More

    ಭಿಕ್ಷೆ ಬೇಡದಿದ್ದರೆ ಈ ಬಾಲಕರಿಗೆ ಉಪವಾಸ!

    ರಾಣೆಬೆನ್ನೂರ: ಈ ಕುಟುಂಬಗಳು ಕರೊನಾ ಲಾಕ್​ಡೌನ್​ನಿಂದ ಬೇಸತ್ತು ಹೋಗಿದ್ದವು. ತುತ್ತು ಅನ್ನಕ್ಕೆ ನಿತ್ಯವೂ ಪರದಾಡುತ್ತಿದ್ದವು. ಈಗ ಲಾಕ್​ಡೌನ್ ಸಡಿಲಿಕೆ ಆಗಿದೆ. ಆದರೂ ಈ ಕುಟುಂಬಗಳ ಹಿರಿಯರು ದುಡಿಯಲು ಹೋಗುವ ಬದಲು ಮಕ್ಕಳಿಂದ ಭಿಕ್ಷಾಟನೆ ಮಾಡಿಸುತ್ತಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ನಗರ ಸೇರಿ ತಾಲೂಕಿನಾದ್ಯಂತ ದೇವರ ಮೂರ್ತಿಗಳನ್ನು ತಲೆ ಮೇಲೆ ಹೊತ್ತು, ಭಿಕ್ಷೆ ಬೇಡುತ್ತ ಓಡಾಡುತ್ತಿರುವವರ ಮಕ್ಕಳ ಸಂಖ್ಯೆ ಹೆಚ್ಚಾಗತೊಡಗಿದೆ. 10ರಿಂದ 15 ವಯಸ್ಸಿನ ಬಾಲಕರು ಹಾಗೂ ಬಾಲಕಿಯರು ಅಂಗಡಿ, ಬಸ್ ನಿಲ್ದಾಣ, ಸಾರ್ವಜನಿಕರ ಸ್ಥಳಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆ.

    ಚಿಕ್ಕ ವಯಸ್ಸಿನಲ್ಲಿ ಶಿಕ್ಷಣ ಪಡೆಯಬೇಕಾದ ಈ ಮಕ್ಕಳು ಅರಿವಿಲ್ಲದೆ ಬಾರ್ ಆಂಡ್ ರೆಸ್ಟೋರೆಂಟ್​ಗಳ ಒಳಗೆ ಭಿಕ್ಷಾಟನೆಗಾಗಿ ನುಗ್ಗುತ್ತಿದ್ದು, ಮದ್ಯ ವ್ಯಸನಿಗಳ ತಮಾಷೆಯ ಗೊಂಬೆಗಳಾಗುತ್ತಿದ್ದಾರೆ. ಭಿಕ್ಷೆ ನೀಡದಿದ್ದಾಗ ಕೈ-ಕಾಲು ಹಿಡಿಯುತ್ತಾರೆ. ಮೈಗೆ ಹಗ್ಗದಿಂದ ಹೊಡೆದುಕೊಂಡು ಸಾರ್ವಜನಿಕರ ಮನಕುಲಕುವಂತಹ ಸಂದರ್ಭ ಹುಟ್ಟುಹಾಕುತ್ತಿದ್ದಾರೆ.

    ಗಮನಹರಿಸಬೇಕಿದೆ ಅಧಿಕಾರಿಗಳು: ಈ ರೀತಿ ಭಿಕ್ಷಾಟನೆಗೆ ಓಡಾಡುವ ಮಕ್ಕಳು ನಿತ್ಯವೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ, ತಹಸೀಲ್ದಾರ್ ಕಚೇರಿ, ಪೊಲೀಸ್ ಠಾಣೆ ಸೇರಿ ಸರ್ಕಾರಿ ಕಚೇರಿಗಳ ಸುತ್ತಮುತ್ತ ಓಡಾಡುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಂಡು ಮಕ್ಕಳಿಂದ ನಡೆಯುತ್ತಿರುವ ಭಿಕ್ಷಾಟನೆ ತಡೆಯಬೇಕಿದೆ.

    ಮಕ್ಕಳಿಗೆ ಶಿಕ್ಷಣ ಕೊಡಿ: ಸರ್ಕಾರವು ಪ್ರತಿಯೊಂದು ಮಗುವಿಗೆ ಶಿಕ್ಷಣ ಕಡ್ಡಾಯ ಮಾಡಿದೆ. ಆದರೆ, ಕೆಲ ಪಾಲಕರ ಕಾರಣದಿಂದಾಗಿ ಮಕ್ಕಳು ಭಿಕ್ಷಾಟನೆ, ಕೂಲಿ ಕೆಲಸ ಮಾಡಲು ಮುಂದಾಗುತ್ತಿದ್ದಾರೆ. ಅಂಥವರನ್ನು ಅಧಿಕಾರಿಗಳು ಗುರುತಿಸಿ ಅಗತ್ಯ ಕ್ರಮಕೈಗೊಳ್ಳಬೇಕಿದೆ.

    ಕರೊನಾ ಬಗ್ಗೆ ಇಲ್ಲ ಅರಿವು: ದೇವರ ಮೂರ್ತಿ ಹೊತ್ತು ಬರುವ ಮಕ್ಕಳಿಗೆ ಕರೊನಾ ಸೋಂಕಿನ ಬಗ್ಗೆ ಯಾವುದೇ ಅರಿವು ಇಲ್ಲವಾಗಿದೆ. ಹೀಗಾಗಿ, ಮಕ್ಕಳು ಮಾಸ್ಕ್ ಸಹ ಧರಿಸುತ್ತಿಲ್ಲ. ಕಂಡ ಕಂಡ ಬಸ್, ಕಾರುಗಳ ಬಳಿ ಹೋಗಿ ಭಿಕ್ಷೆ ಕೇಳುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಡಲೆ ಎಚ್ಚೆತ್ತುಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

    ಮನೆಯಲ್ಲಿ ದೊಡ್ಡವರು ದುಡಿಯೋಕೆ ಹೋಗಲ್ಲ. ನಮ್ಮ ಕೈಗೆ ದೇವರ ಫೋಟೋ, ಇಲ್ಲವೇ ತಲೆ ಮೇಲೆ ದೇವರ ಮೂರ್ತಿ ಇಟ್ಟು ಹೊರಗೆ ಕಳುಹಿಸುತ್ತಾರೆ. ನಾವು ಭಿಕ್ಷೆ ಬೇಡಲು ಹೋಗಲ್ಲ ಎಂದರೂ ಕೇಳುವುದಿಲ್ಲ. ನಿನಗೆ ಊಟ ಬೇಕಾದರೆ ಭಿಕ್ಷೆ ಬೇಡಿ ಹಣ ತೆಗೆದುಕೊಂಡು ಬಾ ಎಂದು ಮನೆಯಿಂದ ಹೊರಗೆ ಹಾಕುತ್ತಾರೆ. ಜನರು ಬೈದು ಹಣ ಕೊಡುತ್ತಾರೆ. ಕೆಲವರು ಮೈ ಮೇಲೆ ಹೊಡೆದುಕೊಂಡರೆ ಮಾತ್ರ ದುಡ್ಡು ಕೊಡುತ್ತಾರೆ. ನಮಗೂ ಓದಬೇಕು ಎಂಬ ಆಸೆಯಿದೆ. ಆದರೆ, ಮನೆಯಲ್ಲಿ ಓದೋಕೆ ಬಿಡಲ್ಲ.
    – ಭಿಕ್ಷಾಟನೆ ಮಾಡುವ ಬಾಲಕ

    ಮಕ್ಕಳ ಕೈಯಿಂದ ಭಿಕ್ಷೆ ಬೇಡಿಸುವುದು ಅಪರಾಧ. ನಗರದಲ್ಲಿ ಭಿಕ್ಷೆ ಬೇಡುತ್ತಿರುವ ಕುರಿತು ಕೂಡಲೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
    | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts