More

    ಮಕ್ಕಳಲ್ಲಿರುವ ಸೃಜನಶೀಲತೆ ಪ್ರೋತ್ಸಾಹಿಸಿ

    ಸಿದ್ದಾಪುರ: ಕಥೆ ಯಾವಾಗಲೂ ವಸ್ತುವಿನ ಮೇಲೆ ನಿಂತಿರುವುದಿಲ್ಲ. ಅದರ ನಿರೂಪಣೆಯ ಮೇಲೆ ನಿಂತಿರುತ್ತದೆ. ಬಾಲ್ಯದಲ್ಲಿ ಮಕ್ಕಳ ಸ್ವಾತಂತ್ರ್ಯವನ್ನು ನಾವು ಕಸಿಯಬಾರದು ಹಾಗೂ ಸೃಜನಶೀಲತೆಯನ್ನು ನಾಶ ಮಾಡಬಾರದು. ಅವರಲ್ಲಿರುವ ವ್ಯಕ್ತಿತ್ವವನ್ನು ನಾವು ಗುರುತಿಸಬೇಕು ಎಂದು ಸಾಹಿತಿ ಡಾ. ಶ್ರೀಧರ ಬಳಗಾರ ಹೇಳಿದರು.

    ಪಟ್ಟಣದ ಬಾಲಭವನದಲ್ಲಿ ಸ್ಥಳೀಯ ಪ್ರಯೋಗ ಸೇವಾ ಸಂಸ್ಥೆ ಆಯೋಜಿಸಿದ್ದ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರ ಉಲ್ಟಾಪಲ್ಟಾ ಅಂಗಿ ಮಕ್ಕಳ ಕಥಾಸಂಕಲನ ಲೋಕಾರ್ಪಣೆಗೊಳಿಸಿ ಶನಿವಾರ ಅವರು ಮಾತನಾಡಿದರು.

    ಇಂದು ಮಕ್ಕಳ ಪಾಲಿಗೆ ಶಾಲೆ ಎನ್ನುವುದು ಶಿಕ್ಷೆಯಾಗುತ್ತಿದೆ. ಶಿಕ್ಷಕರು, ಪಾಲಕರು ಅವರ ಒಳ್ಳೆಯದನ್ನೆ ಬಯಸಿ ಭವಿಷ್ಯದ ಅವರ ಸುಂದರ ಜೀವನವನ್ನು ರೂಪಿಸುವ ನೆಪ ಒಡ್ಡಿ ಜಾಗತಿಕ ಮಾರುಕಟ್ಟೆಯಲ್ಲಿ ಅವರು ಗೆಲ್ಲಬೇಕು ಎಂದು ಬಯಸಿ ಮಕ್ಕಳ ಬಾಲ್ಯದ ಸೌಂದರ್ಯವನ್ನು ಹಾಳು ಮಾಡುತ್ತ ಹಿಂಸಾತ್ಮಕ ವಾತಾವರಣದಲ್ಲಿ ಬೆಳೆಸುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಶಾಲೆ ಎನ್ನುವುದು ಬಂದಿಖಾನೆಯಂತಾಗಿದೆ. ಕೌಟುಂಬಿಕ ಅಸಂಗತೆ, ರಾಜಕೀಯ ವ್ಯವಸ್ಥೆಯಲ್ಲಿನ ಅಸಂಗತೆ ಹೀಗೆ ಬದುಕಿನ ಹಲವು ಮಜಲುಗಳು ಅಸಂಗತೆಯಿಂದ ಕೂಡಿದೆ. ತಮ್ಮಣ್ಣ ಬೀಗಾರ ಅವರ ಉಲ್ಟಾಪಲ್ಟಾ ಅಂಗಿ ಕಥಾಸಂಕಲನ ಮಕ್ಕಳ ಸ್ವಾತಂತ್ರ್ಯನ್ನು ಎತ್ತಿ ಹೇಳುತ್ತದೆ ಎಂದು ಹೇಳಿದರು.

    ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲ ಮಾತನಾಡಿ, ಮಕ್ಕಳ ಸಾಹಿತ್ಯದ ಬಗ್ಗೆ ಸಾಹಿತ್ಯ ಪರಿಷತ್, ಸಾಹಿತ್ಯ ಅಕಾಡೆಮಿಗಳು ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ದೇಶದ ಎಲ್ಲ ಭಾಷೆಗಳಲ್ಲೂ ಮಕ್ಕಳ ಸಾಹಿತ್ಯವನ್ನು ಕಡೆಗಣಿಸಲಾಗುತ್ತಿದೆ. ಮಕ್ಕಳ ಸಾಹಿತ್ಯವೆಂದರೆ ಕವಿತೆ ಎನ್ನುವ ವರ್ಗದವರು ಹೆಚ್ಚಾಗಿದ್ದಾರೆ. ಮಕ್ಕಳ ಸಾಹಿತ್ಯ ಎಂದರೆ ಕೇವಲ ಮಕ್ಕಳಷ್ಟೆ ಓದಿದರೆ ಸಾಲುವುದಿಲ್ಲ. ದೊಡ್ಡವರೂ ಓದಬೇಕು ಎಂದು ಹೇಳಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎಸ್. ಗೌಡರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಬಸು ಬೇವಿನಮಠ, ಪ್ರಯೋಗ ಸಂಸ್ಥೆಯ ಗಂಗಾಧರ ಕೊಳಗಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿದರು. ತಮ್ಮಣ್ಣ ಬೀಗಾರ ಪುಸ್ತಕ ರಚನೆ ಕುರಿತು ಮಾತನಾಡಿದರು. ಎಂ.ಆರ್. ಭಟ್ಟ, ಎಂ.ಎಸ್. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts