More

    ಮಕ್ಕಳಲ್ಲಿ ಪ್ರತಿಭೆ ಜತೆ ಮೌಲ್ಯ ಬೆಳೆಸಿ

    ಕಲಬುರಗಿ: ಮಕ್ಕಳಲ್ಲಿರುವ ಪ್ರತಿಭೆಗೆ ನೀರೆರೆದು ಪ್ರೋತ್ಸಾಹಿಸಿ ಸಾಧಕರಾಗುವಂತೆ ಮಾಡುವ ಜತೆಗೆ ಅವರಲ್ಲಿ ಉತ್ತಮ ಮೌಲ್ಯಗಳು ತುಂಬುವ ಕೆಲಸವೂ ಮಾಡಬೇಕು ಎಂದು ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಸಲಹೆ ನೀಡಿದರು.

    ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದಿಂದ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ಪೂಜ್ಯಶ್ರೀ ಹವಾ ಮಲ್ಲಿನಾಥ ಮಹಾರಾಜರ ಸಾನ್ನಿಧ್ಯದಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್​ಸಿ, ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ `ವಿದ್ಯಾರ್ಥಿ ರತ್ನ’ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಇಂದು ವಿಶ್ವವೇ ಭಾರತದ ಕಡೆಗೆ ನೋಡುವಂತಾಗಿದೆ. ಹೀಗಾಗಿ ನಾವು ನವಪೀಳಿಗೆಯನ್ನು ಅತ್ಯಂತ ಸಂಸ್ಕಾರವಂತ, ಮೌಲ್ಯವಂತರನ್ನಾಗಿ ಮಾಡಬೇಕಾಗಿದೆ ಎಂದರು.

    ಉದ್ಘಾಟಿಸಿದ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ದಯಾನಂದ ಪಾಟೀಲ್ ಮಾತನಾಡಿ, ಮಕ್ಕಳಿಗೆ ಪ್ರತಿಭೆಗೆ ತಕ್ಕಂತೆ ಸೂಕ್ತ ಅವಕಾಶ ಕಲ್ಪಿಸಬೇಕು. ಅದೊಂದು ಸಾರ್ಥಕ ಕಾರ್ಯ. ಜಯ ಕರ್ನಾಟಕ ಸಂಘಟನೆ ಅಂತಹ ಕೆಲಸ ಮಾಡಿದೆ. ಪಾಲಕರು ಮಕ್ಕಳಿಗೆ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗುವಂತೆ ಮೇಲಿಂದ ಮೇಲೆ ತಿಳಿಹೇಳಿ ಬೆಳೆಸುವುದು ಅಗತ್ಯವಾಗಿದೆ ಎಂದರು.

    ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತಾಲಯ ಉಪ ನಿರ್ದೇಶಕ ಬಸವಣ್ಣೆಪ್ಪ ಗೌನಳ್ಳಿ, ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಡಾ.ಎಸ್.ಎನ್.ಜಗದೀಶ. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್​ ತೇಗಲತಿಪ್ಪಿ, ಹಿರಿಯ ಪತ್ರಕರ್ತ ಹಣಮಂತರಾವ ಭೈರಾಮಡಗಿ ಇತರರು ಮಾತನಾಡಿದರು. ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಪ್ರಾಸ್ತಾವಿಕ ಮಾತನಾಡಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ರಜತ್ ಗಗನರಾಜ, ರಾಯಚೂರು ಜಿಲ್ಲಾಧ್ಯಕ್ಷ ಶಿವಕುಮಾರ ಯಾದವ ಇತರರಿದ್ದರು.

    ಡಾ.ದೀಪಕ ಪಾಟೀಲ್ (ವೈದ್ಯ ರತ್ನ), ಹಣಮಂತರಾವ ಭೈರಾಮಡಗಿ (ಮಾಧ್ಯಮ ರತ್ನ), ಡಾ.ಶರಣಪ್ಪ ಮಾಳಗಿ ( ಸಾಹಿತ್ಯ ರತ್ನ), ಸಂಗಮೇಶ ಮಾಶ್ಯಾಳ್ (ಸಂಗೀತ ರತ್ನ), ಅಮಜಾದ್ ಅಲಿ( ಛಾಯಾರತ್ನ), ಮಹಾಂತೇಶ ಹಿರೇಮಠ ( ಕ್ರೀಡಾ ರತ್ನ) ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

    ಸಾರವಾಡ ಕಕ ಉಸ್ತುವಾರಿ
    ಜಯ ಕರ್ನಾಟಕ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಸಾರವಾಡ ಅವರನ್ನು ಕಲ್ಯಾಣ ಕರ್ನಾಟಕ ಉಸ್ತುವಾರಿಯನ್ನಾಗಿ ನೇಮಿಸಿ ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ ಸಮಾರಂಭದಲ್ಲಿ ಘೋಷಣೆ ಮಾಡಿ ನೇಮಕ ಪತ್ರ ನೀಡಿದರು.

    ದೇಶ ಸೇವೆಗೆ ಸಜ್ಜಾಗಿ
    ದೇಶದ ಸಮಸ್ತ ಜನರ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರೀ ಹವಾ ಮಲ್ಲಿನಾಥ ಮಹಾರಾಜರ ಕಾರ್ಯ ಅಮೋಘವಿದೆ. ಮಕ್ಕಳು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳಿಗೆ ಹೋಗುವ ಜತೆಗೆ ದೇಶಭಕ್ತರಾಗಬೇಕು, ಸಮಾಜ ಸೇವಕರಾಗಬೇಕು ಎಂಬುದು ಪೂಜ್ಯರ ಆಶಯವಾಗಿದೆ ಎಂದು ಜೈ ಭಾರತ ಸೇವಾ ಸಮಿತಿ ರಾಷ್ಟ್ರೀಯ ವಕ್ತಾರ ವೈಜನಾಥ ಝಳಕಿ ಹೇಳಿದರು. ಪೂಜ್ಯರು ದೇಹದ ಪೂಜೆಗಿಂತ ದೇಶ ಪೂಜೆ ಮಾಡಬೇಕೆನ್ನುತ್ತಾರೆ. ಮನೆ ತೊರೆದು ಸಮಾಜ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.

    ಮಕ್ಕಳು ದೇಶದ ಆಸ್ತಿ. ಅವರಿಗೆ ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ಪೂರಕ. ಕಲಿಕೆಗಾಗಿ ಮಕ್ಕಳ ಮೇಲೆ ಪಾಲಕರು-ಶಿಕ್ಷಕರು ಒತ್ತಡ ಹೇರುತ್ತಿದ್ದೇವೆ. ಅದನ್ನು ನಿಲ್ಲಿಸಿ ಅವರಿಷ್ಟದ ವಿಷಯ ಓದಲು ಬಿಡಬೇಕು. ಸ್ವತಂತ್ರವಾಗಿ ಓದಲು, ಯೋಚಿಸಲು ಬಿಡಬೇಕು, ಪ್ರಶ್ನೆ ಕೇಳುವುದನ್ನು ಬೆಳೆಸಬೇಕು.
    |ಸಕ್ರೆಪ್ಪಗೌಡ ಬಿರಾದಾರ
    ಡಿಡಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts