More

    ಬ್ರಹ್ಮಾನಂದ ನೀಡುವ ಸಾಧನ ಭಜನೆ, ದಯಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ, ಸಿದ್ಧಾರೂಢ ಮಠದಲ್ಲಿ ರಾಜ್ಯಮಟ್ಟದ ಸ್ಪರ್ಧೆ

    ಹುಬ್ಬಳ್ಳಿ: ಭಜನೆಯು ಬ್ರಹ್ಮಾನಂದವನ್ನು ತಂದು ಕೊಡುವ ಕಲಿಯುಗದ ಏಕೈಕ ಸಾಧನವಾಗಿದೆ. ಇದಕ್ಕಾಗಿಯೇ ನಿಜಗುಣ ಶಿವಯೋಗಿಗಳು ‘ಕರುಣ ವಿದ್ಯೆಗಳುಳ್ಳ ಗುರು ಭಜನೆಯನು ಕರುಣಿಸು ಬೇಡುವೆನು ಅಭವ’ ಎಂದು ಹೇಳಿದ್ದಾರೆ ಎಂದು ಕಾಡರಕೊಪ್ಪ ಪೂರ್ಣಾನಂದ ಆಶ್ರಮದ ನ್ಯಾಯವೇದಾಂತಾಚಾರ್ಯ ಸದ್ಗುರು ಶ್ರೀ ದಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

    ಇಲ್ಲಿಯ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಶ್ರೀ ಸಿದ್ಧಾರೂಢರ 187ನೇ ಜಯಂತ್ಯುತ್ಸವದ ನಿಮಿತ್ತ ಹಮ್ಮಿಕೊಂಡ ಎಂಟನೇ ವರ್ಷದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಶ್ರೀ ಜಗದ್ಗುರು ಸಿದ್ಧಾರೂಢರ ಮಠವು ಭಜನೆ, ಶಾಸ್ತ್ರ, ಪುರಾಣ, ಕೀರ್ತನೆಗಳಿಗೆ ಮೀಸಲಾಗಿಟ್ಟ ಪವಿತ್ರವಾದ ಕ್ಷೇತ್ರ. ಇಲ್ಲಿ ವರ್ಷಕ್ಕೆ ಒಂದು ಬಾರಿಯಾದರೂ ಇಂತಹ ಭಜನಾ ಸ್ಪರ್ಧೆ ನಡೆಯಲೇಬೇಕು. ಭಜನೆ ಮಾಡುವುದರಿಂದ ತನು, ಮನ ಪರಿಶುದ್ಧವಾಗುತ್ತದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಅಣ್ಣಿಗೇರಿಯ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ನಿಜಗುಣರ ಕೈವಲ್ಯ ಪದಗಳು ಉತ್ತರ ಕರ್ನಾಟಕದಲ್ಲಿ ಮಾತ್ರ ಪ್ರಚಲಿತವಾಗಿವೆ. ಇದನ್ನು ರಾಜ್ಯದ ತುಂಬ ಪ್ರಚಾರ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.

    ಶ್ರೀಮಠದ ಧರ್ಮದರ್ಶಿ ಹಾಗೂ ಭಜನಾ ಸ್ಪರ್ಧೆ ಅಧ್ಯಕ್ಷ ಶಾಮಾನಂದ ಪೂಜೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಠದಲ್ಲಿ ನಿಜಗುಣರ ಅದ್ವೈತ ವೇದಾಂತ ಶಾಸ್ತ್ರಗಳ ಕುರಿತು ಮತ್ತು 6 ದಿನಗಳ ಪರ್ಯಂತ ಇದೇ ವಿಷಯವಾಗಿ ಭಜನೆ ನಡೆಯುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.

    ಅನೇಕ ಜನ ವಿದ್ವಾಂಸರು, ಸ್ವಾಮೀಜಿಗಳು ಉಪದೇಶಾಮೃತ ನೀಡುವರು. ಮುಮುಕ್ಷುಗಳು, ಸಾಧಕರು ಇದರ ಸದುಪಯೋಗ ಪಡೆಯಬೇಕೆಂದು ವಿನಂತಿಸಿದರು.

    ಹನುಮನಹಳ್ಳಿಯ ಶ್ರೀ ಶಿವಬಸವ ಸ್ವಾಮೀಜಿ, ಧರ್ಮದರ್ಶಿಗಳಾದ ಡಿ.ಡಿ. ಮಾಳಗಿ, ಜಗದೀಶ ಮಗಜಿಕೊಂಡಿ, ಜಿ.ಎಸ್. ನಾಯಕ, ಮಠದ ಮ್ಯಾನೇಜರ್ ಈರಣ್ಣ ತುಪ್ಪದ ಇತರರು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಎಸ್.ಐ. ಕೋಳಕೂರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts