More

    ಭಂಡಾರದೊಡೆಯನಲ್ಲಿ ಮಿಂದೆದ್ದ ಭಕ್ತ ಗಣ

    ಯಾದಗಿರಿ: ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೋತ್ಸವ ಲಕ್ಷಾಂತರ ಭಕ್ತರ ಮಧ್ಯೆ ಮಕರ ಸಂಕ್ರಮಣ ದಿನವಾದ ಭಾನುವಾರ ಅದ್ದೂರಿಯಾಗಿ ನಡೆಯಿತು.

    ಎಲ್ಲೆಲ್ಲೂ ಭಂಡಾರದ ಧೂಳು, ಕಣ್ಣು ಹಾಯಿಸಿದಲ್ಲೆಲ್ಲ ಜನಸಾಗರ, ಬೆಂಡು-ಬತ್ತಾಸಿನ ಭರ್ಜರಿ ಮಾರಾಟ, ಬೆಲ್ಲದ ಜಿಲೇಬಿ, ಬಿಸಿಬಿಸಿ ಭಜ್ಜಿಯ ಘಮಘಮ ವಾಸನೆ, ಪಲ್ಲಕ್ಕಿ ಹೊತ್ತ ಪೂಜಾರಿಗಳು. ಇವು ಮೈಲಾಪುರದಲ್ಲಿ ಕಂಡು ಬಂದ ದೃಶ್ಯಗಳು.

    ಎಲ್ಲ ಕಡೆಯಂತೆ ಈ ಜಾತ್ರೆಯಲ್ಲಿ ರಥೋತ್ಸವ ಜರುಗುವುದಿಲ್ಲ. ಬದಲಿಗೆ ಕಬ್ಬಿಣದ ಸರಪಳಿ ಹರಿಯಲಾಗುತ್ತದೆ. ಹಲವು ವೈಶಿಷ್ಟೃಗಳ ಮೈಲಾರಲಿಂಗೇಶ್ವರ ಗುಹಾಂತರ ದೇವಾಲಯಕ್ಕೆ ಕಲ್ಯಾಣ ಕರ್ನಾಟಕ, ಸೇರಿ ನೆರೆಯ ಆಂಧ್ರ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಮಲ್ಲಯ್ಯನ ದರ್ಶನ ಪಡೆದು ಪುನೀತರಾದರು.

    ಮಧ್ಯಾಹ್ನ ಮಲ್ಲಯ್ಯನ ಗರ್ಭ ಗುಡಿಯಿಂದ ಗಂಗಾಸ್ನಾನಕ್ಕಾಗಿ ಅಲಂಕೃತ ಪಲ್ಲಕ್ಕಿಯಲ್ಲಿ ಉತ್ಸವ ಮೂತರ್ಿ ಪಕ್ಕದ ಹೊನ್ನಕೆರೆಗೆ ಮಂಗಲ ವಾದ್ಯಗಳೊಂದಿಗೆ ನಡೆಯಿತು. ಈ ವೇಳೆ ಲಕ್ಷಾಂತರ ಭಕ್ತರು `ಏಳು ಕೋಟಿಗೇಳು ಕೋಟಿಘೆ.. ಎಂಬ ಜೈಘೋಷದೊಂದಿಗೆ ಮಲ್ಲಯ್ಯನಿಗೆ ಪ್ರಿಯವಾದ ಭಂಡಾರ, ಕಲ್ಲುಸಕ್ಕರೆ, ಉತ್ತತ್ತಿ, ಕುರಿ ಉಣ್ಣೆ, ರೊಕ್ಕ-ರೂಪಾಯಿ ಹಾಗೂ ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬು, ಜೋಳ, ಭತ್ತದ ಬೆಳೆ ಎಸೆದು ಏಳು ಕೋಟಿಗೆ ಮಲ್ಲಯ್ಯ ಎನ್ನುತ್ತ ಹರಕೆ ತೀರಿಸಿದರು.

    ಇನ್ನು ಈ ಸಮಯದಲ್ಲಿ ಸಂಪ್ರದಾಯಿಕವಾಗಿ ಜೀವಂತ ಕುರಿಗಳನ್ನು ಪಲ್ಲಕ್ಕಿ ಮೇಲೆ ಎಸೆಯುವುದನ್ನು ನಿಷೇಧಿಸಿದ್ದರೂ ಜಿಲ್ಲಾಡಳಿತದ ಕಣ್ತಪ್ಪಿಸಿ ಭಕ್ತರು ಒಂದೆರಡು ಕುರಿಗಳನ್ನು ಪಲ್ಲಕ್ಕಿ ಮೇಲೆ ಹಾರಿಸಿದರು. ಕೆಲವರು ತಂದಿದ್ದ ಹರಕೆ ಕುರಿ ಮರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಲ್ಲದೆ ಭಕ್ತರಿಗೆ ತಿಳಿವಳಿಕೆ ಮೂಡಿಸಿದರು. ಕುರಿ ಹಾರಿಸುವುದು ನಿಷೇಧ ಎಂಬ ನಾಮಲಕಗಳನ್ನು ಅಲ್ಲಲ್ಲಿ ಹಾಕಿ ಧ್ವನಿವರ್ಧಕದಲ್ಲಿ ಹೇಳಲಾಯಿತು.

    ಸರಪಳಿ ಕಡಿತ: ಗಂಗಾಸ್ನಾನ ಬಳಿಕ ಪಲ್ಲಕ್ಕಿ ಉತ್ಸವ ಹಿಂತಿರುಗಿದ ಬಳಿಕ ಕಬ್ಬಿಣದ ಸರಪಳಿ ಹರಿಯುವ ಕಾರ್ಯಕ್ರಮ ಜರುಗಿತು. ಈ ರೋಮಾಂಚನದ ದೃಶ್ಯಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಮುಂಜಾಗ್ರತಾ ಕ್ರಮವಾಗಿ ಒಂದು ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ವೈದ್ಯಕೀಯ, ಸಾರಿಗೆ ಮತ್ತು ಕಂದಾಯ ಇಲಾಖೆ ಸಹಯೋಗದಡಿ ಜಾತ್ರೋತ್ಸವ ಯಶಸ್ವಿಯಾಗಿ ನೆರವೇರಿತು.

    ಜನತೆ ಅಂಗಡಿಗಳಲ್ಲಿ ಬೊಂಬಾಟಾಗಿ ಸಿಹಿ ತಿಂಡಿ ತಿನಿಸು ಹಾಗೂ ಮಲ್ಲಯ್ಯನ ಭಂಡಾರ ಖರೀದಿಸಿದರು. ಚಿಕ್ಕಮಕ್ಕಳು ಆಟಿಕೆ ವಸ್ತುಗಳನ್ನು ಖರೀದಿಸಿ ಪೀಪಿ ಊದುತ್ತ, ಜೋಕಾಲಿಗಳಲ್ಲಿ ಕುಳಿತು ಸಂಭ್ರಮಿಸಿರುವುದು ಜಾತ್ರೆಗೆ ಹೆಚ್ಚಿನ ಮೆರುಗು ನೀಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts