More

    ಭರದಿಂದ ಸಾಗಿದೆ ಇಂಗುಗುಂಡಿ ನಿರ್ಮಾಣ

    ವಿಜಯವಾಣಿ ಸುದ್ದಿಜಾಲ ಶಿರಸಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಳೆ ನೀರು ಇಂಗುಗುಂಡಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

    ನಾಲ್ಕಾರು ವರ್ಷಗಳಿಂದ ಅಂತರ್ಜಲ ಮಟ್ಟ ಕುಸಿತದಿಂದಾಗಿ ತಾಲೂಕಿನಾದ್ಯಂತ ಬೇಸಿಗೆಯಲ್ಲಿ ಜಲಕ್ಷಾಮ ಎದುರಾಗುತ್ತಿದೆ. ಮಳೆ ನೀರು ಇಂಗಿಸುವುದೇ ಇದಕ್ಕೆ ಪರಿಹಾರ ಎಂದು ನಂಬಿದ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಅವರು ಜಲ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದಾರೆ. ಇದರಿಂದ ಪ್ರೇರಿತರಾದ ನೂರಾರು ಜನರು ತಮ್ಮ ಮನೆಯಲ್ಲಿ ನೀರು ಸಂಗ್ರಹದ ವ್ಯವಸ್ಥೆ ಅಳಡಿಸಿಕೊಂಡಿದ್ದರು. ಇದನ್ನು ವ್ಯಾಪಕಗೊಳಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮನೆಗಳ ಸಂಖ್ಯೆ ಮತ್ತು ಮನೆಯ ಯಜಮಾನನ ಹೆಸರು ಒಳಗೊಂಡ ಪ್ರಸ್ತಾವನೆಯನ್ನು ತಾಲೂಕು ಪಂಚಾಯಿತಿ ಮೂಲಕ ಜಿಲ್ಲಾ ಪಂಚಾಯಿತಿಗೆ ಕಳುಹಿಸಲಾಗಿತ್ತು. ಅದಕ್ಕೀಗ ಅನುಮೋದನೆ ದೊರೆತಿದೆ.

    ತಾಲೂಕಿನ 25ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ 5,255ಕ್ಕೂ ಹೆಚ್ಚಿನ ಮನೆಗಳು, 367ಕ್ಕೂ ಅಧಿಕ ಸರ್ಕಾರಿ ಕಟ್ಟಡಗಳಿಗೆ ಇಂಗುಗುಂಡಿ ನಿರ್ವಿುಸಿಕೊಳ್ಳಲು ಮಂಜೂರಾತಿ ನೀಡಿದೆ. ಗ್ರಾಮೀಣ ಭಾಗದಲ್ಲಿ ವೈಯಕ್ತಿಕವಾಗಿ ಇಂಗುಗುಂಡಿಗಳ ನಿರ್ಮಾಣ ಕಾರ್ಯ ನಡೆದಿದೆ.

    ಅನುಷ್ಠಾನ ಹೇಗೆ?: ಜಿಲ್ಲಾ ಪಂಚಾಯಿತಿ ಅಂದಾಜು ವೆಚ್ಚದಂತೆ ಪ್ರತಿ ಮನೆಯ ಇಂಗುಗುಂಡಿಗೆ 17,162 ರೂ. ನಿಗದಿಯಾಗಿದೆ. ಈ ಸಂಪೂರ್ಣ ಹಣವನ್ನು ಸರ್ಕಾರವೇ ಅನುದಾನದ ಮೂಲಕ ನೀಡುತ್ತದೆ. ಮನೆಯ ಛಾವಣಿ ಸುತ್ತ ಹರಣಿ ಹಾಕಿ, ಅದಕ್ಕೆ ಪೈಪ್ ಜೋಡಿಸಲಾಗುತ್ತದೆ. ಬಾವಿ ಪಕ್ಕದಲ್ಲಿ ಐದು ಅಡಿ ಆಳದ ಗುಂಡಿ ತೆಗೆದು ನಿರ್ದಿಷ್ಟ ಪ್ರಮಾಣದ ಜೆಲ್ಲಿ, ಮರಳು, ಅಗತ್ಯ ಸಾಮಗ್ರಿಗಳನ್ನು ತುಂಬಿ ಇಂಗುಗುಂಡಿ ನಿರ್ವಿುಸಲಾಗುತ್ತದೆ.

    30 ಮನೆಗಳಲ್ಲಿ ಸಿದ್ಧ: ತಾಲೂಕಿನಲ್ಲಿ ಸದ್ಯ 50ಕ್ಕೂ ಹೆಚ್ಚು ಕಡೆ ಇಂಗುಗುಂಡಿ ನಿರ್ಮಾಣ ಕಾಮಗಾರಿ ನಡೆದಿದೆ. ಈಗಾಗಲೇ ಪ್ರಾಯೋಗಿಕವಾಗಿ ಯೋಜನೆ ಆರಂಭಿಸಿದ ಬಿಸಲಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಭಾಷನಗರದ 30 ಮನೆಗಳಲ್ಲಿ ಇಂಗುಗುಂಡಿ ನಿರ್ವಿುಸಲಾಗಿದೆ. ಆಸಕ್ತರು ನಿಗದಿತ ನಮೂನೆಯಲ್ಲಿ ಗ್ರಾಮ ಪಂಚಾಯಿತಿ ಮೂಲಕ ಅರ್ಜಿ ಸಲ್ಲಿಸಿದರೆ ಕಾಮಗಾರಿಗೆ ಮಂಜೂರಿ ನೀಡಲಾಗುತ್ತಿದೆ. ಈಗಾಗಲೇ ನೂರಕ್ಕೂ ಅಧಿಕ ಇಂಗುಗುಂಡಿ ನಿರ್ವಣಕ್ಕೆ ಅರ್ಜಿ ಸಲ್ಲಿಕೆಯಾಗಿದ್ದು, ಮಂಜೂರಾತಿಯೂ ದೊರೆತಿದೆ. ಕಾಮಗಾರಿ ಪೂರ್ಣಗೊಳಿಸಲು 2 ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಸ್ವಂತ ಮನೆ ಹೊಂದಿದವರು ಅರ್ಜಿ ಸಲ್ಲಿಕೆಗೆ ಅರ್ಹರು. ತಾಲೂಕಿನಲ್ಲಿ ಈಗಾಗಲೇ ಕೆಲ ಆಸಕ್ತರು ಇಂಗುಗುಂಡಿಗಳನ್ನು ಸ್ವಂತ ಖರ್ಚಿನಲ್ಲಿ ನಿರ್ವಿುಸಿಕೊಂಡಿದ್ದಾರೆ.

    ನೀರಿನ ಬವಣೆಯಿಂದ ಪಾರಾಗಲು ಮಳೆ ನೀರು ಇಂಗಿಸುವುದೊಂದೇ ಪರಿಹಾರ. ಹೀಗಾಗಿ, ತಾಲೂಕಿನ ಎಲ್ಲ 32 ಗ್ರಾಮ ಪಂಚಾಯಿತಿಗಳ ಪ್ರತಿ ಮನೆಯಲ್ಲಿ ಇಂಗುಗುಂಡಿ ನಿರ್ವಿುಸಿ ನೀರಿನ ಬರ ಓಡಿಸಲು ಯೋಜನೆ ಸಹಕಾರಿಯಾಗಲಿದೆ. | ಚಂದ್ರು ದೇವಾಡಿಗ ತಾಪಂ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts