More

    ಭಾಗೋಡೇಶ್ವರ ದೊಡ್ಡದೇವರ ಜಾತ್ರೆ ಅದ್ದೂರಿ

    ಚಿತ್ರದುರ್ಗ: ಬಿಲ್ಲಿನ ಕುರುಬ ಸಮುದಾಯದವರ ಮನೆದೈವ ಭಾಗೋಡೇಶ್ವರ ಸ್ವಾಮಿಯ ದೊಡ್ಡದೇವರ ಜಾತ್ರೆ, ಅಶ್ವರೂಢ ಸ್ವಾಮಿಯ ನೂತನ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಅದ್ದೂರಿಯಾಗಿ ಜರುಗಿತು.

    ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ತಾಲೂಕಿನ ಬ್ರಹ್ಮಸಮುದ್ರ ಮಂಡಲದ ಕೋನಾಪುರ ಗ್ರಾಮ ಇದಕ್ಕೆ ಸಾಕ್ಷಿಯಾಯಿತು. ಜಿಲ್ಲೆಯ ಭಕ್ತರಲ್ಲೂ ಸಡಗರ ಮನೆ ಮಾಡಿತ್ತು. ಇದೇ ವೇಳೆ ಹರ ಹರ ಮಹಾದೇವ್ ಎಂಬ ಹರ್ಷೋದ್ಗಾರ ಮೊಳಗಿತು. ಇದೇ ವೇಳೆ ಪೂಜಾರಿ ಪಟ್ಟಾಭಿಷೇಕ ಕಾರ್ಯಕ್ರಮವೂ ನೆರವೇರಿತು.

    ಕಾಮಸಮುದ್ರದ ಕರಿಯಣ್ಣ ಸ್ವಾಮಿ, ಪೋಲೇನಹಳ್ಳಿ ಮಾಲೂರಪ್ಪ ಸ್ವಾಮಿ, ವುಡೇವು ಮತ್ತು ಕೋನಾಪುರದ ಭಾಗೋಡೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಹಂಪಿಗೆ ಕರೆದೊಯ್ದು ತುಂಗಾ ನದಿಯಲ್ಲಿ ಗಂಗಾಪೂಜೆ ನೆರವೇರಿಸಲಾಯಿತು.

    ಸ್ವಾಮಿಯ ಮೂರ್ತಿಗಳಿಗೆ ವಿಶೇಷ ಅಲಂಕಾರ ಸೇವೆ, ಛತ್ರ-ಛಾಮರ, ಉರುಮೆ, ಡೊಳ್ಳು ವಾದ್ಯಗಳ ಸಮೇತ ಮೆರವಣಿಗೆ ಮೂಲಕ ಕರೆದೊಯ್ದು ಗ್ರಾಮದಲ್ಲೂ ಗಂಗಾಪೂಜೆ ನಡೆಯಿತು. ಬಿಲ್ಲಿನ ಕುರುಬರು ಹಾಗೂ ನೆಂಟರಿಷ್ಟರು ಮಡಿಲಕ್ಕಿ ಸಮರ್ಪಿಸಿದರು.

    ಪ್ರಧಾನ ಅರ್ಚಕ ಲಿಂಗಾರೆಡ್ಡಿ ಪುತ್ರ ನಂದನ್ ಚಕ್ರವರ್ತಿಗೆ ಪೂಜಾರಿ ಪಟ್ಟಾಭಿಷೇಕ ಮಹೋತ್ಸವ ಜರುಗಿತು. ರಾತ್ರಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿಜೃಂಭಣೆಯ ಮೆರವಣಿಗೆ, ಯಲ್ಲಮ್ಮ ಸಾಕಿ ಪೂಜಾ ಕೈಂಕರ್ಯ ನಡೆಯಿತು.

    ಜಾತ್ರಾ ಮಹೋತ್ಸವದ ಅಂಗವಾಗಿ ಭಾಗೋಡೇಶ್ವರ ಸ್ವಾಮಿ, ಆರೂಢ ಚನ್ನಮಲ್ಲಪ್ಪಸ್ವಾಮಿ ದೇಗುಲವನ್ನು ತಳಿರು ತೋರಣ, ಪುಷ್ಪಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

    ದಾವಣಗೆರೆ ಸೇರಿ ಚಿತ್ರದುರ್ಗ ತಾಲೂಕಿನ ಐನಹಳ್ಳಿ ಕುರುಬರಹಟ್ಟಿ, ಮಾಳಪ್ಪನಹಟ್ಟಿ, ಮಾಡನಾಯಕನ ಹಳ್ಳಿ, ಕೋನಾಪುರ, ಕಲ್ಯಾಣದುರ್ಗ, ಅನಂತಪುರ, ಬೆಂಗಳೂರು ಒಳಗೊಂಡು ರಾಜ್ಯದ ವಿವಿಧೆಡೆಯ ಭಕ್ತರು ಮೂರು ದಿನ ನಡೆದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

    ಭಾಗೋಡೇಶ್ವರಸ್ವಾಮಿ ದೊಡ್ಡದೇವರ ಜಾತ್ರೆ 200 ವರ್ಷಗಳ ನಂತರ ನಡೆದಿದೆ. ಇಷ್ಟೊಂದು ಕಳೆಗಟ್ಟಲು ಮುಖ್ಯವಾಗಿ ಚಿತ್ರದುರ್ಗ ಭಾಗದ ಭಕ್ತರು ನೀಡಿದ ಸಹಕಾರ ಕಾರಣ ಎಂದು ಪ್ರಧಾನ ಅರ್ಚಕ ಲಿಂಗಾರೆಡ್ಡಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts