More

    ಭರವಸೆ ಈಡೇರಿಸದಿದ್ದರೆ ಜೆಡಿಎಸ್ ವಿಸರ್ಜನೆ


    ನೆಲಮಂಗಲ
    ಜೆಡಿಎಸ್‌ಗೆ 5 ವರ್ಷ ಆಡಳಿತ ಕೊಟ್ಟು ಅವಕಾಶ ನೀಡಿದರೆ ರಾಜ್ಯದ ಪ್ರತಿ ಕುಟುಂಬಗಳು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸಿಕೊಡುತ್ತೇನೆ. ಸಾಧ್ಯವಾಗದಿದ್ದರೆ ಪಕ್ಷ ವಿಸರ್ಜಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.
    ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
    ಕಳೆದ ಬಾರಿಯ ಚುನಾವಣೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗಬೇಡಿ, ಜೆಡಿಎಸ್ ಸ್ಪಷ್ಟ ಬಹುಮತ ಬಂದಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂಬ ಮಾತುಕೊಟ್ಟಿದ್ದೆ. ಕಾಂಗ್ರೆಸ್ ಮುಖಂಡರು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲ್ಲ ನಂಬಬೇಡಿ ಅಂದರು. ಆದರೆ ಜೆಡಿಎಸ್‌ಗೆ 37 ಸ್ಥಾನ ದೊರೆತವು. ಮೈತ್ರಿ ಸರ್ಕಾರ ರಚನೆಯಾದ ಮೇಲೆ ಎಲ್ಲ ಕಾರ್ಯಕ್ರಮಗಳನ್ನು ಮುಂದುವರಿಸುವುದು, ಯಾವುದೇ ಅನುದಾನ ಕಡಿತಗೊಳಿಸುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಿದ ಕಾಂಗ್ರೆಸ್, ರೈತರ ಸಾಲಮನ್ನಾ ಮಾಡಬೇಡಿ ಅಂದರು. ಇಂತಹ ಪರಿಸ್ಥಿತಿಯಲ್ಲೂ ರಾಜ್ಯದ 26 ಲಕ್ಷ ರೈತರ ಸಾಲಮನ್ನಾ ಮಾಡಿ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ. ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇನ್ನೂ ಲಕ್ಷಾಂತರ ರೈತರ ಸಾಲದ ಹಣ ನೀಡಲು ಸಾಧ್ಯವಾಗಿಲ್ಲ ಎಂದರು.
    ನಿತ್ಯ ಮನೆಬಾಗಿಲಿಗೆ ಬಂದು ಕಷ್ಟಗಳನ್ನು ಹೇಳಿಕೊಳ್ಳುವ ತಾಯಂದಿರು, ರೈತರು ಹಾಗೂ ಯುವಕರ ಬಗ್ಗೆ ಗಂಭೀರವಾಗಿ ಚಿಂತಿಸಿ ಪಂಚರತ್ನ ಯೋಜನೆ ರೂಪಿಸಲಾಗಿದೆ. ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಶಾಲೆ ನಿರ್ಮಿಸಿ 1ರಿಂದ 12ನೇ ತರಗತಿವರೆಗೂ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಕೊಡುವುದು, ಶಸ್ತ್ರಚಿಕಿತ್ಸೆಗಳಿಗೆ ತಗಲುವ ಲಕ್ಷಾಂತ ರೂ.ವೆಚ್ಚವನ್ನು ಸರ್ಕಾರದಿಂದಲೇ ಭರಿಸುವುದು, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವುದು, ಮುಂಗಾರಿನಲ್ಲಿ ರೈತರ ಪ್ರತಿ ಎಕರೆಗೆ ಭಿತ್ತನೆ ಬೀಜ, ರಸಗೊಬ್ಬರ ಖರೀದಿಗಾಗಿ 10 ಸಾವಿರ, ಸ್ವಾಭಿಮಾನಿ ಸ್ವಾವಲಂಬಿ ಜೀವನ ನಡೆಸಲು ಯುವಕರಿಗೆ ಸಬ್ಸಿಡಿ ದರದಲ್ಲಿ ಆರ್ಥಿಕ ನೆರವು, ಶೈಕ್ಷಣಿಕ ಸಾಲಮನ್ನಾ ಮಾಡುವುದು, ಸ್ತ್ರೀಶಕ್ತಿ ಸಂಘದ ಸಾಲಮನ್ನಾ ಮಾಡುವ ಅನೇಕ ಅಂಶಗಳನ್ನು ಪಂಚರತ್ನ ಯೋಜನೆಯಲ್ಲಿ ಅಳವಡಿಸಲಾಗಿದೆ ಎಂದರು.
    ಮೆಟ್ರೋ ವಿಸ್ತರಣೆಗೆ ಮನವಿ: ಮೆಟ್ರೋ ಯೋಜನೆಯನ್ನು ನೆಲಮಂಗಲಕ್ಕೂ ವಿಸ್ತರಣೆ ಮಾಡುವಂತೆ ಕಾರ್ಯಕರ್ತರು ಮನವಿ ಮಾಡಿದರು. ದೇಶದಲ್ಲೇ ಮೊಟ್ಟ ಮೊದಲ ಮೆಟ್ರೋ ರೈಲು ಯೋಜನೆಯನ್ನು ಜಾರಿಗೆ ತಂದ ಕೀರ್ತಿ ಎಚ್.ಡಿ.ದೇವೇಗೌಡರಿಗೆ ಸಲ್ಲುತ್ತದೆಯಾದರೆ, ಬೆಂಗಳೂರಿನಲ್ಲಿ ಮೊದಲ 19 ಕಿಮೀ ದೂರದ ಮೆಟ್ರೋ ರೈಲು ಯೋಜನೆಗೆ 2006 ರಲ್ಲಿ ಅಡಿಗಲ್ಲು ಹಾಕಿದ್ದು ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರು- ಹಾಸನ ಮಾರ್ಗದ ರಾ.ಹೆದ್ದಾರಿ ಅಭಿವೃದ್ಧಿ ಪಡಿಸಲಾಗಿದೆ. ಬೆಂಗಳೂರು ನೆಲಮಂಗಲ ಮೇಲ್ಸೇತುವೆ ಪ್ರಾಜೆಕ್ಟ್ ಮಾಡಲಾಗಿದೆ ಎಂದು ಮಾಡಿದ ಕಾರ್ಯಗಳನ್ನು ಜಾಹೀರಾತು ಹಾಕಿಕೊಳ್ಳದೆ ಕರ್ತವ್ಯ ಎಂದು ಭಾವಿಸಿರುವುದಾಗಿ ಎಚ್‌ಡಿಕೆ ಪ್ರತಿಕ್ರಿಯೆ ನೀಡಿದರು.
    ಸಮೀಕ್ಷೆ ನಂಬಬೇಡಿ: ಕೆಲ ಸುದ್ದಿವಾಹಿನಿಗಳು ಸಿ.ವೋಟರ್ ಸಮೀಕ್ಷೆ ಹೆಸರಿನಲ್ಲಿ ಸುಳ್ಳು ವರದಿ ಬಿತ್ತರ ಮಾಡುತ್ತಿವೆ. ಬೆಳಗ್ಗೆ ತೋರಿಸಿದ ವರದಿ ಸಂಜೆ ವೇಳೆಗೆ ಬದಲಾಗಲಿವೆ. ಆದ್ದರಿಂದ ರಾಜ್ಯದ ಜನತೆ ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. 123 ಗುರಿ ತಲುಪಲು 2 ಬಾರಿ ಹೃದಯ
    ಚಿಕಿತ್ಸೆಯನ್ನೂ ಲೆಕ್ಕಿಸದೆ ಶ್ರಮಿಸುತ್ತಿರುವುದಾಗಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
    ನನ್ನದು ಏಕಾಂಗಿ ಹೋರಾಟ: ರಾಜ್ಯದೆಲ್ಲೆಡೆ ಜೆಡಿಎಸ್ ಸ್ಪರ್ಧೆ ಮಾಡುತ್ತಿದ್ದು, ಮೇ1ರಿಂದ ಉತ್ತರ ಕರ್ನಾಟದ 28 ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಾ ಏಕಾಂಗಿ ಹೋರಾಟ ಮಾಡುತ್ತಿದ್ದೇನೆ. ಜನತಾ ಜಲಧಾರೆ, ಪಂಚರತ್ನ ಯೋಜನೆಗಳ ಮನೆಮನೆಗಳಲ್ಲಿ ಬಾರಿ ಚರ್ಚೆಯಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ 25ಕ್ಕೂ ಹೆಚ್ಚು ಸ್ಥಾನಗಳು ಬರಲಿವೆ. ಆದರೆ ನೀರಾವರಿ ಸಮಸ್ಯೆ, ಕಷ್ಟಕಾಲದಲ್ಲಿ ಬಾರದ ಬಿಜೆಪಿ ಮತ್ತು ಕಾಂಗ್ರೆಸ್‌ನ ದೆಹಲಿ ನಾಯಕರ ದಂಡು ರಾಜ್ಯಕ್ಕೆ ಬಂದು ಬೀಡುಬಿಟ್ಟಿದೆ ಎಂದು ಎಚ್.ಡಿ.ಕೆ. ಲೇವಡಿ ಮಾಡಿದರು.
    ಹಲವರು ಉಪಸ್ಥಿತಿ: ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಬೂದಿಹಾಳ್‌ರಾಜು, ಉಪಾಧ್ಯಕ್ಷ ಹನುಮಂತರಾಜು, ಸೋಲೂರು ಹೋಬಳಿ ಅಧ್ಯಕ್ಷ ಶಿವರುದ್ರಪ್ಪ, ಸೋಂಪುರ ಹೋಬಳಿ ಅಧ್ಯಕ್ಷ ಮೋಹನ್‌ಕುಮಾರ್, ಕಸಬಾ ಹೋಬಳಿ ಅಧ್ಯಕ್ಷ ಕೆಂಪರಾಜು, ನಗರಸಭೆ ಸದಸ್ಯ ಎನ್.ಗಣೇಶ್, ಸದಸ್ಯರಾದ ಕೆ.ಎಂ.ಶಿವಕುಮಾರ್, ಆಂಜಿನಪ್ಪ, ಸುನೀಲ್ ಮೂಡ್, ನರಸಿಂಹಮೂರ್ತಿ, ಪಾಪಣ್ಣಿ, ಪದ್ಮನಾಭ್, ಪುಷ್ಪಲತಾಮಾರೇಗೌಡ, ಪೂರ್ಣಿಮಾ ಸುಗ್ಗರಾಜು, ಶಾರದಾ ಉಮೇಶ್, ಭಾರತಿಭಾಯಿ, ಗ್ರಾಪಂ ಮಾಜಿಅಧ್ಯಕ್ಷೆ ಲೀಲಾಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಗುರುಪ್ರಕಾಶ್, ಮಾಜಿ ಅಧ್ಯಕ್ಷ ಜಗಜ್ಯೋತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸಾಧಿಕ್‌ಪಾಷಾ, ಎಪಿಎಂಸಿ ನಿರ್ದೇಶಕ ಗೋವಿಂದರಾಜು, ಮುಖಂಡ ಕೋಡಪ್ಪನಹಳ್ಳಿವೆಂಕಟೇಶ್, ಬಿ.ಎಂ.ಶ್ರೀನಿವಾಸ್, ಹೆಚ್.ಜಿ.ರಾಜು, ಬರಗೇನಹಳ್ಳಿ ಪರಮೇಶ್, ಸಿದ್ದಪ್ಪ, ಎಂ.ಜಿ.ಲೋಕೇಶ್, ಉಮೇಶ್ ಗೌಡ, ರಮೇಶ್, ಮಂಜುನಾಥ್, ಸುರೇಶ್, ವೆಂಕಟರಾಯಪ್ಪ, ಮಕ್ಸೂದ್, ಜಲಾಲ್, ಸಿದ್ದಿಕ್ ಎಸ್.ಎಂ.ಟಿ.ಪ್ರಕಾಶ್, ದೇಗನಹಳ್ಳಿಸುರೇಶ್, ವರದನಾರಾಯಣ್, ಪುಟ್ಟರಾಜು, ವೆಂಕಟೇಶ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
    ಜೆಡಿಎಸ್ ಸರ್ಕಾರ: ಜೆಡಿಎಸ್ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಈ ಬಾರಿ ಜೆಡಿಎಸ್‌ಗೆ ಸ್ಪಷ್ಟ ಬಹುಮತ ದೊರೆಯಲಿದ್ದು, ಎಚ್.ಡಿ.ಕುಮಾರಸ್ವಾಮಿ ದೈವಾನುಗ್ರಹದಿಂದ ಮುಖ್ಯಮಂತ್ರಿ ಆಗಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಂತವರ ಮಾರ್ಗದರ್ಶನ ಪಕ್ಷಕ್ಕಿದೆ. ಜೆಡಿಎಸ್‌ನ ಪಂಚರತ್ನ ಯೋಜನೆಗಳ ಬಗ್ಗೆ ಬಾರಿ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ. ಇದರಿಂದ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
    ಪಕ್ಷ ಸೇರ್ಪಡೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಭವಾನಿಗ್ರೂಪ್ ಮಾಲೀಕ ಬೈರೇಗೌಡ, ಪುತ್ರ ಎಚ್.ಬಿ.ಮಂಜುನಾಥ್, ಕರವೇ ಉಪಾಧ್ಯಕ್ಷ ಉಮೇಶ್‌ಗೌಡ, ಕಾಂಗ್ರೆಸ್ ಕಾರ್ಮಿಕ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಕೀಲ ಕನಕರಾಜು, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಪ್ರಕಾಶ್, ನಗರಸಭೆ ನಾಮನಿರ್ದೇಶಿತ ಸದಸ್ಯ ಚಂದ್ರಶೆಟ್ಟಿ ಜೆಡಿಎಸ್ ಸೇರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts