More

    ಮಂಡ್ಯ-ಕೋಲಾರ ಕಣ್ಣುಗಳಿದ್ದಂತೆ

    ಮುಳಬಾಗಿಲು: ಜೆಡಿಎಸ್ ಮತ್ತೆ ರಾಜ್ಯದಲ್ಲಿ ಆಡಳಿತ ನಡೆಸುವ ಅವಕಾಶಗಳು ಉಜ್ವಲವಾಗಿದೆ, ಮತದಾರರು ಆಶೀರ್ವಾದ ಮಾಡಲು ಸಿದ್ಧರಿದ್ದು, ಕಾರ್ಯಕರ್ತರು, ಮುಖಂಡರು ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಹೇಳಿದರು.

    ತಾಲೂಕಿನ ನಂಗಲಿ ಗ್ರಾಮದ ಖಾಸಗಿ ಕಲ್ಯಾಣ ಮಂಟಪದಲ್ಲಿ ಗುರುವಾರ ತಾಲೂಕಿನ 10 ಸಾವಿರ ಹಾಲು ಉತ್ಪಾದಕರ ಮನೆಗಳಿಗೆ ಕೋಚಿಮುಲ್‌ನಿಂದ ಉಚಿತವಾಗಿ ಆಹಾರ ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಬಯಲುಸೀಮೆಯ ರೈತರು ಶ್ರಮಜೀವಿಗಳು. ಹೈನುಗಾರಿಕೆಯೇ ಜೀವನದ ಆಧಾರ ಸ್ತಂಭವಾಗಿದೆ. ಕೋಲಾರ ಹಾಲು ಒಕ್ಕೂಟ ರೈತರ ಪರ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

    ಕಾಂಗ್ರೆಸ್, ಬಿಜೆಪಿಯಿಂದ ರಾಜ್ಯದ ಹಿತರಕ್ಷಣೆ ಸಾಧ್ಯವಿಲ್ಲ. ನೆಲ, ಜಲ ಭಾಷೆ ರಕ್ಷಣೆಗೆ ಪ್ರಾದೇಶಿಕ ಪಕ್ಷ ಅತ್ಯವಶ್ಯಕವಾಗಿದ್ದು, ಮುಂದಿನ 22 ತಿಂಗಳಲ್ಲಿ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಆ ವೇಳೆಗಾಗಲೇ ಜೆಡಿಎಸ್ ರಾಜ್ಯಾದ್ಯಂತ ಪ್ರಜ್ವಲಿಸಲಿದೆ. ಜೆಡಿಎಸ್ ಇನ್ನಿಲ್ಲ ಎನ್ನುವ ಸಂದರ್ಭದಲ್ಲಿ ಮತ್ತೆ ಫಿನಿಕ್ಸ್‌ನಂತೆ ಎದ್ದು ನಿಂತಿರುವ ಹಲವಾರು ಉದಾಹರಣೆ ಕಾಣಬಹುದು ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

    ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಮಾಜಿ ಸಚಿವರಾಗಿದ್ದ ದಿವಂಗತ ಆಲಂಗೂರು ಶ್ರೀನಿವಾಸ್ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಕೋಲಾರ ಜಿಲ್ಲೆಯ ಶಾಸಕರು ಜೆಡಿಎಸ್‌ನಿಂದ ಆಯ್ಕೆಯಾಗುವಂತೆ ಕಾರ್ಯನಿರ್ವಹಿಸಬೇಕು. ನಾನು ಈ ಜಿಲ್ಲೆಯ ಮೊಮ್ಮಗನಾಗಿದ್ದೇನೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ. ಮಂಡ್ಯ, ಕೋಲಾರ ನನಗೆ ಕಣ್ಣುಗಳಿದ್ದಂತೆ ಎಂದರು.

    ಜೆಡಿಎಸ್ ಮುಖಂಡ ಸಮೃದ್ಧಿ ವಿ.ಮಂಜುನಾಥ್ ಮಾತನಾಡಿ, ದೇವೇಗೌಡರು, ಕುಮಾರಸ್ವಾಮಿ ರಾಜ್ಯದಲ್ಲಿ ಭ್ರಷ್ಟಾಚಾರರಹಿತ ಆಡಳಿತ ನಡೆಸಿದ್ದರು. ಆದರೆ ಈಗ ಪರಿಸ್ಥಿತಿ ಯಾವ ರೀತಿ ಇದೆ ಎಂಬುದು ಎಲ್ಲರಿಗೂ ಅರ್ಥವಾಗಿದೆ. ಜನಸಾಮಾನ್ಯರು ಸರ್ಕಾರಿ ಕಚೇರಿಗಳಿಗೆ ಹೋಗುವ ಪರಿಸ್ಥಿತಿ ಇಲ್ಲವಾಗಿದೆ. ಈ ರೀತಿ ಆಡಳಿತ ಬೇಕೆ ಎಂದರು.

    ಕೋಚಿಮುಲ್ ನಿರ್ದೇಶಕ, ತಾಲೂಕು ಜೆಡಿಎಸ್ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಮಾತನಾಡಿ, ಕೋಚಿಮುಲ್ ರೈತರ ಪರವಾಗಿದ್ದು, ಕೋವಿಡ್ ಸಂದರ್ಭದಲ್ಲೂ ಹಾಲಿನ ಬೆಲೆ ಕಡಿಮೆ ಮಾಡಲಿಲ್ಲ, ಈಗ ಅನಿವಾರ್ಯವಾಗಿ ಬೆಲೆ ಕಡಿಮೆ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಮಾಜಿ ಎಂಎಲ್‌ಸಿ ತೂಪಲ್ಲಿ ಆರ್.ಚೌಡರೆಡ್ಡಿ, ಟಿಎಪಿಸಿಎಂಎಸ್ ನಿರ್ದೇಶಕ ಆಲಂಗೂರು ಶಿವಣ್ಣ, ಜಿಪಂ ಮಾಜಿ ಸದಸ್ಯ ಬಿ.ವಿ.ಸಾಮೇಗೌಡ, ತಾಪಂ ಮಾಜಿ ಅಧ್ಯಕ್ಷ ವಿ.ರಘುಪತಿರೆಡ್ಡಿ, ಮಾಜಿ ಸದಸ್ಯ ಡಾ.ಸಿ.ಎನ್.ಪ್ರಕಾಶ್, ನಗರಸಭೆ ಅಧ್ಯಕ್ಷ ರಿಯಾಜ್‌ಅಹ್ಮದ್, ಜೆಡಿಎಸ್ ನಗರ ಘಟಕ ಅಧ್ಯಕ್ಷ ತೇಜೋರಮಣ, ಮಾಲೂರಿನ ಜೆ.ಡಿ.ಎಸ್ ಮುಖಂಡರಾದ ರಾಮೇಗೌಡ, ಕವತನಹಳ್ಳಿ ಮುನಿಸ್ವಾಮಿಗೌಡ, ಶ್ರೀಧರಮೂರ್ತಿ, ಪಿ.ಎಂ.ಸೂರ್ಯನಾರಾಯಣಗೌಡ ಇದ್ದರು.

    ನಾಯಕ ಜನರ ಮಧ್ಯೆ ಇರಬೇಕು: ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ದೇಶದ ಮತ್ತು ರಾಜ್ಯದ ರೈತರ ಪರ ಕಾರ್ಯಕ್ರಮ ನೀಡಿದ್ದು, ರೈತರ ಸಾಲಮನ್ನಾ ಮಾಡಿದ ಕೀರ್ತಿ ಜೆಡಿಎಸ್‌ಗೆ ಸಲ್ಲುತ್ತದೆ, ಜನನಾಯಕನಾದವನು ಸೋಲಲಿ, ಗೆಲ್ಲಲಿ ಸದಾ ಜನರ ಬಳಿಯೇ ಇರಬೇಕು ಎಂಬುದು ನನ್ನ ಮನದಾಸೆ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ನಿಖಿಲ್ ಹೇಳಿದರು.

    ನನ್ನ ಸೋಲನ್ನು ಒಪ್ಪಿಕೊಂಡಿದ್ದೇನೆ: ರಾಜರು ಒಡವೆಗಳನ್ನು ಅಡವಿಟ್ಟು ಕೆಆರ್‌ಎಸ್ ಡ್ಯಾಂ ನಿರ್ಮಾಣ ಮಾಡಿದ್ದಾರೆ, ಅಂತಹ ಡ್ಯಾಂ ಬಿರುಕು ಬಿಟ್ಟಿದೆ ಎಂದು ಗೊಂದಲ ಸೃಷ್ಟಿಸಿ ಸಂಸದರು ಮಾತನಾಡುವುದು ಸರಿಯಲ್ಲ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಮುಳಬಾಗಿಲಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡ್ಯಾಂ ಬಿರುಕು ಬಿಟ್ಟಿದ್ದರೆ ಟೆಕ್ನಿಕಲ್ ಟೀಂ ಇರುತ್ತದೆ, ಸರ್ಕಾರ ಇದೆ. ಅವರು ನೋಡಿಕೊಳ್ಳುತ್ತಾರೆ. ಮಂಡ್ಯ ಸಂಸದರು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಜನರ ಗಮನ ಬೇರೆಡೆೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

    ಚುನಾವಣೆ ಎಂದ ಮೇಲೆ ಒಬ್ಬರು ಗೆಲ್ಲಬೇಕು, ಒಬ್ಬರು ಸೋಲಬೇಕು. ಸೋಲು-ಗೆಲುವು ಶಾಶ್ವತವಲ್ಲ. ಮಂಡ್ಯದಲ್ಲಿ ನನ್ನ ಸೋಲನ್ನು ಒಪ್ಪಿಕೊಂಡಿದ್ದೇನೆ. ಐದು ಮುಕ್ಕಾಲು ಲಕ್ಷ ಜನರು ನನಗೆ ಮತ ಹಾಕಿದ್ದಾರೆ, ಅದು ಸಣ್ಣ ಸಂಖ್ಯೆ ಅಲ್ಲ. ಬೇಜಾರು ಮಾಡಿಕೊಳ್ಳುವಂತಹದ್ದು ಏನೂ ಇಲ್ಲ. ಸಂಸದರಾಗಿ ಮಂಡ್ಯದ ಜನರು ನಿಮಗೆ ಅವಕಾಶ ನೀಡಿದ್ದಾರೆ ಅವರ ಋಣ ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಎಂದು ಸಂಸದೆ ಸಮಲತಾ ಅಂಬರೀಷ್‌ಗೆ ಟಾಂಗ್ ನೀಡಿದರು.

    ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿ, ನಾನೊಬ್ಬ ನಾಗರಿಕನಾಗಿ ಸರ್ಕಾರವನ್ನು ಒತ್ತಾಯಿಸುತ್ತೇನೆ. ಸುಖಾಸುಮ್ಮನೆ ಆರೋಪ ಮಾಡುತ್ತ ಮಾಧ್ಯಮಗಳ ಗಮನ ಸೆಳೆಯುವುದು ಸರಿಯಲ್ಲ. ಇದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ ಎಂದರು.

    ತಮ್ಮನ ಶ್ಲಾಘನೆ ಸ್ವಾಗತಿಸುವೆ: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಪ್ರಶಂಶಿಸಿರುವುದು ಅಣ್ಣನಾಗಿ ತಮ್ಮನ ಶ್ಲಾಘನೆಯನ್ನು ಸ್ವಾಗತಿಸುತ್ತೇನೆ. ಅವರು ನೀಡಿರುವ ಪ್ರಮಾಣಪತ್ರ ನನಗೆ ಸಂತಸ ತಂದಿದೆ ಎಂದು ನಿಖಿಲ್ ಮಂಡ್ಯದ ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆ ಬಗ್ಗೆ ಕಿಡಿಕಾರಿದರು. ಸುಮ್ಮನೆ ಗೊಂದಲ ಸೃಷ್ಟಿಸುವ ಹೇಳಿಕೆಗಳು ಮಾಜಿ ಸಚಿವರಿಗೆ ಶೋಭೆ ತರುವುದಿಲ್ಲ. ಅವರು ದೊಡ್ಡವರು, ಪ್ರಚೋದನೆ ನೀಡುವ ಹೇಳಿಕೆ ಕೊಡುತ್ತಿದ್ದಾರೆ, ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts