More

    ಭಾರತೀಯ ಮುಸ್ಲಿಮರಿಗೆ ತೊಂದರೆಯಿಲ್ಲ

    ಗದಗ: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸಮಾಜ ಬಾಂಧವರು ಆತಂಕಕ್ಕೆ ಒಳಗಾಗಬಾರದು ಎಂದು ಬಿಜೆಪಿ ಮುಖಂಡ ಇರ್ಷಾದ್ ಮಾನ್ವಿ ಹೇಳಿದರು.

    ನಗರದ ತೋಂಟದಾರ್ಯ ಮಠದ ಮುಂಭಾಗದಲ್ಲಿ ಎಬಿವಿಪಿ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿಗಾಗಿ ಮಂಗಳವಾರ ಆಯೋಜಿಸಿದ್ದ ಮಹಾತಿರಂಗಾ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಸ್ವಾರ್ಥ ಸಾಧನೆಗೆ ಅನೇಕರು ಅಮಾಯಕ ಮುಸ್ಲಿಮರ ತಲೆ ಕೆಡಿಸುತ್ತಿದ್ದಾರೆ. ಪೌರತ್ವ ಕಾಯ್ದೆ ಮೂಲಕ ಭಾರತದಲ್ಲಿರುವ ಮುಸ್ಲಿಮರನ್ನು ಹೊರಹಾಕಲು ಯತ್ನಿಸುತ್ತಿದ್ದಾರೆ ಎಂದು ಹುಯಿಲೆಬ್ಬಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಮುಸ್ಲಿಮರಿಗೆ ಮತದಾನ ಹಕ್ಕು, ಆಧಾರ್ ಕಾರ್ಡ್, ಪಡಿತರ ಚೀಟಿ ನೀಡಲಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರಿಗೆ ಅನೇಕ ಯೋಜನೆ ರೂಪಿಸಿದೆ. ಉಜ್ವಲ ಉಚಿತ ಗ್ಯಾಸ್ ಸಂಪರ್ಕ ಯೋಜನೆಯನ್ನು ಮುಸ್ಲಿಂ ಸಮಾಜದವರೇ ಹೆಚ್ಚು ಪಡೆದುಕೊಂಡಿದ್ದಾರೆ. ಇಷ್ಟೆಲ್ಲ ಸೌಲಭ್ಯ ನೀಡಿದವರೇ ನಮ್ಮನ್ನು ದೇಶದಿಂದ ಹೊರಹಾಕುತ್ತಾರೆ? ನಮ್ಮ ಅಜ್ಜ, ಮುತ್ತಜ್ಜ ಭಾರತದ ಮಣ್ಣಿನಲ್ಲಿಯೇ ಹುಟ್ಟಿ ಬೆಳೆದು ತೀರಿಹೋಗಿದ್ದಾರೆ. ನೂರಾರು ವರ್ಷಗಳ ಇತಿಹಾಸ ನಮಗೆ ಇರುವುದರಿಂದ ನಮ್ಮನ್ನು ಹೊರಹಾಕುತ್ತಾರೆ ಎಂದರೆ ನಂಬಲು ಸಾಧ್ಯವೇ? ಇದೆಲ್ಲವೂ ರಾಜಕೀಯ ಕಾರಣಕ್ಕಾಗಿ ವಿವಾದ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಪೌರತ್ವ ಕಾಯ್ದೆ ಜಾರಿಯಿಂದ ಮುಸ್ಲಿಮರಿಗೆ ತೊಂದರೆ ಉಂಟಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ದೇಶದಲ್ಲಿರುವ ಅನ್ಯ ದೇಶೀಯರು ಈ ಕಾಯ್ದೆ ಬಗ್ಗೆ ಆತಂಕ ವ್ಯಕ್ತಪಡಿಸಬಹುದು, ವಿರೋಧಿಸಬಹುದು. ಆದರೆ, ಈ ದೇಶದಲ್ಲಿ ಹುಟ್ಟಿ ಬೆಳೆದ ನಮಗೆಂತಹ ಭಯ, ಆತಂಕ. ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ಜಾರಿಯಾಗಿದ್ದು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಇದರಲ್ಲಿ ಸಮಾಜಕ್ಕೆ ತೊಂದರೆ ಆಗುವಂತಹ ಅಂಶಗಳಿದ್ದರೆ ಅವುಗಳನ್ನು ತೆಗೆದುಹಾಕಬೇಕೆಂದು ಮನವಿ ಸಲ್ಲಿಸುವುದು ನ್ಯಾಯಯುತ ಮಾರ್ಗ. ಅದನ್ನು ಬಿಟ್ಟು ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿಗಳನ್ನು ಹಾಳು ಮಡುವುದು ಸರಿಯಲ್ಲ ಎಂದರು.

    ಪೌರತ್ವ ಕಾಯ್ದೆಯಲ್ಲಿ ಏನೇನಿದೆ ಎಂಬುದನ್ನು ಮುಸ್ಲಿಮರು ಅರಿತುಕೊಳ್ಳಬೇಕು. ತಿಳಿವಳಿಕೆ ಪಡೆದುಕೊಂಡರೆ ಮಾತ್ರ ಇಂಥವರಿಗೆ ಪಾಠ ಕಲಿಸಬಹುದು ಎಂದು ಅವರು ಹೇಳಿದರು.

    ಮುಖಂಡ ಗಂಗಾಧರ ಹಣಜಗಿ ಮಾತನಾಡಿದರು. ಮಹಾಲಕ್ಷ್ಮೀ ಭೂಶಿ, ಅಭಿಷೇಕ ಹಡಪದ, ಸಚಿನ್ ಮಡಿವಾಳರ, ಸಚಿನ್ ಪಾಟೀಲ, ಮಹಾಂತೇಶ ಮಣಕವಾಡ, ಮಂಜುಳಾ ಚಕ್ರಸಾಲಿ, ಯಮನೂರ ಹೊಸಮನಿ, ದೇವಾನಂದ ಮಾಳಗಿ, ರಮೇಶ ಲೊಂಡೆ, ಆಕಾಶ ಜನಿವಾರದ, ಪವನ್ ಕದಡಿ, ಜಗನ್ನಾಥ, ದೀಪಾ, ಜ್ಯೋತಿ ಮತ್ತಿತರರು ಪಾಲ್ಗೊಂಡಿದ್ದರು.

    ಇದಕ್ಕೂ ಮುನ್ನ ನಗರದ ಕೆವಿಎಸ್​ಆರ್ ಕಾಲೇಜ್​ನಿಂದ ಹೊರಟ ಮಹಾತಿರಂಗಾ ಯಾತ್ರೆ ಕೆಸಿ ರಾಣಿ ರಸ್ತೆ ಮೂಲಕ ತೋಂಟದಾರ್ಯಮಠದ ಬಳಿ ನಿರ್ವಿುಸಿದ್ದ ವೇದಿಕೆಗೆ ಬಂದು ತಲುಪಿತು. ಯಾತ್ರೆಯಲ್ಲಿ ಕೆವಿಎಸ್​ಆರ್ ಕಾಲೇಜ್, ಮನೋರಮಾ ಕಾಲೇಜ್, ಜೆಟಿ ಕಾಲೇಜ್, ಸನ್ಮಾರ್ಗ ಕಾಲೇಜ್​ನ 500ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಯಾತ್ರೆಯಲ್ಲಿ 200 ಮೀಟರ್ ಉದ್ದದ ತ್ರಿವರ್ಣ ಧ್ವಜವನ್ನು ಹೊತ್ತುಕೊಂಡು ಸಾಗಿದ್ದಲ್ಲದೇ, ಭಾರತ್ ಮಾತಾಕಿ ಜೈ ಎಂದು ಘೋಷಣೆಗಳನ್ನು ಕೂಗಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts