More

    ಮಂಡ್ಯ-ಮೇಲುಕೋಟೆ ಮಾರ್ಗದಲ್ಲಿ ಸಂಚಾರ ಅಸಾಧ್ಯ

    ಮೇಲುಕೋಟೆ: ವೈರಮುಡಿ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದರೂ ಮಂಡ್ಯ- ಮೇಲುಕೋಟೆ ಮಾರ್ಗದಲ್ಲಿನ ಗುಂಡಿ ಮುಚ್ಚುವ ಕೆಲಸ ಮಾತ್ರ ಇನ್ನೂ ಪ್ರಾರಂಭವಾಗಿಲ್ಲ.

    ಮಾ.27 ರಿಂದ ಜಾತ್ರಾ ಮಹೋತ್ಸವ ಆರಂಭವಾಗುತ್ತಿದ್ದು, ಏ.1ರಂದು ವೈರಮುಡಿ ಉತ್ಸವ ನಡೆಯಲಿದೆ. ಈ ವೇಳೆ ಸಾವಿರಾರು ಜನ ಇಲ್ಲಿಗೆ ಭೇಟಿ ನೀಡಲಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಗುಂಡಿ ಮುಚ್ಚುವ ಕಾರ್ಯ ಆಗಬೇಕಿದೆ.

    ಮಂಡ್ಯ-ಶಿವಳ್ಳಿ -ದುದ್ದ-ಮೇಲುಕೋಟೆ ಮಾರ್ಗದಲ್ಲಿ ರಸ್ತೆಗಳು ಕೊರಕಲು ಬಿದ್ದಿದ್ದು, ವಾಹನ ಚಾಲಕರಿಗೆ ಈ ಮಾರ್ಗದಲ್ಲಿ ಬರುವುದು ಸವಾಲಿನ ಕೆಲಸವಾಗಿದೆ. ಅಲ್ಲದೇ, ಈ ಮಾರ್ಗದಲ್ಲಿ ಪ್ರಯಾಣಿಸುವವರು ಶಾಪ ಹಾಕುತ್ತ ಜಿಲ್ಲಾ ಕೇಂದ್ರ ತಲುಪುತ್ತಿದ್ದಾರೆ. ದುದ್ದ, ಶಿವಳ್ಳಿ, ಬೇವುಕಲ್ಲು ಮಾರ್ಗದಲ್ಲಂತೂ ಸಂಚಾರ ಅಸಾಧ್ಯವೆನಿಸಿದೆ. ಬೈಕ್ ಪ್ರಯಾಣವಂತೂ ದುಸ್ತರವಾಗಿದ್ದು, ಮಳೆ ಬಂದರೆ ಗುಂಡಿಗಳು ಮುಚ್ಚಿಹೋಗುವ ಕಾರಣ ಗುಂಡಿಯಲ್ಲಿ ಬೈಕ್ ಬಿಟ್ಟು ಸವಾರರು ಕೆಳಗೆ ಬಿದ್ದು ಗಾಯಗೊಂಡಿರುವ ನಿದರ್ಶನವೇ ಹೆಚ್ಚು.

    ಬೆಂಗಳೂರು ಕಡೆಯಿಂದ ಬರುವ ಭಕ್ತರು, ಪ್ರವಾಸಿಗರು ಇದೇ ಮಾರ್ಗವಾಗಿ ಮೇಲುಕೋಟೆ ತಲುಪಬೇಕಿದೆ. ಈ ರಸ್ತೆಯಲ್ಲಿ ನೂರಕ್ಕೂ ಹೆಚ್ಚು ಕಡೆ ಗುಂಡಿ ಬಿದ್ದಿದೆ. ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ್ದ ಡಿಸಿ, ಗುಂಡಿ ಮುಚ್ಚುವ ಸಂಬಂಧ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದರು. ಆದರೂ ಇಂಜಿನಿಯರ್‌ಗಳು ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ ಎಂಬುದು ಸ್ಥಳೀಯರ ಆರೋಪ.

    ಇನ್ನು ಮೇಲುಕೋಟೆಯ ಉತ್ಸವ ಸಾಗುವ ಬೀದಿಯಲ್ಲಿ ರಸ್ತೆ ಅಗೆದು ಕಲ್ಲು ಮಣ್ಣು ಕಾಣುವಂತೆ ಮುಚ್ಚಲಾಗಿದೆ. ತಿಂಗಳುಗಳೇ ಕಳೆದರೂ ರಸ್ತೆ ದುರಸ್ತಿ ಆಗಿಲ್ಲ. ಮಹಾರಥ ನಡೆಯುವ ವೇಳೆ ಹೀಗೆ ಇದ್ದರೆ ರಥದ ಚಕ್ರ ಹೂತುಹೋಗುವ ಅಪಾಯವೂ ಇದೆ. ಇನ್ನು ಮೇಲುಕೋಟೆ ಹೆಬ್ಬಾಗಿಲಿನ ರಸ್ತೆಯೂ ಗುಂಡಿ ಬಿದ್ದಿದೆ.

    ವೈರಮುಡಿ ಉತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ಚೆಲುವನಾರಾಯಣನ ದರ್ಶನ ಪಡೆಯುತ್ತಾರೆ. ಉತ್ಸವ ನಡೆಯುವ ರಾಜ, ರಥ, ಮಾರಿಗುಡಿ ಬೀದಿಗಳಲ್ಲಿ ತೆರೆದ ಚರಂಡಿಗಳಿವೆ. ಉತ್ಸವದ ವೇಳೆ ಹಲವು ಭಕ್ತರು ಚರಂಡಿಯಲ್ಲಿ ಬಿದ್ದು ಗಾಯಗೊಳ್ಳುವ ಸ್ಥಿತಿ ಪ್ರತಿ ವರ್ಷವೂ ಇದೆ. ಗ್ರಾಮ ಪಂಚಾಯಿತಿ ಕನಿಷ್ಠ ಸಿಮೆಂಟ್ ಸ್ಲಾೃಬ್‌ಗಳಿಂದ ತೆರೆದ ಚರಂಡಿಯನ್ನು ಮುಚ್ಚುವ ಕಾರ್ಯ ಮಾಡಿಲ್ಲ. ಅವಘಡ ಸಂಭವಿಸುವ ಮುನ್ನ ಜಿಲ್ಲಾಡಳಿತ ಇತ್ತ ಗಮನಹರಿಸಲಿ ಎಂಬುದು ಸ್ಥಳೀಯರ ಒತ್ತಾಯ.

    ಮಂಡ್ಯ-ಮೇಲುಕೋಟೆ ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿರುವುದು ಇಲಾಖೆ ಗಮನಕ್ಕೆ ಬಂದಿದೆ. ಮಾ.27ರಿಂದ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುತ್ತದೆ. ವೈರಮುಡಿ ಉತ್ಸವಕ್ಕೆ ಬರುವ ಭಕ್ತರಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು.
    ಚಿದಾನಂದ್ ಜೆಇ ಲೋಕೋಪಯೋಗಿ ಇಲಾಖೆ, ಪಾಂಡವಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts