More

    ಭಾನುವಾರ 21 ಪಾಸಿಟಿವ್ ಪತ್ತೆ

    ಕಾರವಾರ: ಜಿಲ್ಲೆಯ 21 ಜನರಿಗೆ ಭಾನುವಾರ ಕೋವಿಡ್-19 ಖಚಿತವಾಗಿದೆ. ಭಟ್ಕಳದ 9, ಕುಮಟಾ ಹಾಗೂ ಮುಂಡಗೋಡಿನ ತಲಾ 3 ಕಾರವಾರ ಹಾಗೂ ದಾಂಡೇಲಿಯ ತಲಾ 2, ಹಳಿಯಾಳ ಹಾಗೂ ಯಲ್ಲಾಪುರ ತಾಲೂಕಿನಲ್ಲಿ ತಲಾ ಒಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

    ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 354 ಕ್ಕೆ ಏರಿಕೆಯಾಗಿದೆ, ಅದರಲ್ಲಿ 159 ಮಂದಿ ಮಾತ್ರ ಗುಣ ಹೊಂದಿದ್ದು, ಇನ್ನೂ 194 ಸಕ್ರಿಯ ಪ್ರಕರಣಗಳಿವೆ. ಭಟ್ಕಳದಲ್ಲಿ ಖಾಸಗಿ ಆಸ್ಪತ್ರೆ ನರ್ಸ್ ಸಂಪರ್ಕಕ್ಕೆ ಬಂದ 78 ವರ್ಷದ ವೃದ್ಧೆಗೆ, ಮದುವೆಯಲ್ಲಿ ಭಾಗವಹಿಸಿದ್ದ ಏಳು ಜನರಿಗೆ ಹಾಗೂ ಕೇರಳದಿಂದ ವಾಪಸಾದ ಒಬ್ಬ ವ್ಯಕ್ತಿಗೆ ರೋಗ ಖಚಿತವಾಗಿದೆ.

    ಇಎಸ್​ಐ ಆಸ್ಪತ್ರೆ ಸೀಲ್​ಡೌನ್: ದಾಂಡೇಲಿಯಲ್ಲಿ ಇಎಸ್​ಐ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿ 25 ವರ್ಷದ ಗರ್ಭಿಣಿಗೆ ಸೋಂಕು ಕಂಡುಬಂದಿದೆ. ಆಸ್ಪತ್ರೆಯನ್ನು ಸೀಲ್​ಡೌನ್ ಮಾಡಲಾಗಿದೆ. ಹಳಿಯಾಳ ರಸ್ತೆಯ ಅಲ್ಲೈಡ್ ಇಂಡಸ್ಟ್ರಿ ನಿವಾಸಿ ಕಾರ್ ಚಾಲಕನಿಗೆ ಕರೊನಾ ಬಂದಿದೆ. ಕೆಲ ದಿನಗಳ ಹಿಂದೆ ಗದಗದಿಂದ ಇಬ್ಬರನ್ನು ಕಾರಿನಲ್ಲಿ ದಾಂಡೇಲಿಗೆ ಕರೆತಂದಿದ್ದ. ಅವರಿಗೆ (ಪಿ-14571, 14572) ಸೋಂಕು ಖಚಿತವಾಗಿತ್ತು. ಚಾಲಕನನ್ನು ಕ್ವಾರಂಟೈನ್​ನಲ್ಲಿ ಇಡಲಾಗಿತ್ತು.

    ಹೊರಗೆ ಹೋಗದವರಿಗೂ ಸೋಂಕು: ಕಾರವಾರದಲ್ಲಿ ಕದ್ರಾ ಕೆಪಿಸಿ ಕಾಲನಿಯ ಸಿ ಟೈಪ್ ಮನೆಯ 62 ವರ್ಷದ ವೃದ್ಧನಿಗೆ ಸೋಂಕು ಖಚಿತವಾಗಿದ್ದು, ಆ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗಿದೆ. ಇನ್ನು 49 ವರ್ಷದ ಮಹಿಳೆಗೆ ಸೋಂಕು ಖಚಿತವಾಗಿದೆ. ಇಬ್ಬರೂ ಹೊರಗೆಲ್ಲೂ ಓಡಾಡದೇ ಇರುವವರಿಗೆ ಸೋಂಕು ಖಚಿತವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

    ನರ್ಸ್​ಗೆ ಸೋಂಕು: ಪುಣೆಯಿಂದ ವಾಪಸಾಗಿ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದ ಹಳಿಯಾಳದ 32 ವರ್ಷದ ಮಹಿಳೆಗೆ ಎರಡನೇ ಬಾರಿಯ ಪರೀಕ್ಷೆಯಲ್ಲಿ ಸೋಂಕು ಖಚಿತವಾಗಿದ್ದು, ಮನೆಯವರನ್ನು ಕ್ವಾರಂಟೈನ್ ಮಾಡಲಾಗಿದೆ.

    ಮುಂಡಗೋಡಿನ ನಡು ಬೀದಿಗೆ: ಮುಂಡಗೋಡು ಪಟ್ಟಣದ ಪ್ರಮುಖ ವ್ಯಾಪಾರದ ಕೇಂದ್ರ ಬಸವನ ಬೀದಿಯಲ್ಲಿ 44 ವರ್ಷದ ವ್ಯಾಪಾರಸ್ಥ ಹಾಗೂ ಅವರ 22 ವರ್ಷದ ಮಗಳಿಗೆ ರೊಗ ಖಚಿತವಾಗಿದೆ. ಇಬ್ಬರೂ ಹೊರಗಡೆ ಓಡಾಟದ ಸಂಪರ್ಕ ಹೊಂದಿಲ್ಲ. ಆದರೆ, ಬೇರೆ ಊರಿನಿಂದ ಬಂದವರಿಂದ ರೋಗ ಹರಡಿರಬಹುದು ಎಂದು ಅಂದಾಜಿಸಲಾಗಿದೆ. ನಿತ್ಯ ಸಾವಿರಾರು ಜನ ಓಡಾಡುವ ಬೀದಿಯನ್ನು ಸೀಲ್​ಡೌನ್ ಮಾಡಲಾಗಿದೆ.

    ಇನ್ನು ಬೆಂಗಳೂರಿನಿಂದ ವಾಸಪಾಗಿದ್ದ ಮಜ್ಜಿಗೇರಿಯ 21 ವರ್ಷದ ಯುವಕನಿಗೆ ಸೋಂಕು ಖಚಿತವಾಗಿದೆ. ಡೆಂಘೆ ಹಾಗೂ ಕರೊನಾ ಎರಡೂ ಕಂಡುಬಂದ ಹಿನ್ನೆಲೆಯಲ್ಲಿ ಯುವಕನೊಬ್ಬನ ಗಂಟಲ ದ್ರವದ ಮಾದರಿಯನ್ನು ಎರಡನೇ ಪರೀಕ್ಷೆಗೆ ಬೆಂಗಳೂರಿಗೆ ಕಳಿಸಲಾಗಿತ್ತು. ಆತನ ದ್ರವದ ಮಾದರಿ ನೆಗೆಟಿವ್ ಬಂದಿದ್ದು, ಜನ ನಿಟ್ಟುಸಿರು ಬಿಡುವಂತಾಗಿದೆ.

    ಕುಮಟಾದ ಮೂವರಿಗೆ: ಯಲ್ಲಾಪುರದ 35ವರ್ಷದ ಪುರುಷನಿಗೆ ರೋಗ ಖಚಿತವಾಗಿದ್ದು, ಆತನ ಸಂಪರ್ಕದ ವಿವರ ಇನ್ನಷ್ಟೇ ತಿಳಿಯಬೇಕಿದೆ. ಕುಮಟಾ ಪಟ್ಟಣ, ಮಿರ್ಜಾನ ಹಾಗೂ ಹೊಸಪಟ್ಟಣದ ಒಬ್ಬರಿಗೆ ರೋಗ ಕಂಡುಬಂದಿದೆ. ಒಟ್ಟಾರೆ ಇಬ್ಬರು ಮಹಿಳೆಯರು ಒಬ್ಬ ಪುರುಷನಿಗೆ ರೋಗ ಕಂಡುಬಂದಿದ್ದು, ಎಲ್ಲರ ಸಂಪರ್ಕ, ಸಂಚಾರದ ವಿವರ ಹುಡುಕಲಾಗುತ್ತಿದೆ.

    6 ಜನರ ಬಿಡುಗಡೆ: ಕರೊನಾದಿಂದ ಗುಣ ಹೊಂದಿದ 6 ಜನರನ್ನು ಭಾನುವಾರ ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ ಪ್ರಮಾಣಪತ್ರ ನೀಡಿ ಬಿಡುಗಡೆ ಮಾಡಿದರು. ಹಳಿಯಾಳದ 5ವರ್ಷದ ಬಾಲಕ, ಮುಂಡಗೋಡು, ಹೊನ್ನಾವರದ ತಲಾ ಒಬ್ಬ ಮಹಿಳೆಯರು. ಹೊನ್ನಾವರದ ಪುರುಷ, ಭಟ್ಕಳದ ಯುವಕ, ಯಲ್ಲಾಪುರದ ಕಂಡಕ್ಟರ್ ಬಿಡುಗಡೆ ಹೊಂದಿದರು.

    ಹೊರ ಜಿಲ್ಲೆಯಿಂದ ಬಂದವರಿಗೆ ಆರೋಗ್ಯ ಪರೀಕ್ಷೆ : ಹೊರ ಜಿಲ್ಲೆಯಿಂದ ಆಗಮಿಸಿ ಜಿಲ್ಲೆಯಲ್ಲಿ ಮೂರು ದಿನ ಇರುವ ವ್ಯಕ್ತಿಗಳಿಗೆ ಆರೋಗ್ಯ ಪರೀಕ್ಷೆ ಕಡ್ಡಾಯ ಮಾಡಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ.ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಎಲ್ಲ ತಹಸೀಲ್ದಾರರು, ಪೊಲೀಸ್ ಅಧಿಕಾರಿಗಳು ಕಾಳಜಿ ವಹಿಸಬೇಕು. ಆದೇಶ ಉಲ್ಲಂಘಿಸುವವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯ ಅನ್ವಯ ಕ್ರಮ ವಹಿಸುವುದಾಗಿ ಎಚ್ಚರಿಸಿದ್ದಾರೆ.

    ಮಾರಿಕಾಂಬಾ ದೇವಸ್ಥಾನ ಸೀಲ್​ಡೌನ್
    ಶಿರಸಿ:
    ನಗರದ ವ್ಯಕ್ತಿಯೊಬ್ಬರಿಗೆ ಭಾನುವಾರ ಕೋವಿಡ್-19 ದೃಢಪಟ್ಟಿದ್ದರಿಂದ ಮಾರಿಕಾಂಬಾ ದೇವಸ್ಥಾನವನ್ನು ಸೀಲ್​ಡೌನ್ ಮಾಡಿ ಒಂದು ವಾರಗಳ ಕಾಲ ಪ್ರವೇಶ ನಿರ್ಬಂಧಿಸಲಾಗಿದೆ. ದೇವಸ್ಥಾನ ಪಕ್ಕದ ಮನೆಯ ವ್ಯಕ್ತಿಯೊಬ್ಬ ಕಿರಾಣಿ ಖರೀದಿ ನಿಮಿತ್ತ ಹುಬ್ಬಳ್ಳಿಗೆ ತೆರಳಿ ಜೂ. 26ರಂದು ಶಿರಸಿಗೆ ವಾಪಸ್ಸಾಗಿದ್ದ. ನಂತರ ಕಿರಾಣಿ ವಸ್ತುಗಳನ್ನು ನಗರದ ಹಲವು ಅಂಗಡಿಗಳಿಗೆ ವಿತರಿಸಿದ್ದ. ಜತೆಗೆ ಮಾರಿಕಾಂಬಾ ದೇವಾಲಯಕ್ಕೆ ನಿತ್ಯವೂ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದ. ಜುಲೈ 1ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ. ವೈದ್ಯರು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದು, ನಂತರ ಆ ವ್ಯಕ್ತಿಯ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಮಾರಿಕಾಂಬಾ ದೇವಸ್ಥಾನದ ಪೂಜೆ ಹೊರತುಪಡಿಸಿ ಅನ್ಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ದೇವಸ್ಥಾನವನ್ನು ನಿತ್ಯ ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟೇಶ ನಾಯ್ಕ ಮಾಹಿತಿ ನೀಡಿದ್ದಾರೆ.

    ಗೋಕರ್ಣದಲ್ಲಿ ಗಂಟಲ ದ್ರವ ಪರೀಕ್ಷೆ
    ಗೋಕರ್ಣ:
    ಜ್ವರ ಮತ್ತು ಕೆಮ್ಮು ಪೀಡಿತರ ಗಂಟಲ ದ್ರವ ಪರೀಕ್ಷೆಯನ್ನು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ನಡೆಸಲಾಯಿತು. ಗೋಕರ್ಣ ಮತ್ತು ಬಂಕಿಕೊಡ್ಲ ಭಾಗದ ಒಟ್ಟು 30 ಜನರ ಪರೀಕ್ಷೆ ಮಾಡಲಾಯಿತು. ಸೋಮವಾರವೂ ಪರೀಕ್ಷೆ ಮುಂದುವರಿಯಲಿದೆ. ವರದಿ ಬಂದ ಬಳಿಕ ಮುಂದಿನ ತಪಾಸಣೆಗೆ ಕಾರವಾರದ ಕ್ರಿಮ್ಸ್​ಗೆ ಕಳುಹಿಸಲಾಗುವುದು ಎಂದು ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ ತಿಳಿಸಿದ್ದಾರೆ.

    ಪರೀಕ್ಷೆಗೆ ಈತನಕ ದೂರದ ಕುಮಟಾಕ್ಕೆ ಅಲೆದಾಡಬೇಕಿತ್ತು. ಈ ಬಗ್ಗೆ ಜು. 3ರಂದು ವಿಜಯವಾಣಿ ವರದಿ ಮಾಡಿತ್ತು. ಜಿಲ್ಲಾ ಆರೋಗ್ಯ ಇಲಾಖೆ ಗೋಕರ್ಣದಲ್ಲಿ ಗಂಟಲ ದ್ರವ ಪರೀಕ್ಷೆ ಪ್ರಾರಂಭಿಸಿರುವ ಬಗ್ಗೆ ಸ್ಥಳೀಯವಾಗಿ ಪ್ರಶಂಸೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಪಂ ಸದಸ್ಯ ಪ್ರದೀಪ ನಾಯಕ, ಆರೋಗ್ಯ ಇಲಾಖೆಯ ಈ ಕ್ರಮದಿಂದ ರೋಗ ಶಂಕಿತರಿಗೆ, ವಿಶೇಷವಾಗಿ ಸಾಮಾನ್ಯ ಜನರಿಗೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts