More

    ಭಾರತೀಯ ಕುಸ್ತಿಗಿದೆ ಪಾರಂಪರಿಕ ಇತಿಹಾಸ

    ಧಾರವಾಡ: ಭಾರತೀಯ ಕುಸ್ತಿಗೆ ಪಾರಂಪರಿಕ ಇತಿಹಾಸವಿದೆ. ಇದು ದ್ವಾಪರ ಯುಗದಲ್ಲಿ ಮಲ್ಲಯುದ್ಧ ಎಂದು ಕರೆಯಿಸಿಕೊಳ್ಳುತ್ತಿತ್ತು. ಉತ್ತಮ ಕುಸ್ತಿ ಆಡಿದವರೇ ಹಿಂದೆ ರಾಜರಾದ ಉದಾಹರಣೆಗಳಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ 4 ದಿನಗಳ ಕರ್ನಾಟಕ ಕುಸ್ತಿ ಹಬ್ಬಕ್ಕೆ ಶನಿವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು. ಕುಸ್ತಿ ಕೆಲಸ ಇಲ್ಲದವರು ಆಡುವ ಆಟ ಎಂಬ ಮಾನಸಿಕತೆ ಸರಿಯಲ್ಲ. ಕುಸ್ತಿಗೆ ಕುಶಲತೆ, ದೈಹಿಕ ಶಕ್ತಿ ಹಾಗೂ ತೀವ್ರತೆ ಬೇಕು. ಪ್ರತಿಯೊಬ್ಬರ ಜೀವನದಲ್ಲೂ ಇವು ಅನ್ವಯ ಆಗುತ್ತವೆ. ಇಂದು ಜನರ ಆರೋಗ್ಯ ಸೂಕ್ಷ್ಮವಾಗುತ್ತಿದೆ. ಟಿವಿ ಚಾನೆಲ್​ಗಳಿಂದ ದೈಹಿಕ ಚಟುವಟಿಕೆ ಇಲ್ಲದಂತಾಗಿದೆ. ಈಗ ವಾಟ್ಸ್ ಆಪ್ ಹಾಗೂ ಯೂಟ್ಯೂಬ್ ಹಾವಳಿ ಹೆಚ್ಚಾಗಿದೆ. ಇದರಿಂದ ದೈಹಿಕ ವ್ಯಾಯಾಮಕ್ಕೆ ಪ್ರೋತ್ಸಾಹ ಇಲ್ಲದಂತಾಗಿದೆ. ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಈ ಉದ್ದೇಶದಿಂದ ಕೇಂದ್ರ ಸರ್ಕಾರ ಫಿಟ್ ಇಂಡಿಯಾ, ಖೇಲೋ ಇಂಡಿಯಾ ಮೂಲಕ ಮಹತ್ವ ನೀಡುತ್ತಿದೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಧಾರವಾಡದಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜನೆ ಮಾಡಲಾಗಿದೆ. ಟಿವಿ, ಮೊಬೈಲ್​ಗಳ ಮಧ್ಯೆಯೂ ವ್ಯವಸ್ಥಿತವಾಗಿ ಕುಸ್ತಿ ನಡೆಯುತ್ತಿದೆ. ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಅವರಿಗೆ ಈ ಮೂಲಕ ವೇದಿಕೆ ಕಲ್ಪಿಸಲಾಗಿದೆ ಎಂದರು.

    ಶಾಸಕ ಅಮೃತ ದೇಸಾಯಿ ಮಾತನಾಡಿ, ಈ ದಿನ ಇತಿಹಾಸದ ಪುಟಗಳಲ್ಲಿ ಬರೆದಿಡುವ ದಿನ. ಕುಸ್ತಿ ಪಂದ್ಯಾವಳಿ ಆಯೋಜನೆಗಾಗಿ ಸಚಿವರಾದ ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್ ಸಹಕಾರ ನೀಡಿದ್ದಾರೆ. 1,270 ಪಟುಗಳು ಕುಸ್ತಿಗೆ ನೋಂದಣಿ ಮಾಡಿಸಿದ್ದು ಇತಿಹಾಸ. ಅದರಲ್ಲಿ 200 ಮಹಿಳಾ ಪಟುಗಳಿರುವುದು ಹೆಮ್ಮೆಯ ಸಂಗತಿ ಎಂದರು.

    ಶಾಸಕ ಸಿ.ಎಂ. ನಿಂಬಣ್ಣವರ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ತಾ.ಪಂ. ಅಧ್ಯಕ್ಷ ಈರಪ್ಪ ಏಣಗಿ, ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಇತರರಿದ್ದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಮಹ್ಮದ್ ಜುಬೇರ್ ವಂದಿಸಿದರು.

    ಸನ್ಮಾನ: ಹಿರಿಯ ಪೈಲ್ವಾನರಾದ ಆನಂದ ಹೊಳೆಹಡಗಲಿ, ಅರ್ಜುನ ಖಾನಾಪುರ, ಅಶೋಕ ಏಣಗಿ, ಮೌಲಾಸಾಬ ನದಾಫ್, ಸೈಯದ್ ಮೊರಬ, ಬಸವರಾಜ ಇಟಿಗಟ್ಟಿ, ಬಸವರಾಜ ಗಾಯಕವಾಡ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

    ಮೊದಲ ದಿನ ವಿಜೇತ ವನಿತೆಯರು

    ಕರ್ನಾಟಕ ಕುಸ್ತಿ ಹಬ್ಬದ ಮೊದಲ ದಿನ ಹೊನಲು ಬೆಳಕಿನ ಮಹಿಳೆಯರ ವಿವಿಧ ವಿಭಾಗಗಳ ಸ್ಪರ್ಧೆಗಳ ವಿಜೇತರು.

    72 ಕೆಜಿ ವಿಭಾಗದಲ್ಲಿ ಬೆಂಗಳೂರಿನ ಶ್ವೇತಾ ವಿರುದ್ಧ ದಕ್ಷಿಣ ಕನ್ನಡದ ಅನುಶ್ರೀ ಜಯ. 76 ಕೆಜಿ ವಿಭಾಗದಲ್ಲಿ ಮಂಗಳೂರಿನ ಪ್ರಿಯಾಂಕಾ ವಿರುದ್ಧ ಬೆಳಗಾವಿಯ ಐಶ್ವರ್ಯಾ ದಳವಿ ಜಯ. 68 ಕೆಜಿ ವಿಭಾಗದಲ್ಲಿ ತುಮಕೂರಿನ ಕಾವ್ಯಾ ವಿರುದ್ಧ ಬೆಂಗಳೂರಿನ ಕಸ್ತೂರಿ ಗೆಲುವು. ಗದಗಿನ ರೂಪಾ ವಿರುದ್ಧ ದಕ್ಷಿಣ ಕನ್ನಡದ ತುಷಾರಾ ಜಯ. 65 ಕೆಜಿ ವಿಭಾಗದಲ್ಲಿ ತುಮಕೂರಿನ ವೇದಶ್ರೀ ವಿರುದ್ಧ ಬೆಳಗಾವಿಯ ಪೂಜಾ ದಳವಿ ಜಯ. ಬಾಗಲಕೋಟೆಯ ಗಾಯತ್ರಿ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಸಾವಕ್ಕ ತೇಗೂರಕರ್ ಜಯ. 62 ಕೆಜಿ ವಿಭಾಗದಲ್ಲಿ ರಾಮನಗರದ ಶೋಭಾ ವಿರುದ್ಧ ದಕ್ಷಿಣ ಕನ್ನಡದ ಆಕಾಂಕ್ಷಾ ಜಯ. ಬೆಂಗಳೂರಿನ ಶ್ರಾವಣಿ ವಿರುದ್ಧ ರಾಮನಗರದ ಕುಸುಮಾ ಜಯ. 55 ಕೆಜಿ ವಿಭಾಗದಲ್ಲಿ ತುಮಕೂರಿನ ಶಬನಮ್ ವಿರುದ್ಧ ಮಂಗಳೂರಿನ ಭಾರತಿ ಮತ್ತು ಬೆಂಗಳೂರಿನ ದಿವ್ಯಾ ವಿರುದ್ಧ ಗದಗಿನ ಶಹೀದಾ ಬಳಿಗಾರ ಜಯ. 57 ಕೆಜಿ ವಿಭಾಗದಲ್ಲಿ ಗದಗಿನ ಸ್ಪೂರ್ತಿ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಮಹಾಲಕ್ಷ್ಮೀ ಹಾಗೂ ಮಂಡ್ಯದ ಮಮತಾ ವಿರುದ್ಧ ಹಳಿಯಾಳದ ಗಾಯತ್ರಿ, ಗದಗಿನ ಸ್ಪೂರ್ತಿ ವಿರುದ್ಧ ಮಂಗಳೂರಿನ ಡೆಲ್ಪಿ ಜಯ. ತುಮಕೂರಿನ ಕುಸುಮಾ ವಿರುದ್ಧ ಮಂಡ್ಯದ ಮಮತಾ ಜಯ. 59 ಕೆಜಿ ವಿಭಾಗದಲ್ಲಿ ಬೆಳಗಾವಿಯ ಪಲ್ಲವಿ ವಿರುದ್ಧ ದಾವಣಗೆರೆಯ ಮಮತಾ ಎಲ್. ಗೆಲುವು ದಾಖಲಿಸಿದರು. ಫೆ. 23ರಂದು 14 ಮತ್ತು 17 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಸ್ಪರ್ಧೆಗಳು ಜರುಗಲಿವೆ.

    ಐಶ್ವರ್ಯಾ ದಳವಿ ಶುಭಾರಂಭ

    ಧಾರವಾಡ: ನಗರದ ಕೆಸಿಡಿ ಮೈದಾನದಲ್ಲಿ ಶನಿವಾರ ಸಂಜೆ ಜರುಗಿದ ಉದ್ಘಾಟನಾ ಪಂದ್ಯದಲ್ಲಿ ಬೆಳಗಾವಿಯ ಐಶ್ವರ್ಯಾ ದಳವಿ, ಮಂಗಳೂರಿನ ಮಂಗಳೂರಿನ ಪ್ರಿಯಾಂಕಾ ರೇವಣಕರ ಅವರನ್ನು ಚಿತ್ ಮಾಡುವ ಮೂಲಕ ಶುಭಾರಂಭ ಮಾಡಿದರು.

    ಅಂತಾರಾಷ್ಟ್ರೀಯ ಕುಸ್ತಿಪಟು ಐಶ್ವರ್ಯಾ, ಪಂದ್ಯ ಆರಂಭವಾಗುತ್ತಿದ್ದಂತೆ ಎದುರಾಳಿ ಪ್ರಿಯಾಂಕಾಳನ್ನು ಕೇವಲ 26 ಸೆಕೆಂಡ್​ಗಳಲ್ಲಿ ಚಿತ್ ಮಾಡಿದರು. ಕೆಸಿಡಿ ಮೈದಾನದ ತುಂಬ ಕಿಕ್ಕಿರಿದು ಸೇರಿದ್ದ ಕುಸ್ತಿಪಟುಗಳು, ಕುಸ್ತಿ ಪ್ರೇಮಿಗಳು ಕರತಾಡನದ ಮೂಲಕ ಪ್ರೋತ್ಸಾಹಿಸಿದರು. 76 ಕೆಜಿ ವಿಭಾಗದ ಸೆಣಸಾಟದಲ್ಲಿ ಐಶ್ವರ್ಯಾ ಎದುರಾಳಿಯನ್ನು ಚಿತ್ ಮಾಡಿ ಕ್ರೀಡಾಪ್ರೇಮಿಗಳ ಉತ್ಸಾಹವನ್ನು ಮತ್ತಷ್ಟು ಇಮ್ಮಡಿಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts