More

    ಬ್ಲ್ಯಾಕ್​ಫಂಗಸ್ ಚಿಕಿತ್ಸೆಗೆ ಔಷಧ ಒದಗಿಸಲು ಸೂಚನೆ

    ಹುಬ್ಬಳ್ಳಿ: ಕೋವಿಡ್ ಚಿಕಿತ್ಸೆಯ ಅಡ್ಡಪರಿಣಾಮದಿಂದ ಬ್ಲ್ಯಾಕ್ ಫಂಗಸ್ ಹೆಚ್ಚಾಗುತ್ತಿದೆ. ಈ ಕುರಿತು ತಜ್ಞ ವೈದ್ಯರಿಂದ ಮಾಹಿತಿ ಪಡೆದಿದ್ದೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ನಗರದ ಕಿಮ್್ಸ ಆವರಣದಲ್ಲಿ ಜೈನ್ ಇಂಟರ್​ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ ವತಿಯಿಂದ ನಿರ್ವಿುಸಲಾದ ‘ಆಕ್ಸಿಜನ್ ಆನ್ ವ್ಹೀಲ್ಸ್’ ಎಂಬ ವಾಹನವನ್ನು ಕಿಮ್ಸ್​ಗೆ ಹಸ್ತಾಂತರಿಸಿ ಅವರು ಮಾತನಾಡಿದರು. ಬ್ಲ್ಯಾಕ್​ಫಂಗಸ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಔಷಧವನ್ನು ರಾಜ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಒದಗಿಸುವಂತೆ ಕೇಂದ್ರ ಸರ್ಕಾರದ ಆರೋಗ್ಯ ಕಾರ್ಯದರ್ಶಿಗೆ ದೂರವಾಣಿ ಮೂಲಕ ಕರೆ ಮಾಡಿ ಸೂಚಿಸಿದ್ದೇನೆ. ರಾಜ್ಯದ ಆರೋಗ್ಯ ಸಚಿವರು ಹಾಗೂ ಕಾರ್ಯದರ್ಶಿಗಳಿಗೆ ಟೆಂಡರ್ ಮೂಲಕ ಅಗತ್ಯವಿರುವ ಔಷಧ ಖರೀದಿಸುವಂತೆ ತಿಳಿಸಿದ್ದೇನೆ ಎಂದು ಹೇಳಿದರು.

    ಎಂಎಲ್​ಸಿ ಪ್ರದೀಪ ಶೆಟ್ಟರ್, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಆರ್​ಎಸ್​ಎಸ್​ನ ಶ್ರೀಧರ ನಾಡಗೇರ, ಜಿಟೋ ಸಂಘಟನೆಯ ರಾಕೇಶ ಕಠಾರಿಯಾ, ಗೌತಮ ಓಸವಾಲ್, ಕಿಷನ್ ಕಠಾರಿಯಾ, ವಿನೋದ್ ಪಠವಾನ್ ಇತರರು ಇದ್ದರು.

    ಹೇಗಿದೆ ಆಕ್ಸಿಜನ್ ಆನ್ ವ್ಹೀಲ್?

    ಜೈನ್ ಇಂಟರ್​ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ ವತಿಯಿಂದ ಸ್ಕೂಲ್ ವಾಹನವನ್ನು ತುರ್ತು ಸಂದರ್ಭದ ಚಿಕಿತ್ಸೆಗಾಗಿ ಮಾರ್ಪಡಿಸಲಾಗಿದೆ. ಕೋವಿಡ್​ನಿಂದ ಬಳಲುತ್ತಿರುವ ರೋಗಿಗಳಿಗೆ ಕಿಮ್್ಸ ನಲ್ಲಿ ಬೆಡ್ ದೊರಕುವವರೆಗೆ ವಾಹನದಲ್ಲಿದ್ದು ಚಿಕಿತ್ಸೆ ಪಡೆಯಬಹುದು. ಒಟ್ಟು 6 ಜನರಿಗೆ ಆಕ್ಸಿಜನ್ ಸಹಿತ ಇತರ ಸೌಕರ್ಯಗಳನ್ನು ಬಸ್​ನಲ್ಲಿ ಕಲ್ಪಿಸಲಾಗಿದೆ. 72 ಸಾವಿರ ರೂಪಾಯಿ ವೆಚ್ಚದ 9 ಲೀಟರ್ ಸಾಮರ್ಥ್ಯದ 6 ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ಅಳವಡಿಸಲಾಗಿದೆ. ದುಬೈನಿಂದ ಆಮದು ಮಾಡಿಕೊಂಡು ಬಸ್ ಸಿದ್ಧಪಡಿಸಲಾಗಿದೆ. ಮುಂದಿನ ದಿನದಲ್ಲಿ ಧಾರವಾಡ ಜಿಲ್ಲಾಸ್ಪತ್ರೆಗೂ ಇಂಥ ವಾಹನ ನೀಡುವುದಾಗಿ ಜಿಟೋ ಸಂಘಟನೆಯ ಹುಬ್ಬಳ್ಳಿ ಅಧ್ಯಕ್ಷ ಶಾಂತಿಲಾಲ್ ಓಸವಾಲ್ ತಿಳಿಸಿದ್ದಾರೆ.

    ರಾಜ್ಯ ಸರ್ಕಾರದಿಂದ ಸೂಕ್ತ ತೀರ್ಮಾನ

    ರಾಜ್ಯದಲ್ಲಿ ಲಾಕ್​ಡೌನ್ ಮುಂದುವರಿಸುವ ಕುರಿತು ತಜ್ಞರು ನೀಡಿದ ವರದಿಯನ್ನು ನಾನು ಪರಿಶೀಲಿಸಿಲ್ಲ. ಸದ್ಯ ಮೇ 24ರವರೆಗೆ ಕಠಿಣ ಲಾಕ್​ಡೌನ್ ಜಾರಿಯಲ್ಲಿದೆ. ಮೇ 22ರ ನಂತರ ಪರಿಸ್ಥಿತಿ ನೋಡಿಕೊಂಡು ಲಾಕ್​ಡೌನ್ ಮುಂದುವರಿಸುವ ಕುರಿತು ಸೂಕ್ತ ತೀರ್ಮಾನ ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂಬುದು ನನ್ನ ಸಲಹೆಯಾಗಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.

    972 ಕೋವಿಡ್ ಪ್ರಕರಣ ಪತ್ತೆ

    ಧಾರವಾಡ ಜಿಲ್ಲೆಯಲ್ಲಿ ಸೋಮವಾರ 972 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ. 681 ಜನರು ಬಿಡುಗಡೆಯಾಗಿದ್ದು, 6026 ಸಕ್ರಿಯ ಪ್ರಕರಣಗಳಿವೆ. ಕೋವಿಡ್​ನಿಂದ ಇದುವರೆಗೆ 803 ಜನರು ಮೃತಪಟ್ಟಿದ್ದಾರೆ.

    765 ಬೆಡ್​ಗಳು ಲಭ್ಯ

    ಧಾರವಾಡ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೋಮವಾರ 765 ಕೋವಿಡ್ ಬೆಡ್​ಗಳು ಲಭ್ಯ ಇದ್ದವು. ಒಟ್ಟು 3127 ಬೆಡ್​ಗಳನ್ನು ಮೀಸಲಿರಿಸಲಾಗಿದೆ. 178 ಆಕ್ಸಿಜನ್, ಒಂದು ಐಸಿಯು, 4 ವೆಂಟಿಲೇಟರ್ ಬೆಡ್​ಗಳು ಖಾಲಿ ಇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts