More

    ಭಕ್ತೋತ್ಸಾಹವಾದ ಲಕ್ಷ ದೀಪೋತ್ಸವ

    ಚಿತ್ರದುರ್ಗ: ಸೂರ್ಯಾಸ್ತ ಸಮೀಪಿಸಿತು, ಕತ್ತಲು ಆವರಿಸಿತು, ಭಕ್ತೋತ್ಸಾಹವೂ ಜೋರಾಗಿತ್ತು. ದೀಪ ಹಚ್ಚುವ ಕ್ಷಣಕ್ಕಾಗಿ ಜಮಾಯಿಸಿದ್ದವರ ತವಕವೂ ಹೆಚ್ಚಾಯಿತು. ಸಂದೇಶ ದೊರಕುತ್ತಿದ್ದಂತೆ ಗಂಟೆಗಟ್ಟಲೇ ಕಾಯುತ್ತ ನಿಂತವರಿಂದ ಸಹಸ್ರಾರು ಅಣತೆಗಳು ಮಿನುಗುವ ನಕ್ಷತ್ರದಂತೆ ಕಂಗೊಳಿಸಿವು. ಹಲವರು ಭಕ್ತಿಯ ಪರಾಕಾಷ್ಠೆಯಲ್ಲೂ ಮಿಂದೆದ್ದರು…

    ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನಿಂದ ಸೋಮವಾರ ಆಯೋಜಿಸಿದ್ದ 24ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಮೆದೇಹಳ್ಳಿ ರಸ್ತೆಯಲ್ಲಿರುವ ಸ್ವಾಮಿಯ ದೇಗುಲ ಮುಂಭಾಗದ ಆವರಣ ಬೆಳಕಿನ ಚಿತ್ತಾರ ಮೂಡಿಸಿ, ಹಲವರನ್ನು ಆಕರ್ಷಿಸುವ ಮೂಲಕ ಸಾಕ್ಷಿಯಾಯಿತು. ಇದೇ ವೇಳೆ ಸಾವಿರಾರು ಭಕ್ತರು ಸಾಲು-ಸಾಲು ದೀಪಗಳನ್ನು ಹಚ್ಚಿ ಭಕ್ತಿ ಸಮರ್ಪಿಸಿದರು.

    ಹೆಚ್ಚು ಜನ ಸೇರುವ ನಿರೀಕ್ಷೆ ಹಿನ್ನಲೆಯಲ್ಲಿ ಬ್ಯಾರಿಕೇಡ್, ಪೋಲ್ಸ್‌ಗಳನ್ನು ಹಾಕಲಾಗಿತ್ತು. ಸರತಿ ಸಾಲಿನ ಮೂಲಕ ಸ್ವಾಮಿಯ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೆ, ವಾಹನಗಳ ನಿಲುಗಡೆಗೂ ದೇಗುಲ ಸಮೀಪ ಅವಕಾಶವಿತ್ತು.

    ಸಂಜೆ 6ರಿಂದ ರಾತ್ರಿ 11ರವರೆಗೂ ದರ್ಶನಕ್ಕಾಗಿ ಜನಸಾಗರವೇ ಹರಿದು ಬಂದ ಕಾರಣ ಭಕ್ತರು ಗಂಟೆಗಟ್ಟಲೇ ಕಾದರು. ಅಯ್ಯಪ್ಪಸ್ವಾಮಿಯ ಜೊತೆ ಗಣಪತಿ, ಸುಬ್ರಮಣ್ಯ, ಭೀಮಶಂಕರ, ಭೀಮಾಂಜನೇಯ ಸ್ವಾಮಿ ಮೂರ್ತಿಗಳನ್ನು ಕಣ್ತುಂಬಿಕೊಂಡರು. ಮಹಾಮಂಗಳಾರತಿ, ತೀರ್ಥ ಪಡೆದು ಇಷ್ಟಾರ್ಥ ಈಡೇರಿಸುವಂತೆ ಹಲವರು ಸ್ವಾಮಿಯಲ್ಲಿ ಪ್ರಾರ್ಥಿಸಿಕೊಂಡರು. ನೆರೆದಿದ್ದ ಭಕ್ತಗಣಕ್ಕೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ದೀಪೋತ್ಸವ ಉದ್ಘಾಟಿಸಿದರು. ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

    ದೇಗುಲದ ಪ್ರಧಾನ ಅರ್ಚಕ ಸತೀಶ್ ಶರ್ಮಾ, ಉದ್ಯಮಿ ಎ.ಆರ್.ತಿಪ್ಪೇಸ್ವಾಮಿ, ದಿ ಮರ್ಚೆಂಟ್ಸ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಟಿ.ಮಹಂತೇಶ್, ದ್ಯಾಮಣ್ಣ, ಐಶ್ವರ್ಯ ಗ್ರೂಪ್ ಆಫ್ ಹೋಟೆಲ್ಸ್‌ನ ಅರುಣ್‌ಕುಮಾರ್, ಮೆದೇಹಳ್ಳಿ ಗ್ರಾಪಂ ಅಧ್ಯಕ್ಷ ಜಯರಾಮರೆಡ್ಡಿ, ಮಾಜಿ ಅಧ್ಯಕ್ಷ ಉಜ್ಜಿನಿಸ್ವಾಮಿ, ರಾಜ್ಯ ಕ್ರೀಡಾಭಿವೃದ್ಧಿ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಜಿ.ಎಂ.ಸುರೇಶ್, ಆರ್ಯ ವೈಶ್ಯ ಸಂಘದ ಅಧ್ಯಕ್ಷ ಲಿಂಗಂ ಇ. ಶ್ರೀನಿವಾಸ್‌ಬಾಬು ಇತರರಿದ್ದರು.

    ಖ್ಯಾತ ಹಿನ್ನೆಲೆ ಗಾಯಕರಾದ ಶೃತಿ ವಿ. ಬೆಂಗಳೂರು, ಮಹೇಂದ್ರ ರಂಗದಾಸ್ ಮೈಸೂರು ಮತ್ತು ತಂಡದವರು ಭಕ್ತಿ ಕುಸುಮಾಂಜಲಿ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts