More

    ಭರವಸೆಗಳ ಸಭೆಗೆ ಆಗ್ರಹ

    ದಾವಣಗೆರೆ: ರಾಜ್ಯದಲ್ಲಿನ ರೈತ ವಿರೋಧಿ ಕಾನೂನು ತಿದ್ದುಪಡಿಗಳನ್ನು ಸುಗ್ರೀವಾಜ್ಞೆ ಮೂಲಕ ಹಿಂಪಡೆಯವುದು ಸೇರಿ ಒಂಬತ್ತು ಅಂಶಗಳನ್ನು ಈಡೇರಿಸಬೇಕು. ರೈತರಿಗೆ ನೀಡಿದ್ದ ಭರವಸೆಗಳ ಚರ್ಚೆಗೆ ಪ್ರತ್ಯೇಕ ಸಭೆ ಕರೆಯಬೇಕೆಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಘಟಕ ಆಗ್ರಹಿಸಿದೆ.
    ಈ ಸಂಬಂಧ ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ದಾವಣಗೆರೆ ತಹಸೀಲ್ದಾರ್ ಬಿ.ಎನ್. ಅಶ್ವತ್ಥ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿಪತ್ರ ರವಾನಿಸಿದರು.
    ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಕೆಎಸ್ ಜಿಲ್ಲಾಧ್ಯಕ್ಷ ಎಚ್.ಜಿ.ಉಮೇಶ್, ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಬಳಕೆ ಮಿತಿ ಏರಿಕೆ, ಬಡ್ಡಿ ರಹಿತ ಕೃಷಿ ಸಾಲದ ಮಿತಿಯನ್ನು 3ರಿಂದ 10 ಲಕ್ಷ ರೂ.ವರೆಗೆ ಏರಿಸಬೇಕು. ಬೆಂಬಲಬೆಲೆ ಮಾರುಕಟ್ಟೆ ವಿಸ್ತರಣೆ ಮೊದಲಾದ ಭರವಸೆಗಳ ಬಗ್ಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಬೇಕು ಎಂದು ಆಗ್ರಹಿಸಿದರು.
    ಸರ್ಕಾರಿ ಭೂಮಿಯಲ್ಲಿನ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಹಾಗೂ ಭೂಸ್ವಾಧೀನ ಪ್ರಕ್ರಿಯೆ ತಡೆಯಲು ಕಾನೂನು ಜಾರಿಗೊಳಿಸಬೇಕು. ಹೊಸ ಮಾನದಂಡದಡಿ ಅರ್ಜಿ ಸ್ವೀಕರಿಸಿ ಹಕ್ಕುಪತ್ರ ನೀಡಬೇಕು. ಭೂ ಒಡೆತನ ಕೋರಿ ಸಲ್ಲಿಸಲಾದ 94(ಸಿ), 50, 53, 57 ಇತ್ಯಾದಿ ಅರ್ಜಿಗಳನ್ನು ಹಾಗೂ ಪರಿಶಿಷ್ಟ ಜಾತಿ/ವರ್ಗ, ಇತರ ಸಾಂಪ್ರದಾಯಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕು ಮಾನ್ಯತಾ ಕಾನೂನು ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಕಾಲಮಿತಿಯೊಳಗೆ ಪರಿಹರಿಸಬೇಕು.
    ರಾಜ್ಯದ ಸಣ್ಣ, ಅತಿ ಸಣ್ಣ ರೈತರು, ಕೃಷಿ ಕಾರ್ಮಿಕರು, ಕುಶಲಕರ್ಮಿಗಳ ನಿವೇಶನ/ವಸತಿ ಸಮಸ್ಯೆಗಳನ್ನು ಬಗೆಹರಿಸಲು ನೀತಿ ರೂಪಿಸಬೇಕು. 11 ಜಿಲ್ಲೆಗಳಲ್ಲಿ ಕಸ್ತೂರಿರಂಗನ್ ವರದಿ ಅನುಷ್ಠಾನದಲ್ಲಾದ ಸಮಸ್ಯೆಗಳನ್ನು ಮರು ಪರಿಶೀಲಿಸಲು ಕಾನೂನು ಕ್ರಮ ಕೈಗೊಳ್ಳಬೇಕು.
    ಹವಾಮಾನ ವೈಪರಿತ್ಯ, ಬೆಳೆನಷ್ಟ ಮೊದಲಾದ ಸಂದರ್ಭದಲ್ಲಿ ಚರ್ಚಿಸಿ ಪರಿಹಾರ ನೀಡಲು 3 ತಿಂಗಳಿಗೊಮ್ಮೆ ರೈತ ಸಂಘಟನೆಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದ ಸಭೆಗಳನ್ನು ನಡೆಸಬೇಕು. ಅಪೂರ್ಣ ನೀರಾವರಿ ಯೋಜನೆಗಳ ಜತೆಗೆ ಬಾಕಿ ಇರುವ ಕೃಷಿ ಪಂಪ್‌ಸೆಟ್‌ಗಳಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡುವ ಬಗ್ಗೆ ಹಿಂದಿನ ಕಂದಾಯ ಸಚಿವರ ಪ್ರಸ್ತಾವನೆಯನ್ನು ಮರು ಪರಿಶೀಲಿಸಬೇಕೆಂದು ಆಗ್ರಹಿಸಿದರು.
    ಇದಲ್ಲದೆ ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳ ಕುರಿತಂತೆಯೂ ಸರ್ಕಾರ ಮೀನಮೇಷ ಮಾಡದೆ ಆರಂಭಿಸಬೇಕು. ಬೆಸ್ಕಾಂ ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮೇಲಿನ ಹಲ್ಲೆ ತಪ್ಪಿಸಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
    ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಐರಣಿ ಚಂದ್ರು, ಭೀಮಾರೆಡ್ಡಿ, ಸಿದ್ದಲಿಂಗಪ್ಪ ಹಾಲೇಕಲ್, ಆವರೆಗೆರೆ ಬಾನಪ್ಪ, ನರೇಗಾ ರಂಗನಾಥ್, ಕುಂದುವಾಡ ಚಂದ್ರಪ್ಪ, ತಿಪ್ಪೇಶಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts