More

    ಭತ್ತ ಖರೀದಿ ಹೆಸರಲ್ಲಿ ವಂಚನೆ; ಸರ್ಕಾರದಿಂದ ರೈತರ ಶೋಷಣೆ: ಎಂ.ಬಿ.ಮಂಜಪ್ಪ ಹಿರೇನೆಲ್ಲೂರು

    ಸಾಗರ: ಭತ್ತ ಖರೀದಿ ಹೆಸರಿನಲ್ಲಿ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ. ಸಣ್ಣಪುಟ್ಟ ಲೋಪವಿದ್ದರೂ ಖರೀದಿ ಮಾಡದೆ ವಾಪಸ್ ಕಳುಹಿಸಿ ರೈತರನ್ನು ಶೋಷಿಸುತ್ತಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ದೂರಿದರು.
    ಭತ್ತದಲ್ಲಿ ಕಲ್ಲು, ಧೂಳು ಇದೆ ಎಂದು ಖರೀದಿ ಕೇಂದ್ರದಲ್ಲಿ ಭತ್ತ ನಿರಾಕರಿಸುವುದರ ಜತೆಗೆ ಖಾಲಿ ಚೀಲಕ್ಕೆ ಹಣ ಮರುಪಾವತಿ ಮಾಡುವಲ್ಲಿಯೂ ರೈತರನ್ನು ಶೋಷಣೆ ಮಾಡುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದರು.
    ಭತ್ತದಲ್ಲಿ ಅಲ್ಪಸ್ವಲ್ಪ ಧೂಳು, ಕಲ್ಲು ಸಹಜ. ಆದರೆ ಖರೀದಿ ಕೇಂದ್ರದಲ್ಲಿ ವಿಧಿಸಿರುವ ನಿಯಮಗಳು ಭತ್ತ ಮಾರಾಟ ಮಾಡಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಖರೀದಿ ಕೇಂದ್ರದಲ್ಲಿ ವಿಶ್ಲೇಷಣಾ ಪಟ್ಟಿಯ ಎಫ್‌ಎಕ್ಯೂ ಗುಣಮಟ್ಟದ ಪ್ರಕಾರ ಖರೀದಿ ಮಾಡುತ್ತಿರುವುದರಿಂದ ರೈತರು ಖರೀದಿ ಕೇಂದ್ರಕ್ಕೆ ತಂದ ಭತ್ತವನ್ನು ವಾಪಸ್ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಪ್ರತಿದಿನ ಐದರಿಂದ ಹತ್ತು ರೈತರು ಖರೀದಿ ಕೇಂದ್ರದ ನಿಯಮಾವಳಿ ಪ್ರಕಾರ ಭತ್ತ ಮಾರಾಟ ಮಾಡಲು ಸಾಧ್ಯವಾಗದೆ ಖಾಸಗಿ ಮಾರಾಟಗಾರರನ್ನು ಅವಲಂಭಿಸುವ ಸ್ಥಿತಿ ಇದೆ ಎಂದರು.
    ರಾಜ್ಯದ 224 ಜನ ಶಾಸಕರೂ ರೈತ ಪರವಾಗಿ ಇಲ್ಲ. ಭತ್ತ ಖರೀದಿ ಕೇಂದ್ರದಲ್ಲಿ ರೈತರಿಗೆ ಇಷ್ಟೊಂದು ಶೋಷಣೆಯಾಗುತ್ತಿದ್ದರೂ ಶಾಸಕರು ಚಕಾರ ಎತ್ತಿಲ್ಲ. ಇಂತಹ ರೈತ ವಿರೋಧಿ ಶಾಸಕರನ್ನು ಮತದಾರರು ಮುಂದಿನ ಬಾರಿ ಆಯ್ಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
    ಖಾಲಿ ಚೀಲದಲ್ಲಿಯೂ ವಂಚನೆ: ಖಾಲಿ ಚೀಲದಲ್ಲಿ ಸಹ ರೈತರನ್ನು ವಂಚನೆ ಮಾಡಲಾಗುತ್ತಿದೆ. ರೈತರು ಒಂದು ಕ್ವಿಂಟಾಲ್‌ಗೆ ಎರಡು ಖಾಲಿ ಚೀಲ ಕೊಡಬೇಕಾಗಿದ್ದು, ಒಂದು ಚೀಲಕ್ಕೆ 42 ರೂ.ನಂತೆ 84 ರೂ. ಕೊಟ್ಟು ಚೀಲ ಖರೀದಿಸುತ್ತಿದ್ದಾರೆ. ಆದರೆ ಖರೀದಿ ಕೇಂದ್ರದಲ್ಲಿ ರೈತರ ಒಂದು ಗೋಣಿ ಚೀಲಕ್ಕೆ 3 ರೂ. ನಿಗಧಿ ಮಾಡಲಾಗಿದೆ. ರೈತರಿಗೆ ಅಲ್ಲಿಯೂ ವಂಚನೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಖರೀದಿ ಕೇಂದ್ರದಲ್ಲಿನ ನಿಯಮ ಸರಳಗೊಳಿಸಬೇಕು. ರಾಜ್ಯದ ಎರಡು ಮೂರು ಜಿಲ್ಲೆಯಲ್ಲಿ ಭತ್ತಕ್ಕೆ 500 ರೂ. ಸಹಾಯಧನ ನೀಡಲಾಗುತ್ತಿದ್ದು ಶಿವಮೊಗ್ಗ ಜಿಲ್ಲೆಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts