More

    ಬೈಲಹೊಂಗಲ ಡಿಪಿಇಪಿ ಶಾಲೆಗೆ ಶಿಕ್ಷಕರೇ ಚಕ್ಕರ್!

    ಬೈಲಹೊಂಗಲ: ಶಾಲೆಯಲ್ಲಿ ಶಿಕ್ಷಕರ ಅನುಪಸ್ಥಿತಿಯಲ್ಲಿ ಶಾಲಾ ಮಕ್ಕಳೆ ಪ್ರಾರ್ಥನೆ, ರಾಷ್ಟ್ರಗೀತೆ ಕಾರ್ಯಕ್ರಮ ನೆರವೇರಿಸಿದ ಘಟನೆ ಪಟ್ಟಣದ ಶಿವಬಸವ ನಗರದ ಡಿಪಿಇಪಿ ಶಾಲೆಯಲ್ಲಿ ಈಚೆಗೆ ನಡೆದಿದೆ.
    ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ಕೇವಲ ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಓರ್ವ ಮಹಿಳಾ ಶಿಕ್ಷಕಿ ರಜೆಯಲ್ಲಿದ್ದರೆ, ಮುಖ್ಯ ಶಿಕ್ಷಕ ಶಾಲೆಗೆ ಆಗಮಿಸಿಲ್ಲ. ಶಾಲೆ ಬಾಗಿಲು ತೆರಯದೆ ಮಕ್ಕಳು ಗಂಟೆಗಟ್ಟಲೇ ಕಾಯುತ್ತ ಕುಳಿತುಕೊಂಡರು. ಬಳಿಕ ಅಡುಗೆ ಸಿಬ್ಬಂದಿ ಸಹಾಯದಿಂದ ಮಕ್ಕಳೇ ಬೀಗ ತೆರೆದು ಒಳಪ್ರವೇಶಿಸಿದರು.
    ಅದೇ ಸಮಯಕ್ಕೆ ಪರಿಶೀಲನೆಗೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಬಿಆರ್‌ಪಿ ಎಸ್.ಎಸ್.ಚಳಕೊಪ್ಪ, ಐಇಆರ್‌ಟಿ ಆರ್.ಎನ್.ಇಂಗಳಗಿ, ಸಮುದಾಯದತ್ತ ಮಾರ್ಗದರ್ಶಕಿ ರೇಣುಕಾ ಭೋವಿ ಅವರು, ಶಾಲೆಯಲ್ಲಿ ಶಿಕ್ಷಕರೇ ಇಲ್ಲದ್ದನ್ನು ಕಂಡು ಅಡುಗೆ ಸಿಬ್ಬಂದಿ ಮೂಲಕ ಮನೆಯಲ್ಲಿದ್ದ ಮುಖ್ಯ ಶಿಕ್ಷಕರನ್ನು ಕರೆಯಿಸಿಕೊಂಡರು. ನನಗೆ ಹುಷಾರಿಲ್ಲ ಎಂದು ಸಬೂಬು ಹೇಳಿದರು. ಆಗ ಪರೀಶಿಲನಾ ತಂಡ ಶಿಕ್ಷಕರಿಲ್ಲದಿದ್ದರೆ ಶಾಲೆ ಹೇಗೆ ನಡೆಯಬೇಕು? ನೀವು ಬಿಇಒ ಅವರ ಗಮನಕ್ಕೆ ತರಬೇಕು. ಬೇರೆ ಶಿಕ್ಷಕರ ವ್ಯವಸ್ಥೆ ಮಾಡುತ್ತಿದ್ದರು. ಇನ್ನೊಮ್ಮೆ ಹೀಗೆ ಮಾಡಬೇಡಿ ಎಂದು ತಾಕೀತು ಮಾಡಿದರು.
    ಶಾಲಾ ಮುಖ್ಯ ಶಿಕ್ಷಕ ಎಂ.ಎಸ್.ಅಂಗಡಿ ಅವರ ಅನುಪಸ್ಥಿತಿಯಲ್ಲಿ ಶಾಲೆಯ ಶಿಕ್ಷಕಿ ಎಂ.ವಿ. ತುಪ್ಪದ ಒಂದರಿಂದ ಐದು ತರಗತಿಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
    ಒಂದರಿಂದ ಐದನೇ ತರಗತಿವರೆಗೆ ಸುಮಾರು 30 ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಶಿಕ್ಷಕರ ಪದೇ ಪದೆ ಗೈರಿನಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೇವಲ 8ರಿಂದ 10 ಮಕ್ಕಳು ಹಾಜರಾಗುತ್ತಿದ್ದಾರೆ. ಶಿಕ್ಷಕರ ಈ ವರ್ತನೆಯಿಂದ ಮೊದಲಿದ್ದ 80 ಮಕ್ಕಳ ಸಂಖ್ಯೆ 30ಕ್ಕೆ ಕುಸಿದು ಶಾಲೆ ಬಂದ್ ಆಗುವ ದುಸ್ಥಿತಿ ಬಂದೊದಗಿದೆ. ಬಡ ಮಕ್ಕಳು ಇಲ್ಲಿ ದಾಖಲಾತಿ ಪಡೆದಿದ್ದು, ಮಕ್ಕಳ ಭವಿಷ್ಯ ಹಾಳಾಗುತ್ತಿದೆ.
    ಐದು ಕೊಠಡಿಗಳಿದ್ದು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಎರಡೇ ಕೊಠಡಿಗಳಲ್ಲಿ ಐದು ತರಗತಿಗಳು ನಡೆಯುತ್ತಿವೆ. ಇನ್ನುಳಿದ ಕೊಠಡಿಗಳನ್ನು ಅಂಗನವಾಡಿ ಮಕ್ಕಳಿಗೆ ನೀಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್. ಪ್ಯಾಟಿ ಈ ಕುರಿತು ಕ್ರಮ ಜರುಗಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ. ಇನ್ನು ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೈಲಹೊಂಗಲದಿಂದ ಶಿಕ್ಷಕನಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts