More

    ಭೂಮಣ್ಣಿ ಹಬ್ಬಕ್ಕೆ ಮಲೆನಾಡು ಸಜ್ಜು; ಭೂಮಾತೆಯ ಪೂಜಿಸುವ ಸಂಭ್ರಮದಲ್ಲಿ ರೈತ ವರ್ಗ

    ರಿಪ್ಪನ್‌ಪೇಟೆ: ಮುಂಜಾನೆಯ ಚುಮುಚುಮು ಚಳಿಯಲ್ಲಿ ಚಿತ್ತಾರದ ಬುಟ್ಟಿಗೆ ವಿವಿಧ ಭಕ್ಷ್ಯಭೋಜನಗಳ ಸಹಿತ ಪೂಜಾ ಸಾಮಗ್ರಿಗಳನ್ನು ತುಂಬಿ ತಲೆಯ ಮೇಲೆ ಹೊತ್ತು ದೊಂದಿಯ ಬೆಳಕಲ್ಲಿ ಓ ಹೋ ಹೋ ಎಂದು ಜೋರಾಗಿ ಕೂಗುತ್ತ, ಗದ್ದೆಯ ಹಾಳಿಯ ಮೇಲೆ ಕುಟುಂಬಸ್ಥರೆಲ್ಲ ಮಡಿಯಿಂದ ಸಾಗಿ ಭೂ ತಾಯಿಯನ್ನು ಆರಾಧಿಸುವ ಸಂಭ್ರಮದ ಹಬ್ಬವೇ ಭೂಮಿಹುಣ್ಣಿಮೆ.
    ಪ್ರಕೃತಿ ಆರಾಧಕರಾದ ಸನಾತನ ಸಂಸ್ಕೃತಿಯಲ್ಲಿ ಗಾಳಿ, ಬೆಳಕು, ಅಗ್ನಿ, ನೀರು, ಗಿಡ, ಮರ ಪ್ರಾಣಿಪಕ್ಷಿ ಹೀಗೆ ಸಕಲರಲ್ಲಿಯೂ ದೈವತ್ವವನ್ನು ಕಂಡು ವಿವಿಧ ರೀತಿಯಲ್ಲಿ ಪೂಜಿಸುವ ಪರಿಪಾಠ ಪುರಾತನಕಾಲದಿಂದಲೂ ರೂಢಿಯಲ್ಲಿದೆ. ಅಂತಯೇ ಮನಷ್ಯರ ಹುಟ್ಟುಸಾವುಗಳ ನಡುವೆ ಜೀವನಾಧಾರವಾಗಿರುವ ಭೂ ತಾಯಿಯ ಬಸಿರಿಗೂ ಸೀಮಂತ ಮಾಡುವ ವಿಶೇಷ ಆಚರಣೆ ರೈತವರ್ಗದಲ್ಲಿ ಪರಂಪರಾಗತವಾಗಿ ಬಂದಿದೆ.
    ಗ್ರಾಮ್ಯಭಾಷೆಯಲ್ಲಿ ಕರೆಯುವ ಭೂಮಣ್ಣಿ ಹಬ್ಬ ಬಂತೆಂದರೆ ಮನೆಮಂದಿಗೆಲ್ಲ ಸಡಗರ. ದಸರಾ ಮುಗಿಯುವುತ್ತಿದ್ದಂತೆಯೇ ಮುಂದಿನ ಹಬ್ಬದ ತಯಾರಿ ಆರಂಭವಾಗುತ್ತದೆ. ಕಾರಣ ಗರ್ಭವತಿಯಾದ ಭೂದೇವಿಗೆ ಮನದಾಸೆ ತೀರಿಸುವ ಸೀಮಂತ ಕಾರ್ಯ. ಮಣ್ಣನ್ನೇ ಅವಲಂಬಿಸಿರುವ ರೈತರು ವಿಜೃಂಭಣೆಯಿಂದ ಆಚರಿಸಬೇಕು ಎಂಬ ಪರಿಕಲ್ಪನೆ.
    ಕುಟುಂಬದ ಎಲ್ಲ್ಲ ವಯೋಮಾನದವರು ಹಬ್ಬದ ತಯಾರಿಯಲ್ಲಿ ಪಾಲ್ಗೊಳ್ಳುತ್ತಾರೆ. ಗಂಡಸರು ಜಮೀನಿನ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ನೆಲ ಬಳಿದು, ಚಪ್ಪರ ಹಾಕಿ, ಶೃಂಗಾರಗೊಳಿಸಿದರೆ, ಮಕ್ಕಳು ದೇವರ ಅಲಂಕಾರಕ್ಕೆ ಬೇಕಾಗುವ ಹೂಗಳನ್ನು ದಂಡೆಸುರಿಯುತ್ತಾರೆ. ಹೆಂಗಳೆಯರು ಮನೆಯನ್ನೆಲ್ಲ ಶುಚಿಗೊಳಿಸಿಕೊಂಡು ವಿವಿಧ ತರಕಾರಿಯ ಹತ್ತಾರು ಬಗೆಯ ಪಲ್ಯೆ, ಪಾಯಸದ ಸಹಿತ ಇನ್ನಿತರ ಸಿಹಿ ತಿನಿಸು, ಕೋಡುಬಳೆ, ಮೊಸರು ಬುತ್ತಿ, ಕೊಟ್ಟೆಕಡುಬು ಹೀಗೆ ಬಗೆಬಗೆಯ ಭಕ್ಷ್ಯಗಳನ್ನು ರಾತ್ರಿಯಿಡಿ ತಯಾರಿಸುತ್ತಾರೆ. ಪ್ರತ್ಯೇಕವಾಗಿ ನೂರೆಂಟು ಜಾತಿಯ ಸೊಪ್ಪು, ಗೆಡ್ಡೆ ಗೆಣಸು, ಅಮಟೆಕಾಯಿಯನ್ನು ಹಾಕಿ ವಿಶೇಷವಾದ ಚರಗವನ್ನು ಭೂತಾಯಿಗೆಂದೇ ತಯಾರಿಸುತ್ತಾರೆ.
    ನಸುಕಿನಲ್ಲಿಯೇ ಭೂಮಿ ಪೂಜೆಗೆ ಧಾವಿಸಲು ಅಣಿಗೊಳಿಸಲಾಗುತ್ತದೆ. ಮನೆಯಲ್ಲಿ ತಯಾರಾದ ಎಲ್ಲಾ ಪದಾರ್ಧಗಳ ಸಹಿತ ಪೂಜಾ ಸಮಾನುಗಳನ್ನು ಧರಿತ್ರಿಯ ಪೂಜಾಸ್ಥಳಕ್ಕೆ ಒಯ್ಯಲಾಗುತ್ತದೆ. ಬಾಳೆ ಹಾಸಿದ ಪೂಜಾಮಂದಿರದಲ್ಲಿ ತಯಾರಾದ ಅಡಿಗೆ ಕ್ರಮವಾಗಿ ಜೋಡಿಸಿ ಶ್ರದ್ಧಾಭಕ್ತಿಯಿಂದ ಭೂತಾಯಿಯನ್ನು ಪೂಜಿಸುತ್ತಾರೆ. ಮಂಗಳಾರತಿಯ ನಂತರ ಹೊಲಗದ್ದೆಗಳಿಗೆಲ್ಲ ಚರಗವನ್ನು ಚೆಲ್ಲುತ್ತ ಅಚ್ಚಂಬ್ಲಿ ಅಳಿಯಂಬ್ಲಿ ಮುಚ್ಕೋ ತಿನ್ನೇ ಭೂಮ್ತಾಯೇ … ಎಂದು ಕೂಗಿ ಹೇಳುತ್ತಾರೆ. ಇದು ತುಂಬುಗರ್ಭಿಣಿ ಭೂಮಿ ಭಕ್ಷ್ಯಭೋಜಿಸುವಾಗ ಇತರರು ನೋಡಿ ಭೂತಾಯಿಗೆ ದೃಷ್ಟಿ ಆಗಬಾರದೆಂಬ ಕಳಕಳಿ ರೈತಮಕ್ಕಳದು. ಹೀಗೆ ಕಡುಬನ್ನು ಬೆಳೆಯ ಜಮೀನಿನಲ್ಲಿ ಗುಂಡಿ ತೆಗೆದು ಹೂಳಲಾಗುತ್ತದೆ. ಬಳಿಕ ಎಲ್ಲರು ಸೇರಿ ಭೋಜನ ಸವಿಯುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts