More

    ಭದ್ರೆಗೆ 5,300 ಕೋಟಿ ಬಿಡುಗಡೆಗೊಳಿಸಿ

    ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಮೀಸಲಿಟ್ಟಿರುವ 5,300 ಕೋಟಿ ರೂ. ಬಿಡುಗಡೆ ಮಾಡಿಲ್ಲವೆಂದು ಖಂಡಿಸಿ ಸಂಸದರ ಕಚೇರಿಯ ಮುಂದೆ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ, ವಿವಿಧ ಸಂಘಟನೆಗಳು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿವೆ.

    ಕನಕ ವೃತ್ತದಿಂದ ಆರಂಭವಾದ ಮೆರವಣಿಗೆ ಸಂಗೊಳ್ಳಿ ರಾಯಣ್ಣ, ಗಾಂಧಿ, ಎಸ್‌ಬಿಐ, ಒನಕೆ ಓಬವ್ವ, ಮದಕರಿನಾಯಕ ವೃತ್ತದ ಮಾರ್ಗವಾಗಿ ಸಂಚರಿಸಿ ಸಂಸದರ ಕಚೇರಿ ತಲುಪಿತು. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರೈತರು, ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

    ರಾಜ್ಯ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಈ ಯೋಜನೆ ಅನುಷ್ಠಾನಕ್ಕೆ 4 ದಶಕಗಳಿಂದ ಹೋರಾಟ ಮುಂದುವರೆದಿದ್ದರೂ ಪ್ರಯೋಜನವಾಗಿಲ್ಲ. ರಾಜಕಾರಣಿಗಳು ಮೂಗಿಗೆ ತುಪ್ಪ ಸವರುತ್ತ ಗೆದ್ದು ಹೋಗಿದ್ದಾರೆ ಹೊರತು ಜನರು, ರೈತರಿಗಾಗಿ ಸಮಗ್ರ ನೀರಾವರಿ ತರಲು ಪ್ರಯತ್ನಿಸುತ್ತಿಲ್ಲ ಎಂದು ಕಿಡಿಕಾರಿದರು.

    ಕೇಂದ್ರ ಘೋಷಿಸಿರುವ ಅನುದಾನದಲ್ಲಿ ಮೊದಲ ಕಂತಾಗಿ 1 ಸಾವಿರ ಕೋಟಿ ರೂ. ಬಿಡುಗಡೆಯಾಗುವವರೆಗೂ ಇಲ್ಲಿಂದ ಕದಲುವ ಪ್ರಶ್ನೆ ಇಲ್ಲ. ಅಹೋರಾತ್ರಿ ಧರಣಿಗೂ ಸಿದ್ಧರಿದ್ದು, ಫೆ. 6ರಿಂದ ಗ್ರಾಪಂವಾರು ಪ್ರತಿಭಟಿಸಲು ನಿರ್ಧರಿಸಿದ್ದೇವೆ. ಬರಗಾಲದಿಂದ ದೂರವಾಗಲು ಶಾಶ್ವತ ನೀರಾವರಿ ಯೋಜನೆಯೊಂದೆ ಉತ್ತಮ ಪರಿಹಾರವಾಗಿದ್ದು, ಇದು ಜಾರಿಯಾಗಬೇಕು ಎಂದು ಆಗ್ರಹಿಸಿದರು.

    ಕಳೆದ ಎರಡು ವರ್ಷದಿಂದ ಮಳೆಯಾಗಿಲ್ಲ. ಈ ವರ್ಷ ಸಾಧ್ಯತೆ ಕಡಿಮೆ ಎಂಬುದಾಗಿ ಹವಾಮಾನ ಇಲಾಖೆ ವರದಿ ನೀಡಿದೆ. ಇಂತಹ ಭೀಕರ ಬರಗಾಲ 100 ವರ್ಷಗಳ ಹಿಂದೆ ಬಂದಿತ್ತೆಂದು ಸರ್ಕಾರವೇ ಹೇಳುತ್ತಿದೆ. ಪರಿಹಾರ ಎಂಬುದು ಭಿಕ್ಷೆಯಲ್ಲ. ಬಿಡುಗಡೆ ವಿಚಾರದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಮುಂದಾಗಿ, ರೈತರ ನೆರವಿಗೆ ಧಾವಿಸುತ್ತಿಲ್ಲ. ಎರಡೂ ಸರ್ಕಾರ ವಿಭಿನ್ನ ರೀತಿಯಲ್ಲಿ ನಾಟಕವಾಡುತ್ತಿವೆ ಎಂದು ದೂರಿದರು.

    ಸಾಲಕ್ಕೆ ರೈತರು ಹೊಣೆಗಾರರಲ್ಲ. ಅದು ಸರ್ಕಾರ, ಚುನಾಯಿತರ ಜವಾಬ್ದಾರಿ. ಯಾವ ಕಾರಣಕ್ಕೂ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಬ್ಯಾಂಕ್, ಫೈನಾನ್ಸ್ಗಳಿಂದ ಸಾಲ ವಸೂಲಿಗೆ ಬಂದರೆ ಕಂಬಕ್ಕೆ ಕಟ್ಟುತ್ತೇವೆ. ಈ ಕುರಿತು ಕ್ರಮವಹಿಸದಂತೆ ಪೊಲೀಸರಿಗೆ ಸಿಎಂ ಆದೇಶಿಸುವಂತೆ ಮನವಿ ಮಾಡಲಾಗಿದೆ ಎಂದರು.

    ಪ್ರಧಾನ ಕಾರ್ಯದರ್ಶಿ ಈಚಘಟ್ಟ ಸಿದ್ಧವೀರಪ್ಪ ಮಾತನಾಡಿ, ನಿರಂತರ ಬರಗಾಲಕ್ಕೆ ಒಳಗಾಗುತ್ತಿರುವ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ನೀರಾವರಿಯ ಕನಸು ನನಸಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. 4 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಾಗ್ದಾನ 15 ವರ್ಷ ಕಳೆದರೂ ಆಗಿಲ್ಲ. ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹಸಿರುಸೇನೆ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ಸಮಸ್ತ ನಾಗರಿಕರು, ಸಂಘ-ಸಂಸ್ಥೆಗಳು, ವ್ಯಾಪಾರಸ್ಥರು, ಕೃಷಿಕರು, ಇಲ್ಲಿ ಬೆಳೆಯುವ ಉತ್ಪನ್ನಗಳ ಅವಲಂಬಿತರು, ವಿವಿಧ ಸಂಘಟನೆಗಳು ಅನಿರ್ದಿಷ್ಟಾವಧಿ ಧರಣಿ ಬೆಂಬಲಿಸಬೇಕು. ಇಲ್ಲದಿದ್ದರೆ, ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

    ಸಮಗ್ರ ನೀರಾವರಿಗೆ ಹಕ್ಕೋತ್ತಾಯ: ತುಂಗಾದಿಂದ ಭದ್ರಾಕ್ಕೆ ನೀರು ಹರಿಸುವ ಕಾಮಗಾರಿಗೆ ವೇಗ ನೀಡಬೇಕು. ಚಿತ್ರದುರ್ಗದ ಏಕೈಕ ಅಕ್ಷಯ ಪಾತ್ರೆ ವಾಣಿವಿಲಾಸ ಸಾಗರಕ್ಕೆ 5 ಟಿಎಂಸಿ ನೀರು ಖಾತ್ರಿ ಪಡಿಸಬೇಕು. ಜಿಲ್ಲೆಯ ಎಲ್ಲ ಕೆರೆಗಳಿಗೆ ಸಾಸಿವೆಹಳ್ಳಿ ಏತ ನೀರಾವರಿ, ಎತ್ತಿನಹೊಳೆ, ಹೇಮಾವತಿ ನದಿ ನೀರನ್ನು ಬಳಸಿ ಸಮಗ್ರ ನೀರಾವರಿ ಯೋಜನೆ ಕೈಗೊಳ್ಳಬೇಕು. ಇದನ್ನು 5 ತಿಂಗಳೊಳಗೆ ಪೂರ್ಣಗೊಳಿಸಬೇಕು. ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳ ಮಾದರಿಯಲ್ಲಿ ರೈತರ ಹಿತ ಕಾಪಾಡಬೇಕು ಎಂದು ಅನೇಕ ರೈತರು ಸರ್ಕಾರಕ್ಕೆ ಕೋರಿದರು.

    ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ರೈತ ಮುಖಂಡರಾದ ಸೋಮಗುದ್ದು ರಂಗಸ್ವಾಮಿ, ಚಿಕ್ಕಬ್ಬಿಗೆರೆ ನಾಗರಾಜ್, ಬಯಲಪ್ಪ, ಸದಾಶಿವಪ್ಪ, ಮುರುಗೇಂದ್ರಪ್ಪ, ರಾಮರೆಡ್ಡಿ, ಆರ್.ಬಿ.ನಿಜಲಿಂಗಪ್ಪ, ಎನ್.ರಮೇಶ್, ಹೊನ್ನೂರು ಮುನಿಯಪ್ಪ, ಮಂಜುನಾಥ್ ಮುದ್ದಾಪುರ, ಹಂಪಯ್ಯನಮಾಳಿಗೆ ಧನಂಜಯ, ಲಿಂಗಾವರಹಟ್ಟಿ ಕಾಂತರಾಜ್, ಸಿದ್ದರಾಮಣ್ಣ, ವೈ.ಶಿವಣ್ಣ, ಮೀಸೆ ರಾಮಣ್ಣ, ಮೀಸೆ ಗೌಡಪ್ಪ, ಕರುನಾಡ ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts