More

    ಬೊಮ್ಮೂರು ಅಗ್ರಹಾರ ಗ್ರಾಮದ ವಿವಾದ ಇತ್ಯರ್ಥ

    ಶ್ರೀರಂಗಪಟ್ಟಣ: ತಾಲೂಕಿನ ಬೊಮ್ಮೂರು ಅಗ್ರಹಾರ ಗ್ರಾಮದಲ್ಲಿ ವಿವಾದ ಏರ್ಪಟ್ಟು ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮುಸ್ಲಿಮರ ಮದರಸ ನಿರ್ಮಾಣ ವಿವಾದ ಸಚಿವ ಜಮೀರ್ ಅಹಮದ್ ಅವರ ಮಧ್ಯಸ್ಥಿಕೆಯಲ್ಲಿ ಕೊನೆಗೂ ಬಗೆಹರಿದಿದೆ.

    ತಾಲೂಕಿನ ಬೊಮ್ಮೂರು ಅಗ್ರಹಾರ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದ ವಸತಿ ಹಾಗೂ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಹಾಗೂ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರ ನೇತೃತ್ವದಲ್ಲಿ ಗ್ರಾಮದ ಹಿಂದು ಹಾಗೂ ಮುಸ್ಲಿಂರ ನಡುವೆ ಶನಿವಾರ ಏರ್ಪಟ್ಟ ಸಂಧಾನ ಸಭೆಯ ಮಾತುಕತೆ ಮೂಲಕ 15 ವರ್ಷಗಳ ವಿವಾದಕ್ಕೆ ತೆರೆ ಎಳೆಯಲಾಯಿತು.

    ಗ್ರಾಮದ ಸರ್ವೇ ನಂ.246 ರ 5 ಎಕರೆ ವಕ್ಫ್ ಬೋರ್ಡ್‌ಗೆ ಸೇರಿದ ಜಮೀನಿನಲ್ಲಿ 56 ಹಿಂದು ಕುಟುಂಬಗಳು 47 ವರ್ಷಗಳಿಂದ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು. ಇದುವರೆಗೂ ಸರ್ಕಾರ ಇವರ ನಿವೇಶನಗಳಿಗೆ ಹಕ್ಕು ಪತ್ರ ವಿತರಣೆ ಮಾಡದ ಕಾರಣ ಹಲವು ಸೌಲಭ್ಯಗಳಿಂದ ವಂಚಿತರಾಗಿ ಭಯದಲ್ಲೇ ಜೀವಿಸುವಂತಾಗಿತ್ತು. ಇದರೊಂದಿಗೆ ಇದೇ ಸರ್ವೇ ನಂ.ಜಮೀನಿನಲ್ಲಿ 15 ವರ್ಷಗಳ ಹಿಂದೆ ಮುಸ್ಲೀಮರು ಮಸೀದಿ ನಿರ್ಮಾಣಕ್ಕೆ ಮುಂದಾದ ವೇಳೆ ವಿವಾದ ಏರ್ಪಟ್ಟು ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈ ಎರಡು ಸಮಸ್ಯೆಗಳ ಹಿನ್ನೆಲೆ ರಾಜ್ಯ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿ ಪ್ರತಿಭಟಿಸಿದ್ದರು. ಆ ವೇಳೆ ರಮೇಶ ಬಂಡಿಸಿದ್ದೇಗೌಡ ಪರಿಹರಿಸಿಕೊಡುವ ಭರವಸೆ ನೀಡಿದ್ದರು.

    ಅದರಂತೆ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಸಚಿವ ಜಮೀರ್ ಅಹಮದ್, ಗ್ರಾಮದಲ್ಲಿ ನೆಲೆಸಿರುವ 56 ನಿವಾಸಿಗಳಿಗೆ ಯಾವುದೇ ತೊಡಕುಂಟಾಗದಂತೆ ಅವರವರ ನಿವೇಶನಗಳಿಗೆ ಅತೀ ಶೀಘ್ರವೇ ಹಕ್ಕು ಪತ್ರ ವಿತರಿಸಲಾಗುವುದು. ವಕ್ಫ್ ಬೋರ್ಡ್ ಕೇಂದ್ರದ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು. ಯಾವುದೇ ಕಾರಣಕ್ಕೂ ಹಿಂದುಗಳನ್ನು ಒಕ್ಕಲೆಬ್ಬಿಸುವುದಿಲ್ಲ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಜತೆಗೆ ಗ್ರಾಮದಲ್ಲಿ ನನೆಗುದಿಗೆ ಬಿದ್ದಿದ್ದ ಮದರಸ ನಿರ್ಮಾಣಕ್ಕೂ ಸಹ ಯಾರಿಂದಲೂ ಯಾವುದೇ ಸಮಸ್ಯೆ ಉಂಟುಮಾಡದೆ ಅವಕಾಶ ಕಲ್ಪಿಸಿ ಪ್ರಸ್ತುತ ಗ್ರಾಮದಲ್ಲಿ ಇರುವ ಸೌರ್ಹಾದತೆಯನ್ನು ಹೀಗೆ ಕಾಪಾಡಿಕೊಂಡು ಶಾಂತಿ, ನೆಮ್ಮದಿಯಿಂದ ಬದುಕುವಂತೆ ಎರಡು ಧರ್ಮದ ಮುಖಂಡರಲ್ಲಿ ಮನವಿ ಮಾಡಿದರು.

    ಇದರೊಂದಿಗೆ ಪಟ್ಟಣದ ಜೋನಿಗರ ಬೀದಿಯಲ್ಲಿನ ಅರಬ್ ಸಾಹೇಬ್ ಮಸೀದಿಯ ತಡೆ ಗೋಡೆ ನಿರ್ಮಾಣ ಕಾಮಗಾರಿ ಹಾಗೂ ಗಂಜಾಂನ ಮೊಹಮದ್ ಷಾ ಬಡಾವಣೆಯ ಹಜರತ್ ದಾವದ್ ಷಾ ಮಕಾನ್ ತಡೆಗೋಡೆ ನಿರ್ಮಾಣ ಹಾಗೂ ಸಂರಕ್ಷಣೆಗಾಗಿ ತಲಾ 5 ಲಕ್ಷ ರೂ. ನೆರವನ್ನು ವಕ್ಫ್ ಮಂಡಳಿಯಿಂದ ಘೋಷಿಸಿ ಆದೇಶ ಪ್ರತಿಯನ್ನು ಸ್ಥಳದಲ್ಲೇ ಮಸೀದಿ ಮುಖ್ಯಸ್ಥರಿಗೆ ಹಸ್ತಾಂತರ ಮಾಡಿದರು.

    ಮಳೆಗಾಗಿ ಪ್ರಾರ್ಥನೆ : ಇದಕ್ಕೂ ಮೊದಲು ಶ್ರೀರಂಗಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಗಂಜಾಂನ ಗುಂಬದ್‌ಗೆ ತೆರಳಿದ ಸಚಿವ ಜಮೀರ್ ಅಹಮದ್ ಹಜರತ್ ಟಿಪ್ಪು ಸುಲ್ತಾನ್, ಹೈದರಲಿ ಹಾಗೂ ಫಕ್ರುನ್ನಿಸಾ ಅವರ ಸಮಾಧಿಗೆ ಹೂವಿನ ಛಾದರ ಹೊದಿ ಮುಸ್ಲಿಂ ಮುಖಂಡರು, ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ಧಾರ್ಮಿಕ ಗುರು ಮೌಲ್ವಿಗಳೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹಮದ್, ಪ್ರಸ್ತುತ ರಾಜ್ಯದಲ್ಲಿ ಮಳೆ ಕೊರತೆಯಾಗಿದ್ದು, ರೈತರು ಹಾಗೂ ಜನರ ಸುಭೀಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.

    ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅವರನ್ನೇ ಕೇಳಿ : ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ವಿಚಾರ ಕುರಿತು ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ನಡೆಯ ಬಗ್ಗೆ ನಾನು ಹೇಳಲ್ಲ. ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಅವರನ್ನೇ ಕೇಳಿ. ನಾನು ಆ ಪಕ್ಷದಲ್ಲಿ ಇಲ್ಲ, ಅದರ ಬಗ್ಗೆ ಈಗ ಮಾತಾಡಲ್ಲ. ನಾನು ಕಾಂಗ್ರೆಸ್‌ನಲ್ಲಿದ್ದು ಕಾಂಗ್ರೆಸ್‌ಬಗ್ಗೆ ಮಾತಾಡುತ್ತೇನೆ. ಅವರು ವಿರೋಧ ಪಕ್ಷದಲ್ಲಿದ್ದಾರೆ, ನಮ್ಮ ವಿರುದ್ಧ ಹೋರಾಡುತ್ತಾರೆ ಎಂದರು.
    ಸಿ.ಎಂ.ಬದಲಾವಣೆ ವಿಚಾರ ಕುರಿತು ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಜಮೀರ್, ಸಿಎಂ ಆಯ್ಕೆಯನ್ನ ನಾನೂ ಮಾಡೋಕೆ ಆಗಲ್ಲ, ಹರಿಪ್ರಸಾದ್ ಕೂಡ ಮಾಡೋಕೆ ಆಗಲ್ಲ. ನಮ್ಮ ಪಕ್ಷದಲ್ಲಿ ಸಿಎಂ ಆಯ್ಕೆ ಮಾಡೋದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ. ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲ್ಲ. ಸಿದ್ದರಾಮಯ್ಯ ಅವರೆ ಸಿಎಂ ಆಗಿ ಇರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪುರಸಭೆ ಸದಸ್ಯರಾದ ಎಂ.ಎಲ್.ದಿನೇಶ್, ದಯಾನಂದ್, ಮುಖಂಡರಾದ ಎ.ಬಿ.ಜೆ ಸೋಮಶೇಖರ್, ಮಂಡ್ಯ ಜಿಲ್ಲಾ ವಕ್ಫ್ ಬೋರ್ಡ್ ಚೇರ್ಮನ್ ಜಬೀವುಲ್ಲಾ, ಮುಖಂಡರಾದ ಅಕ್ರಮ್ , ಮಸರ್ ಪಾಷ, ಮುಜೀಬ್ ಪಾಷ, ಬ್ಲಾಕ್ ಕಾಂಗ್ರೆಸ್‌ಹಾಗೂ ಯೂತ್ ಕಾಂಗ್ರೆಸ್ ಮುಖಂಡರು ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts