More

    ಭಟ್ಕಳ ಬೋಟ್​ಗಳಿಗೂ ಕರೊನಾ ಸೋಂಕು!

    ರಾಮಚಂದ್ರ ಕಿಣಿ ಭಟ್ಕಳ

    ಭಟ್ಕಳದ ಬೋಟ್​ಗಳು ಗಂಗೊಳ್ಳಿ ಬಂದರಿನಲ್ಲಿ ಲಂಗರು ಹಾಕಲು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ವಾಪಸು ಕಳುಹಿಸಿದ ಘಟನೆ ಬುಧವಾರ ಜರುಗಿದೆ.

    ಪ್ರತಿ ವರ್ಷ ಮೀನುಗಾರಿಕೆ ಸೀಸನ್ ಮುಗಿದ ಕೂಡಲೆ ಫಿಶಿಂಗ್ ಬೋಟ್​ನವರು ದಕ್ಕೆ ಮೇಲೆ ಎಳೆದು ಹಾಕುತ್ತಾರೆ. ಆದರೆ, ಪರ್ಶಿಯನ್ ಬೋಟ್​ನವರು ಸುರಕ್ಷತೆಗಾಗಿ ಬಂದರಿನಲ್ಲಿ ಬೋಟ್ ನಿಲುಗಡೆ ಮಾಡುತ್ತಾರೆ. ಭಟ್ಕಳದಲ್ಲಿ ಸುಮಾರು 56 ಪರ್ಶಿಯನ್ ಬೋಟ್​ಗಳು ಇದ್ದು, ಇದರಲ್ಲಿ ಸುಮಾರು 20 ಬೋಟ್​ಗಳು ಪಕ್ಕದ ಜಿಲ್ಲೆಯ ಉಡುಪಿಯ ಗಂಗೊಳ್ಳಿಯಲ್ಲಿ ಲಂಗರು ಹಾಕುತ್ತವೆ. ಅದರಂತೆ ಈ ಬಾರಿಯೂ ಭಟ್ಕಳದ 9 ಬೋಟ್​ಗಳು ಬುಧವಾರ ಗಂಗೊಳ್ಳಿಗೆ ಲಂಗರು ಹಾಕಲು ತೆರಳಿವೆ. ಭಟ್ಕಳದ ಬೋಟ್​ಎಂದು ತಿಳಿಯುತ್ತಿದ್ದಂತೆಯೇ ಗಂಗೊಳ್ಳಿಯ ಸ್ಥಳೀಯ ಮೀನುಗಾರರು ಬೋಟ್​ಗಳನ್ನು ಒಳಗೆ ಸೇರಿಸಿಕೊಂಡಿಲ್ಲ.

    ‘ಭಟ್ಕಳದಲ್ಲಿ ಕರೊನಾ ತಾಂಡವವಾಡುತ್ತಿದೆ. ಅಲ್ಲಿಯ ಬೋಟ್ ನಿಲ್ಲಿಸಲು ನಾವು ಬಿಡುವುದಿಲ್ಲ’ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸ್ಥಳೀಯ ಶಾಸಕ, ಎಸಿ, ಪೊಲೀಸ್ ಇಲಾಖೆಗೆ ದೂರು ಕೂಡ ನೀಡಿದ್ದಾರೆ. ‘ಪರವಾನಗಿ ಇಲ್ಲದೆ ಬಂದಿದ್ದೀರಿ’ ಎಂದು ಬಂದವರನ್ನೆಲ್ಲಾ ವಾಪಸ್ ಕಳುಹಿಸಿದ್ದಾರೆ.

    ‘ಭಟ್ಕಳದ ಮೀನುಗಾರಿಕೆ ಕಾರ್ವಿುಕರನ್ನು ಉಡುಪಿ ಜಿಲ್ಲೆಯ ಯಾಂತ್ರಿಕೃತ ಬೋಟ್​ಗಳಲ್ಲಿ ದುಡಿಸಿಕೊಳ್ಳುತ್ತಿದ್ದಾರೆ. ಸಮುದ್ರ ಮಾರ್ಗದಿಂದ ಬಂದು ಕರೆದುಕೊಂಡು ಹೋಗುತ್ತಾರೆ. ಆಗ ಇಲ್ಲದ ಕರೊನಾ ಈಗ ಮಾತ್ರ ಹೇಗೆ ಬರುತ್ತದೆ’ ಎಂದು ಭಟ್ಕಳದ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಭಟ್ಕಳ ಬೋಟ್​ಗಳಿಗೆ ಪಕ್ಕದ ಜಿಲ್ಲೆಯವರು ಬಿಡಿ, ನಮ್ಮದೇ ಜಿಲ್ಲೆಯ ಹೊನ್ನಾವರದಲ್ಲೂ ನಿಲ್ಲಿಸಲು ಅವಕಾಶ ನೀಡಿಲ್ಲ’ ಎಂದು ಮೀನುಗಾರರು ಆರೋಪಿಸಿದ್ದಾರೆ.

    ಗಂಗೊಳ್ಳಿ ಏಕೆ ಬೆಸ್ಟ್?: ಮಳೆಗಾಲದಲ್ಲಿ ಸಮುದ್ರ ರೌದ್ರಾವತಾರ ತಾಳುತ್ತದೆ. ಅಲೆಗಳು ರಾಕ್ಷಸ ರೂಪ ಪಡೆಯುತ್ತವೆ. ಭಟ್ಕಳ ಬಂದರಿನಲ್ಲಿ ಅಲೆಗಳ ತೀವ್ರತೆ ಹೆಚ್ಚಿದ್ದು, ಇಲ್ಲಿ ಬೋಟ್​ಗಳು ನಿಲ್ಲಲು ಸೂಕ್ತವಲ್ಲ ಎನ್ನುವುದು ಮೀನುಗಾರರ ಅಭಿಪ್ರಾಯ. ಆದರೆ, ಗಂಗೊಳ್ಳಿ ಕಡಲ ತೀರದಲ್ಲಿ ಅಲೆಗಳು ಸೌಮ್ಯ ಇದ್ದು, ಬೋಟ್​ಗಳಿಗೆ ಹಾನಿಯಾಗುವುದಿಲ್ಲ. ಹಾಗಾಗಿ ಪ್ರತಿ ವರ್ಷ 20- 30 ಬೋಟ್​ಗಳು ಅಲ್ಲೇ ಠಿಕಾಣಿ ಹೂಡುತ್ತವೆ.

    ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಒಂದು ಜಿಲ್ಲೆಯ ಮೀನುಗಾರರ ಸಮಸ್ಯೆಗೆ ಮತ್ತೊಂದು ಜಿಲ್ಲೆಯವರು ಸ್ಪಂದಿಸಬೇಕು. ಆದರೆ, ಕರೊನಾ ಪೀಡಿತ ಊರಿನಿಂದ ಬಂದಿದ್ದಿರಿ ಎಂದು ಬುಧವಾರ ತೆರಳಿದ ಎಲ್ಲ 9 ಬೋಟ್​ಗಳನ್ನು ವಾಪಸ್ ಕಳುಹಿಸಲಾಗಿದೆ. ಸದ್ಯ ನಮ್ಮ ಬೋಟ್​ಗಳನ್ನು ಅಳ್ವೆಕೋಡಿಯ ಬಂದರಿನಲ್ಲಿ ನಿಲ್ಲಿಸಲಾಗಿದೆ. ಕಡಲು ರೌದ್ರಗೊಂಡರೆ ಬೋಟ್​ಗಳಿಗೆ ಹಾನಿಯಾಗುವ ಸಂಭವವಿದೆ. | ಶ್ರೀಧರ ಮೊಗೇರ, ಅಧ್ಯಕ್ಷರು ಪರ್ಶಿನ್ ಬೋಟ್ ಯುನಿಯನ್ ಭಟ್ಕಳ

    ಭಟ್ಕಳದ ಬೋಟ್​ಗಳನ್ನು ಗಂಗೊಳ್ಳಿಯಿಂದ ವಾಪಸ್ ಕಳುಹಿಸಿದ ಘಟನೆ ನಮ್ಮ ಗಮನಕ್ಕೆ ಬಂದಿದೆ. ಮೀನುಗಾರಿಕೆ, ಬಂದರು ಇಲಾಖೆಯ ಸಹಾಯಕ ನಿರ್ದೇಶಕರು ಅವರೊಂದಿಗೆ ಮಾತನಾಡುತ್ತಾರೆ. ನಮ್ಮ ಜಿಲ್ಲೆಯಲ್ಲಿನ ಸುರಕ್ಷಿತ ತಾಣಗಳ ಕುರಿತು ಮೊದಲು ಮಾಹಿತಿ ಪಡೆಯುತ್ತೇನೆ. ಒಂದು ವೇಳೆ ನಮ್ಮಲ್ಲಿ ಸಾಧ್ಯವೆ ಇಲ್ಲ ಎಂದಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪರ್ಯಾಯ ಮಾರ್ಗ ಸೂಚಿಸುವಂತೆ ಮನವಿ ಮಾಡಲಾಗುವುದು. | ಭರತ ಸೆಲ್ವಂ, ಉಪವಿಭಾಗಾಧಿಕಾರಿ ಭಟ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts