲ್ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಂಗಳವಾರ ಸಾಮಾಜಿಕ ಹೋರಾಟಗಾರ ಸೈಯ್ಯದ್ ಖಾಲಿದ್ ಕೊಪ್ಪಳ ನೇತೃತ್ವದಲ್ಲಿ ಉಚಿತವಾಗಿ 1000 ಮಾಸ್ಕ್ ವಿತರಿಸಲಾಯಿತು. ಹುಲ್ಲೇಶ ಭಜಂತ್ರಿ, ಮಹಾಂತೇಶ ಮದ್ನೂರ, ಅಕ್ಬರ್ ಅಲಿಬೇಗ್, ಗಣೇಶ ಹುಬ್ಬಳ್ಳಿ, ದಾದು ಮುಂಡರಗಿ, ಕಿರಣ ಗಂಗಾವತಿ, ಮಹಮ್ಮದ್ ಹಣಗಿ, ರಫೀಕ್ ಧಾರವಾಡ, ತನ್ವೀರ್ ಹಾಜಿ, ಬಸು ಗಾಮನಗಟ್ಟಿ, ಇತರರು ಉಪಸ್ಥಿತರಿದ್ದರು.

    ಪ್ರವಾಸಿ ತಾಣ ವೀಕ್ಷಣೆಗೆ ನಿಷೇಧ

    ಐತಿಹಾಸಿಕ ಲಕ್ಕುಂಡಿ ಸೇರಿ ವಿವಿಧ ಇಲಾಖೆಯ ಅಧೀನದಲ್ಲಿನ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಿಗೆ ಮಾ. 16ರಿಂದ ಮಾ. 30ರ ವರೆಗೆ ಸಾರ್ವಜನಿಕರ ಭೇಟಿ ಹಾಗೂ ವೀಕ್ಷಣೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.

    ಜಿಲ್ಲೆಯಲ್ಲಿ ಕರೊನಾ ವೈರಸ್​ಗೆ ಸಂಬಂಧಿಸಿದಂತೆ ಒಟ್ಟು 60 ಜನರ ಮೇಲೆ ನಿಗಾ ವಹಿಸಲಾಗಿದೆ. ಇದರಲ್ಲಿ ಲಂಡನ್​ನಿಂದ ನಗರಕ್ಕೆ ಆಗಮಿಸಿದ ಕುಟುಂಬವೊಂದರ ಮೂರು ವರ್ಷದ ಮಗುವನ್ನು ಶಂಕೆಯ ಮೇರೆಗೆ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಿಸಲಾಗಿದೆ. ಪರೀಕ್ಷೆಗಾಗಿ ರಕ್ತದ ಮಾದರಿ ಕಳುಹಿಸಿಕೊಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 9 ಜನ ಶಂಕಿತರ ಪೈಕಿ 7 ಜನರ ವರದಿ ನೆಗೆಟಿವ್ ಬಂದಿದ್ದು, ಎರಡು ಪ್ರಕರಣಗಳ ವರದಿ ಬರಬೇಕಿದೆ.

    | ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

    ವಿವಿಧ ಹಳ್ಳಿಗಳಲ್ಲಿ ಜನಜಾಗೃತಿ

    ಕರ್ನಾಟಕ ರಾಜ್ಯ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯ, ಎನ್​ಎಸ್​ಎಸ್ ಹಾಗೂ ಯುತ್ ರೆಡ್ ಕ್ರಾಸ್ ಆಶ್ರಯದಲ್ಲಿ ಮಂಗಳವಾರ ಗದಗ ನಗರ, ಬಿಂಕದಕಟ್ಟಿ, ಹುಲಕೋಟಿ, ನಾಗಾವಿ, ಕಳಸಾಪೂರ ಹಾಗೂ ಕುರ್ತಕೋಟಿ ಗ್ರಾಮಗಳಲ್ಲಿ ಕರೊನಾ ವೈರಸ್ ಕುರಿತು ಜನಜಾಗೃತಿ ನಡೆಸಲಾಯಿತು. ಡಾ. ನಾಗವೇಣಿ ಎಸ್. ಜೆ. ಹಾಗೂ ಡಾ. ಗೂಳಪ್ಪ ಎಂ.ಡಿ., ಎನ್​ಎಸ್​ಎಸ್ ಮತ್ತು ಯುತ್ ರೆಡ್ ಕ್ರಾಸ್​ನ ಸಂಯೋಜನಾಧಿಕಾರಿ ಡಾ. ವೀರೇಶಕುಮಾರ ವಿಜಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts