More

    ಭೋವಿ ಸಮಾಜಕ್ಕೆ ಟಿಕೆಟ್ ನೀಡಲು ಪಟ್ಟು

    ಚಿತ್ರದುರ್ಗ: ಪರಿಶಿಷ್ಟ ಜಾತಿಯಲ್ಲಿನ 101 ಸಮುದಾಯಗಳ ಪೈಕಿ ಎರಡು ಸಮುದಾಯಗಳನ್ನು ಹೊರತುಪಡಿಸಿ, ಉಳಿದ 99 ಸಮುದಾಯಗಳನ್ನು ಈ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಕಡೆಗಣಿಸಿವೆ ಎಂದು ಭೋವಿ ಮಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲು, ಸದಾಶಿವ ಆಯೋಗದ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಘಟನಾತ್ಮಕ ಶಕ್ತಿ ಪ್ರಭಾವ ಏನೆಂಬುದು ಗೊತ್ತಾಗಿದೆ. ಬಿಜೆಪಿ ಸೋಲಿನ ರುಚಿ ಉಂಡಿದೆ. ಬಿಜೆಪಿ ವಿರುದ್ಧದ ಮತಗಳು ಹಾಗೂ ಇತರ ಆಯಾಮಗಳಿಂದಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಕೂಡ ಟಿಕೆಟ್ ಕೊಡದೆ ಕಡೆಗಣಿಸುತ್ತಿದೆ ಎಂದರು.
    ರಾಜ್ಯದ ಐದು ಮೀಸಲು ಕ್ಷೇತ್ರಗಳಿಗೆ ಕಾಂಗ್ರೆಸ್ ಹೆಸರು ಘೋಷಿಸಿದ್ದರೂ ಬಿ ಫಾರಂ ಕೊಟ್ಟಿಲ್ಲ. ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಹೆಸರು ಪ್ರಕಟಿಸಿಲ್ಲ. ಆಗಿರುವ ತಪ್ಪು ಸರಿಪಡಿಸಿ, ಆದಿಕರ್ನಾಟಕ, ಆದಿದ್ರಾವಿಡ, ಭೋವಿ, ಬಂಜಾರ, ಕೊರಮ, ಕೊರಚ ಸೇರಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಅವಕಾಶ ಒದಗಿಸಬೇಕು ಎಂದು ಒತ್ತಾಯಿಸಿದರು.
    ಚಿತ್ರದುರ್ಗ ಅಥವಾ ಕೋಲಾರದಲ್ಲಿ ಭೋವಿ ಸಮಾಜದವರಿಗೆ ಟಿಕೆಟ್ ಕೊಡಬೇಕು. ಮತಕ್ಕೆ ಸೀಮಿತಗೊಳಿಸದೆ ಅಧಿಕಾರ ಹಂಚಿಕೆಗೂ ಕಾಂಗ್ರೆಸ್ ಪರಿಗಣಿಸಬೇಕು ಎಂದರು.
    ದೇಶದಲ್ಲಿ 10-15 ಕೋಟಿ ಭೋವಿ ಸಮುದಾಯದ ಜನರಿದ್ದಾರೆ. ನಿಲುವು ಬದಲಾಗದಿದ್ದರೆ ರಾಜ್ಯಮಟ್ಟದಲ್ಲಿ ಸಭೆ ಕರೆದು ಗಟ್ಟಿ ತೀರ್ಮಾನಕ್ಕೆ ಬರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಶ್ರೀಗಳು, ಸ್ಪಂದಿಸದಿದ್ದರೆ ಸಮಾಜದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಚಿಂತನೆ ಕೂಡ ಇದೆ ಎಂದು ಹೇಳಿದರು.
    ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಸಮುದಾಯಕ್ಕೆ ಟಿಕೆಟ್ ಕೊಡದಿದ್ದರೆ ಚಿತ್ರದುರ್ಗದಿಂದ ಪಕ್ಷೇತರರಾಗಿ ಅಭ್ಯರ್ಥಿಯೊಬ್ಬರು ಕಣಕ್ಕೆ ಇಳಿಯುತ್ತಾರೆ ಎಂದರು.
    ಮುಖಂಡ ಇ.ಮಂಜುನಾಥ್ ಮಾತನಾಡಿ, ನಮ್ಮ ಸಮಾಜಕ್ಕೆ ಎರಡು ರಾಷ್ಟ್ರೀಯ ಪಕ್ಷಗಳು ಟಿಕೆಟ್ ಕೊಟ್ಟಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
    ಸಮುದಾಯದ ಮುಖಂಡರಾದ ಮೋಹನ್, ಎಚ್.ಲಕ್ಷ್ಮಣ್, ರುದ್ರಣ್ಣ, ಆಂಜನೇಯ, ತಿಮ್ಮಣ್ಣ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts