More

    ಅಶೋಕಪುರಂ ಮಣ್ಣಿನಲ್ಲಿ ಶ್ರೀನಿವಾಸ ಪ್ರಸಾದ್ ಲೀನ

    ಮೈಸೂರು: ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ, ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಹುಟ್ಟಿ, ಬೆಳೆದ ಅಶೋಕಪುರಂನ ಮಣ್ಣಲ್ಲೇ ಮಣ್ಣಾದರು.


    ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಸುಕಿನಲ್ಲಿ ನಿಧನರಾದ ಅವರು ಕೊನೆಯಲ್ಲಿ ಅಶೋಕಪುರಂ ಮಣ್ಣಿನಲ್ಲೇ ಮಂಗಳವಾರ ಲೀನರಾದರು.


    ಅವರು ಹಾಡಿ ಬೆಳೆದ ಅಶೋಕಪುರಂ ಬೀದಿಗಳಲ್ಲಿ ಸಾಗಿದ ಅಂತಿಮ ಯಾತ್ರೆಗೆ ಸಾರ್ವಜನಿಕರು ನಮನ ಸಲ್ಲಿಸಿದರು. ಬಳಿಕ ಅಶೋಕಪುರಂನ ರೇಷ್ಮೆ ಕಾರ್ಖಾನೆ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಶೈಕ್ಷಣಿಕ ಮತ್ತು ಹಾಗೂ ಸಾಂಸ್ಕೃತಿಕ ಟ್ರಸ್ಟ್ ಆವರಣದಲ್ಲಿ ಬೌದ್ಧಧರ್ಮದ ಅನುಸಾರ ಮಧ್ಯಾಹ್ನ 3.05 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಿತು.


    ಇದಕ್ಕೂ ಮುನ್ನ ಅಶೋಕಪುರಂನ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪ್ರಸಾದ್ ಅವರ ಪಾರ್ಥಿವ ಶರೀರಕ್ಕೆ ಜನರು ಅಂತಿಮ ನಮನ ಸಲ್ಲಿಸಿದರು. ಬಳಿಕ ವಿಶೇಷವಾಗಿ ಅಲಂಕರಿಸಲಾಗಿದ್ದ ವಾಹನದಲ್ಲಿ ಶವಪೆಟ್ಟಿಗೆಯನ್ನು ಇರಿಸಲಾಯಿತು. ಮಧ್ಯಾಹ್ನ 12.07ರ ಸುಮಾರಿಗೆ ಅಂತಿಮಯಾತ್ರೆ ಆರಂಭಗೊಂಡಿತು. ಅಲ್ಲಿನ ಪ್ರಮುಖ ರಸ್ತೆಯಲ್ಲಿ ಸಾಗಿ ಬಂದ ಯಾತ್ರೆ ರೇಷ್ಮೆ ಕಾರ್ಖಾನೆ ವೃತ್ತ, ಮಾನಂದವಾಡಿ ಹೆದ್ದಾರಿಯಲ್ಲಿ ಸಾಗಿ ಪ್ರಸಾದ್ ಅವರ ಟ್ರಸ್ಟ್ ಆವರಣಕ್ಕೆ ಆಗಮಿಸಿತು.

    mysore


    ಹಿರಿಯ ರಾಜಕಾರಣಿಗಳು ಗೌರವ ಸಲ್ಲಿಸಿದರು. ಪೊಲೀಸ್ ವಾದ್ಯದಿಂದ ರಾಷ್ಟ್ರಗೀತೆಯ ಮೂಲಕ ನಮನ ಸಲ್ಲಿಸಲಾಯಿತು. ಪೊಲೀಸರು ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ ಗೌರವ ಅರ್ಪಿಸಿದರು. ಶವಪೆಟ್ಟಿಗೆ ಮೇಲಿದ್ದ ರಾಷ್ಟ್ರ ಧ್ವಜವನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಪ್ರಸಾದ್ ಪತ್ನಿ ಭಾಗ್ಯಲಕ್ಷ್ಮೀ ಅವರಿಗೆ ಹಸ್ತಾಂತರಿಸಿದರು.


    ಬೆಂಗಳೂರಿನ ಥೇರಾ ಮಹಾಬೋಧಿ ಸೊಸೈಟಿಯ ಆನಂದ್ ಭಂತೇಜಿ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ನಡೆಯಿತು. ಈ ಸಂದರ್ಭದಲ್ಲಿ ‘ಬುದ್ಧಂ ಶರಣಂ ಗಚ್ಛಾಮಿ’ ಗೀತೆ ರಿಂಗಣಿಸಿತು. ಬುದ್ಧ ವಂದನೆ, ಧಮ್ಮ ವಂದನೆ, ಸಂಘ ವಂದನೆ, ಪುಣ್ಯಾನು ಬೋಧನೆಯೊಂದಿಗೆ ಬಂತೇಜಿಗಳು ದೀಪ, ಧೂಪ, ಪುಷ್ಪ ಪೂಜೆಯನ್ನು ಅರ್ಪಿಸಿದರು.


    ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಮನೋರಖ್ಖಿತ ಬಂತೇಜಿ, ಕಲ್ಯಾಣಸಿರಿ ಬಂತೇಜಿ, ಬೋಧಿದತ್ತ ಬಂತೇಜಿ, ನಾಗರತ್ನ ಬಂತೇಜಿ, ಬೋಧಿರತ್ನ ಬಂತೇಜಿ, ಸಮನರಿಯ ಭಂತೇಜಿ, ಧಮ್ಮಚಾರಿಗಳಾದ ಪುಟ್ಟಸ್ವಾಮಿ, ಬಸವರಾಜು, 20 ಉಪಾಸಕರು ಅಂತ್ಯಕ್ರಿಯೆ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದರು.


    ಪ್ರಸಾದ್ ಅವರ ಪತ್ನಿ ಭಾಗ್ಯಲಕ್ಷ್ಮೀ, ಪುತ್ರಿಯರಾದ ಪ್ರತಿಮಾ, ಪೂರ್ಣಿಮಾ, ಪೂನಂ, ಅಳಿಯಂದಿರಾದ ಐಆರ್‌ಎಸ್ ಅಧಿಕಾರಿ ಪಿ.ದೇವರಾಜ, ಮಾಜಿ ಶಾಸಕ ಬಿ.ಹರ್ಷವರ್ಧನ್, ವೈದ್ಯ ಡಾ.ಎನ್.ಎಸ್.ಮೋಹನ್ ಮತ್ತು ಐವರು ಮೊಮ್ಮಕ್ಕಳು ಅಂತಿಮ ಗೌರವ ಅರ್ಪಿಸಿ ಕಂಬನಿ ಮಿಡಿದರು.

    ಅಂತಿಮ ದರ್ಶನಕ್ಕೆ ಅಪಾರ ಜನಸ್ತೋಮ


    ವಿ.ಶ್ರೀನಿವಾಸಪ್ರಸಾದ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಂಗಳವಾರವೂ ಜನಸಾಗರವೇ ಹರಿದು ಬಂದಿತು. ಚಾಮರಾಜನಗರ, ಮೈಸೂರು ಜಿಲ್ಲೆಯಿಂದ ದೌಡಾಯಿಸಿದ ಅವರ ಅಭಿಮಾನಿಗಳು ಅಂತಿಮ ದರ್ಶನ ಪಡೆದು ಅಶ್ರುತರ್ಪಣ ಅರ್ಪಿಸಿದರು.


    ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ರಾಜಕಾರಣಿ ಪಿಜಿಆರ್ ಸಿಂಧ್ಯಾ, ಸಂಸದ ಪ್ರತಾಪ್ ಸಿಂಹ, ಬಿಜೆಪಿ ಅಭ್ಯರ್ಥಿಗಳಾದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಡಾ.ಸಿ.ಎನ್.ಮಂಜುನಾಥ್, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಇತರರು ಅಂತಿಮ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts