More

    ಭೂತಾಯಿಗೆ ಚರಗದ ನೈವೇದ್ಯ

    ಹುಬ್ಬಳ್ಳಿ: ಸತತ ಮಳೆ ಪರಿಣಾಮ ಮುಂಗಾರು ಹಾಳಾಗಿ ಹೋಗಿ ಸಂಕಷ್ಟದಲ್ಲಿದ್ದರೂ ಉತ್ತಮ ಹಿಂಗಾರು ಬೆಳೆಯ ನಿರೀಕ್ಷೆಯಲ್ಲಿರುವ ರೈತ ಕುಟುಂಬದವರು ಶುಕ್ರವಾರ ಶೀಗೆ ಹುಣ್ಣಿಮೆಯನ್ನು ಸಂಭ್ರಮದಿಂದಲೇ ಆಚರಿಸಿದರು.

    ಅತಿವೃಷ್ಟಿ ಹಾಗೂ ನೆರೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಸಂಪೂರ್ಣ ವಿಫಲವಾಯಿತು. ಆದರೆ, ಹಿಂಗಾರು ಹಂಗಾಮು ಉತ್ತಮವಾಗಲಿ, ಮನೆ ತುಂಬ ಕಾಳು ಕಡಿ ತುಂಬಲಿ ಎಂದು ಪ್ರಾರ್ಥಿಸಿದ ರೈತರು ಶುಕ್ರವಾರ ಭೂ ತಾಯಿಗೆ ಉಡಿ ತುಂಬಿ ನಮಿಸಿದರು.

    ಉಪ್ಪಿನಬೆಟಗೇರಿಯಲ್ಲಿ: ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಶೀಗೆ ಹುಣ್ಣಿಮೆ ಸಂಭ್ರಮ ಕಂಡು ಬಂತು. ಬನ್ನಿ ಗಿಡಕ್ಕೆ ಸೀರೆ ತೊಡಿಸಿ ಹೂಮಾಲೆ ಹಾಕಿ ಭಕ್ತಿಪೂರ್ವಕವಾಗಿ ಭೂ ತಾಯಿಗೆ ಉಡಿ ತುಂಬಿದರು. ತರಹೇವಾರಿ ಆಹಾರ ಪದಾರ್ಥಗಳನ್ನು ನೈವೇದ್ಯ ಮಾಡಿ, ದವಸಧಾನ್ಯ ಹುಲುಸಾಗಿ ಬೆಳೆಯಲೆಂದು ಹುಲ್ಲಲ್ಲಿಗೋ ಸುರಾಂಬ್ಳಿಗೋ ಎನ್ನುತ್ತ ಹೊಲದ ತುಂಬ ಚರಗ ಚೆಲ್ಲಿದರು.ಜೋಳದ ಕಡಬು, ವಡೆ, ಕೋಡಬಳೆ, ಪುಂಡಿ ಪಲ್ಯ, ಕಾಳಿನ ಪಲ್ಯ, ಕರಿದ ಮೆಣಸಿನಕಾಯಿ ಚಟ್ನಿ, ಚಿತ್ರಾನ್ನ, ಹುರಕ್ಕಿ ಹೋಳಿಗೆ, ಕರ್ಚಿಕಾಯಿ, ಚಪಾತಿ, ಜೋಳದ ರೊಟ್ಟಿ, ಕಾಯಿ ಚಟ್ನಿ, ಮೊಸರು ಮತ್ತಿತರ ವಿಶೇಷ ಖಾದ್ಯಗಳ ಸಹಭೋಜನ ಸವಿದರು. ಕಲಘಟಗಿ ತಾಲೂಕಿನಲ್ಲಿಯೂ ಭೂತಾಯಿಗೆ ಪೂಜೆ ಸಲ್ಲಿಸಿ ಶೀಗೆ ಹುಣ್ಣಿಮೆ ಆಚರಿಸಲಾಯಿತು. ಕುಟುಂಬದ ಸದಸ್ಯರು, ಬಂಧು- ಮಿತ್ರರೊಂದಿಗೆ ಹೊಲದಲ್ಲಿ ಸಹಭೋಜನ ಸವಿದರು. ಧಾರವಾಡ ಜಿಲ್ಲೆಯ ಕೆಲವೆಡೆ ಶನಿವಾರ ಶೀಗೆ ಹುಣ್ಣಿಮೆ ಆಚರಣೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts