More

    ಬೋರಾಳದಲ್ಲಿ ಭಾರತೀಯ ಗಸೆಲ್ ಪತ್ತೆ

    ಔರಾದ್: ಬೋರಾಳ ಅರಣ್ಯ ಪ್ರದೇಶದಲ್ಲಿ ಚಿಂಕಾರ(ಭಾರತೀಯ ಗಸೆಲ್) ವನ್ಯಜೀವಿಗಳು ಕಂಡುಬಂದಿವೆ. ಅಳಿವಿನಂಚಿನಲ್ಲಿರುವ ಅಪರೂಪದ ಈ ಜೀವಿಗಳು ಸಂತಪುರ ಉಪವಲಯ ಅರಣ್ಯಾಧಿಕಾರಿ ಅಂಕುಶ ಮಚಕುರಿ ಅವರ ಕ್ಯಾಮರಾದಲ್ಲಿ ಸೆರೆಯಾಗಿವೆ.

    ಚಿಂಕಾರ ಇರಾನ್, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತದ ರಾಜಸ್ಥಾನದ ಥಾರ್ ಮರುಭೂಮಿ ಪರಿಸರದಲ್ಲಿ ಜೀವಿಸುವ ನಾಜೂಕಾದ ಜೀವಿ ಆಗಿದೆ. ಶುಷ್ಕ ಬಯಲು ಮತ್ತು ಬೆಟ್ಟಗಳು, ಮರುಭೂಮಿ, ಒಣ ಪೊದೆ ಹಾಗೂ ಲಘು ಕಾಡುಗಳಲ್ಲಿ ವಾಸಿಸುವ ಈ ಜೀವಿಗಳು ಭಾರತದಲ್ಲಿ 80ಕ್ಕೂ ಹೆಚ್ಚು ಸಂರಕ್ಷಿತ ಪ್ರದೇಶಗಳಲ್ಲಿ ಕಂಡುಬರುತ್ತವೆ.

    ಭಾರತೀಯ ಗಸೆಲ್ ಜೀವಿತಾವಧಿ 12-15 ವರ್ಷ. 20-25 ಕೆಜಿ ತೂಕ ಹೊಂದಿರುವ ಈ ಪ್ರಾಣಿ ಗಂಟೆಗೆ 50-60 ಕಿಮೀ ವೇಗದಲ್ಲಿ ಓಡುತ್ತದೆ. ಗಂಡು ಚಿಂಕಾರಗೆ ತಲೆ ಮೇಲೆ ಎರಡು ಕರಿ ಕೊಂಬು, ಅರ್ಧ ಫೀಟ್ನ ಬಿಳಿ ಬಾಲವಿರುತ್ತದೆ. ಹೆಣ್ಣು ಚಿಂಕಾರಗೆ ಅರ್ಧ ಫೀಟ್ನ ಎರಡು ಚಿಕ್ಕ ಕೊಂಬುಗಳಿರುತ್ತವೆ.

    ಚಿಂಕಾರ ಸಸ್ಯಾಹಾರಿ ಆಗಿದ್ದು, ರಾತ್ರಿ ವೇಳೆ ಆಹಾರ ಹುಡುಕಲು ಬಯಸುತ್ತದೆ. ಸೂಯರ್ಾಸ್ತದ ಮೊದಲು ಮತ್ತು ರಾತ್ರಿ ಹೆಚ್ಚು ಸಕ್ರಿಯವಾಗಿ ಕಾಣಸಿಗುತ್ತವೆ. ಹುಲ್ಲು, ವಿವಿಧ ಎಲೆ ಮತ್ತು ಹಣ್ಣುಗಳನ್ನು (ಕಲ್ಲಂಗಡಿ, ಕುಂಬಳಕಾಯಿ) ತಿನ್ನುತ್ತವೆ. ಈ ಗಸೆಲ್ಗಳು ಅನೇಕ ದಿನಗಳವರೆಗೆ ನೀರಿಲ್ಲದೆ ಜೀವಿಸುತ್ತವೆ.

    ರಾಜ್ಯ ಸಕರ್ಾರ 2016ರಲ್ಲಿ ಬಾಗಲಕೋಟೆಯ ಯಡಹಳ್ಳಿ, 2019ರಲ್ಲಿ ತುಮಕೂರಿನ ಬುಕ್ಕಪಟ್ಟಣದಲ್ಲಿ ಚಿಂಕಾರಗಳ ಅಭಯಾರಣ್ಯಕ್ಕೆ ಒತ್ತು ನೀಡಿ ಈ ಜೀವಿಗಳ ಸಂತಾನ ವೃದ್ಧಿಸಲು ಸೂಚನೆ ನೀಡಿದೆ.

    ತಾಲೂಕಿನ ನಂದಿಬಿಜಲಗಾಂವ ಹತ್ತಿರದ ಅರಣ್ಯಗಳಲ್ಲಿ ಈ ಮೊದಲು ನೀಲ್ಗಾಯ್ ಹಾಗೂ ಚೆಟ್ನಾಳ ಅರಣ್ಯದಲ್ಲಿ ಕರಿ ನವಿಲಿನ ಸಂತತಿ ಕಂಡುಬಂದಿತ್ತು. ಇದೀಗ ಚಿಂಕಾರಗಳು ಪ್ರತ್ಯಕ್ಷವಾಗಿರುವುದು ಪರಿಸರಪ್ರಿಯರಿಗೆ ಸಂತೋಷ ತಂದಿದೆ. ಅಪರೂಪದ ಚಿಂಕಾರಗಳ ಬೇಟೆ ಅಕ್ಷಮ್ಯ. ಮೃದು ಸ್ವಭಾವದ ಇವು ಮನುಷ್ಯನನ್ನು ನೋಡಿದರೆ ಅತ್ಯಂತ ದೂರಕ್ಕೆ ಓಡಿ ಹೋಗುತ್ತವೆ. ಇವುಗಳಿಂದ ಜನರ ಜೀವಕ್ಕೆ ಯಾವುದೇ ಅಪಾಯವಿಲ್ಲ.

    ಬೋರಾಳ-ತುಳಜಾಪುರ ಅರಣ್ಯ ಪ್ರದೇಶದಲ್ಲಿ ಸುತ್ತಾಡುತ್ತಿರುವಾಗ ಚಿಂಕಾರ ವನ್ಯಜೀವಿಗಳು ಪ್ರತ್ಯಕ್ಷವಾಗಿವೆ. ತಾಲೂಕಿನ ವಿವಿಧ ಅರಣ್ಯ ಪ್ರದೇಶಗಳಲ್ಲಿ ಹೊಸ-ಹೊಸ ಅತಿಥಿಗಳ ಆಗಮನವಾಗುತ್ತಿದೆ. ಅವುಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಅಳಿವಿನಂಚಿನಲ್ಲಿರುವ ಜೀವಿಗಳನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ.
    | ಅಂಕುಶ ಮಚಕುರಿ, ಉಪವಲಯ ಅರಣ್ಯಾಧಿಕಾರಿ ಸಂತಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts