More

    ಭತ್ತದ ಗದ್ದೆಗಳು ಜಲಾವೃತ

    ಅರಕಲಗೂಡು: ಕಾವೇರಿ ನದಿ ಉಕ್ಕೇರಿ ಕೊಲ್ಲಿ ತಗ್ಗು ಪ್ರದೇಶದಲ್ಲಿ ಭತ್ತದ ಗದ್ದೆಗಳು ಶುಕ್ರವಾರ ಮುಳುಗಡೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ.

    ತಾಲೂಕಿನಲ್ಲಿ ಹಾದು ಹೋಗಿರುವ ಕಾವೇರಿ ನದಿ ಪಾತ್ರದ ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಭೂ ಪ್ರದೇಶದಲ್ಲಿ ರೈತರು ಈಗಾಗಲೇ ಭತ್ತದ ನಾಟಿ ಕಾರ್ಯ ಮುಗಿಸಿದ್ದಾರೆ. ನದಿ ಜಲಾನಯನ ಪಾತ್ರದಲ್ಲಿ ಮಳೆ ಪರಿಣಾಮ ಕಾವೇರಿ ಉಕ್ಕಿ ಹರಿಯುತ್ತಿದ್ದು, ಕೊಲ್ಲಿ ಭಾಗದ ತಗ್ಗು ಪ್ರದೇಶದಲ್ಲಿ ಭತ್ತದ ಬೆಳೆ ಜಮೀನಿಗೆ ನೀರು ನುಗ್ಗಿ ಜಲಾವೃತವಾಗಿದೆ.

    ಕಾವೇರಿ ನದಿ ಪ್ರವಾಹಕ್ಕೆ ಈ ಬಾರಿ ಮುಂಗಾರು ಬೆಳೆಗಳು ಸಿಲುಕಿ ಹಾನಿಗೊಳಗಾಗಿದ್ದವು. ತಂಬಾಕು, ಅಲಸಂದೆ, ಉದ್ದು, ಹೆಸರು ಮತ್ತಿತರ ದ್ವಿದಳ ಧಾನ್ಯಗಳ ಫಸಲು ಜಲ ಪ್ರಳಯಕ್ಕೆ ತುತ್ತಾಗಿ ನಾಶವಾಗಿ ರೈತರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು. ಕಳೆದ ತಿಂಗಳು ಭತ್ತದ ಅಗೆ ಹಾಕಿದ್ದ ಸಮಯದಲ್ಲಿ ಕಾವೇರಿ ಉಕ್ಕೇರಿ ಸಸಿ ಮಡಿ ಕರಗಿ ನಾಟಿ ಮಾಡಲು ಪೈರುಗಳಿಲ್ಲದೆ ಸಂಕಷ್ಟ ತಂದೊಡ್ಡಿತು. ಪರಿಣಾಮವಾಗಿ ರೈತರು ಇನ್ನೊಮ್ಮೆ ಭತ್ತದ ಸಸಿ ಮಡಿ ಬೆಳೆಸಿ ನಾಟಿ ಮಾಡಲು ಹರಸಾಹಸ ಪಡುವಂತಾಗಿತ್ತು. ಇದರಿಂದಾಗಿ ಕೊಲ್ಲಿ ತಗ್ಗು ಭಾಗದ ಜಮೀನಿನಲ್ಲಿ ಭತ್ತದ ನಾಟಿ ಕಾರ್ಯವನ್ನು ತಡವಾಗಿ ಮುಗಿಸಿದ್ದರು. ಇನ್ನು ಕೆಲವು ಕಡೆ ರೈತರು ನಾಟಿ ಕಾರ್ಯ ನಡೆಸುತ್ತಿದ್ದಾರೆ. ಇಷ್ಟರಲ್ಲೇ ಇದೀಗ ಮತ್ತೊಮ್ಮೆ ಕಾವೇರಿ ಪ್ರವಾಹ ಬಂದೆರಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಸತತ ಕಾವೇರಿ ಪ್ರವಾಹಕ್ಕೆ ತುತ್ತಾಗಿ ಬಿತ್ತನೆ ಮಾಡಿದ್ದ ಬೆಳೆಗಳು ನದಿ ನೀರಿನಲ್ಲಿ ಮುಳುಗಿ ಹಾನಿಗೊಳಗಾಗುತ್ತಿವೆ. ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ಹಾನಿಗೀಡಾಗಿತ್ತು. ಈಗ ನಾಟಿ ಮಾಡಿದ ಗದ್ದೆಗಳು ಮುಳುಗಡೆಯಾಗಿವೆ. ಅಪಾರ ಹಣ ವ್ಯಯಿಸಿ ನಾಟಿ ನಡೆಸಿದ ಭತ್ತದ ಗದ್ದೆಗಳಲ್ಲಿ ಒಂದೆರಡು ದಿನಗಳ ಕಾಲ ನಿರಂತರವಾಗಿ ನದಿ ನೀರಿನಲ್ಲಿ ಮುಳುಗಡೆಯಾದರೆ ಪೈರುಗಳು ಕೊಳೆತು ಬೆಳೆ ಕಳೆದುಕೊಳ್ಳಬೇಕಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

    ರಾಗಿ ಬಿತ್ತನೆಗೆ ಅಡ್ಡಿ: ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಮಳೆಗೆ ಹಲವೆಡೆ ರಾಗಿ ಬಿತ್ತನೆಗೆ ತೊಡಕಾಗಿದೆ. ತಂಬಾಕು, ಆಲೂಗಡ್ಡೆ, ಜೋಳ ಬೆಳೆ ಕಟಾವು ಮುಗಿಸಿದ ನಂತರ ಅಪಾರ ರೈತರು ಆಹಾರಕ್ಕಾಗಿ ಹಿಂಗಾರು ರಾಗಿ ಬಿತ್ತನೆ ನಡೆಸುವುದು ವಾಡಿಕೆ. ಆದರೆ ವರುಣ ಮಾತ್ರ ಬಿಡುವು ನೀಡುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts