More

    ಭಿನ್ನಾಭಿಪ್ರಾಯ ನಿವಾರಿಸಿಕೊಳ್ಳುತ್ತೇವೆ: ಕಿಮ್ಮನೆ ರತ್ನಾಕರ್, ಮಂಜುನಾಥ ಗೌಡ ಜಂಟಿ ಘೋಷಣೆ

    ತೀರ್ಥಹಳ್ಳಿ: ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ನಿವಾರಿಸಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥ ಗೌಡ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ನಮ್ಮಿಬ್ಬರ ಅಭಿಪ್ರಾಯವನ್ನು ಕ್ರೋಡೀಕರಿಸಿಯೇ ಜಿಲ್ಲಾಧ್ಯಕ್ಷರು ಭಿನ್ನಮತ ಶಮನಗೊಳಿಸಿರುವುದಾಗಿ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು. ನಾವು ಪಕ್ಷದ ಟಿಕೆಟ್ ಕೇಳೋದು ತಪ್ಪೇ? ಬಿಜೆಪಿಯಲ್ಲಿ ಸೊರಬ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ ಹಾಗೂ ಸಾಗರದಲ್ಲೂ ಗೊಂದಲ ಇಲ್ಲವೇ ಎಂದು ಪ್ರಶ್ನಿಸಿದರು.
    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ವಿಶೇಷವಾಗಿ ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲೂ ಇರುವಂತೆ ಕಾಂಗ್ರೆಸ್‌ನಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅದು ಮನೆಯೊಳಗಿನ ಜಗಳ. ಇದಕ್ಕೆ ವಿಶೇಷ ಅರ್ಥ ಕೊಡುವ ಅಗತ್ಯವಿಲ್ಲ. ಜತೆಗೆ ಈ ಕ್ಷೇತ್ರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
    ಟಿಕೆಟ್ ಅಕಾಂಕ್ಷಿಗಳು ಎಷ್ಟು ಮಂದಿ ಇದ್ದರೂ ಯಾರಿಗೆ ಟಿಕೆಟ್ ಕೊಡಬೇಕು ಎಂದು ತೀರ್ಮಾನಿಸುವ ಹಕ್ಕು ಕಾಂಗ್ರೆಸ್ ಹೈಕಮಾಂಡ್‌ನದು. ತೀರ್ಥಹಳ್ಳಿ ಕ್ಷೇತ್ರದಿಂದ ಮೂವರು ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ. ಪಕ್ಷ ಯಾರಿಗೇ ಅವಕಾಶ ನೀಡಿದರೂ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಬೇಕಿದೆ. ಪಕ್ಷದ ನಿರ್ಣಯವೇ ಅಂತಿಮ. ಮೊದಲಿಗೆ ಫೆ.8ರಂದು ತಾಲೂಕಿಗೆ ಆಗಮಿಸಲಿರುವ ಪ್ರಜಾಧ್ವನಿ ಯಾತ್ರೆಯ ಯಶಸ್ಸಿನ ಬಗ್ಗೆ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.
    ಬಿಜೆಪಿ ಬಜೆಟ್‌ನಲ್ಲಿ ಘೋಷಿಸುವ ಕಾರ್ಯಕ್ರಮಗಳು ಯಾವುದೂ ಜಾರಿಗೆ ಬರುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳು ಕೇವಲ ಘೋಷಣೆಗೆ ಸೀಮಿತವಾಗಿವೆ. ಶೇ.40 ಭ್ರಷ್ಟಾಚಾರದಿಂದ ಮುಳುಗಿರುವ ರಾಜ್ಯ ಸರ್ಕಾರಕ್ಕೆ ಸಿಬ್ಬಂದಿಗೆ ವೇತನ ನೀಡುವುದಕ್ಕೂ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಜನತೆಗೆ ಮುಖ ತೋರಿಸುವ ನೈತಿಕತೆ ಕಳೆದುಕೊಂಡಿದ್ದು ಸ್ಥಳೀಯ ಚುನಾವಣೆಗಳಿಗೂ ಪ್ರಧಾನಿ ನರೇಂದ್ರ ಮೋದಿಯೇ ಮತ ಕೇಳಲು ಬರುವಂತಾಗಿದೆ ಎಂದು ಟೀಕಿಸಿದರು.
    ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನೀಡಿದ್ದ ಎಲ್ಲ ಯೋಜನೆಗಳನ್ನೂ ಮರು ಜಾರಿ ಮಾಡುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts