More

    ಬೈಲಹೊಂಗಲದಲ್ಲಿ ಕರೊನಾ ನಿಯಮ ಮಾಯ!

    ಬೈಲಹೊಂಗಲ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ವೈರಿ ಕರೊನಾ ತನ್ನ ವ್ಯಾಪ್ತಿಯನ್ನು ವಿಸ್ತರಣೆ ಮಾಡಿಕೊಳ್ಳುತ್ತಿದೆ. ಆದರೆ, ಸ್ಥಳೀಯರು ಮಾತ್ರ ಯಾವುದೇ ಭಯ, ಭೀತಿ ಇಲ್ಲದೆ ಸೋಂಕಿಗೆ ಸೆಡ್ಡು ಹೊಡೆದಂತೆ ನಡೆದುಕೊಳ್ಳುತ್ತಿದ್ದಾರೆ. ಇದು ಸೋಂಕಿನ ಸಂಖ್ಯೆ ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮಂಗಳವಾರದವರೆಗೆ ಬೈಲಹೊಂಗಲ ತಾಲೂಕಿನಲ್ಲಿ 50 ಹಾಗೂ ಕಿತ್ತೂರಿನಲ್ಲಿ 281 ಕರೊನಾ ಪ್ರಕರಣ ಕಂಡು ಬಂದಿವೆ. ಹೀಗಾಗಿ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಜನರೇ ಹೆಚ್ಚಿನ ಸಮಸ್ಯೆ ಅನುಭವಿಸಬೇಕಾಗುತ್ತದೆ.

    ಪಾಠ ಕಲಿಯದ ಜನ: ಕರೊನಾ ಮೊದಲು ಹಾಗೂ ಎರಡನೇ ಅಲೆಗಳಲ್ಲಿ ತಾಲೂಕಿನ ಅನೇಕ ಕರೊನಾ ಪೀಡಿತರು ಸಕಾಲಕ್ಕೆ ಬೆಡ್, ಆಕ್ಸಿಜನ್ ಸಿಗದೆ ಸಾವನ್ನಪ್ಪಿದ್ದರು. ಸದ್ಯದ ಜನರ ವರ್ತನೆ ಗಮನಿಸಿದರೆ ಹಿಂದಿನ ಘಟನೆಯಿಂದ ಯಾವುದೇ ಪಾಠ ಕಲಿತಂತೆ ಕಾಣುತ್ತಿಲ್ಲ.

    ಪಟ್ಟಣದ ಹೋಟೆಲ್, ಕಿರಾಣಿ ಅಂಗಡಿ, ಬೇಕರಿ, ಬಟ್ಟೆ, ಔಷಧದ ಅಂಗಡಿ, ತರಕಾರಿ, ಹೂವು-ಹಣ್ಣು ಮಾರುಕಟ್ಟೆಗಳಲ್ಲಿ ಜನರು ನಿತ್ಯ ಕಿಕ್ಕಿರಿದು ಸೇರುತ್ತಿದ್ದಾರೆ. ಅಗತ್ಯ ವಸ್ತು ಖರೀದಿಸಲು ಆಗಮಿಸುವ ಜನರು ಸರ್ಕಾರದ ಯಾವುದೇ ಮಾರ್ಗಸೂಚಿಗಳನ್ನೂ ಪಾಲಿಸುತ್ತಿಲ್ಲ. ಬಹುತೇಕರು ಮಾಸ್ಕ್ ಧರಿಸದೇ ವ್ಯಾಪಾರದಲ್ಲಿ ತೊಡಗಿದ್ದಾರೆ. ಅದಲ್ಲದೆ, ಜನರಿಗೆ ಸೂಕ್ತ ಜಾಗೃತಿ ಮೂಡಿಸಬೇಕಾದ ಆಡಳಿತ ವರ್ಗ ಸಹ ಕಣ್ಮುಚ್ಚಿ ಕುಳಿತಂತೆ ಕಾಣುತ್ತಿದೆ.

    ಹೆಸರಿಗಷ್ಟೇ ವಾರಾಂತ್ಯ ಕರ್ಫ್ಯೂ: ಸರ್ಕಾರ ಕರೊನಾ ನಿಯಂತ್ರಣ ಉದ್ದೇಶದಿಂದ ವಾರಾಂತ್ಯದ ಕರ್ಫ್ಯೂ ಘೋಷಣೆ ಮಾಡಿದೆ. ಆದರೆ, ಪಟ್ಟಣಕ್ಕೆ ಈ ನಿಯಮ ಅನ್ವಯವಾದಂತೆ ಕಾಣುತ್ತಿಲ್ಲ. ವಾರಾಂತ್ಯದಲ್ಲೂ ಜನರು ನಿಯಮ ಪಾಲಿಸುತ್ತಿಲ್ಲ. ಈ ಕುರಿತು ಅಧಿಕಾರಿಗಳ ಸಭೆ ಕರೆದು ಸರ್ಕಾರದ ನಿಯಮಾವಳಿ ಪಾಲಿಸಲು ಕ್ರಮ ಜರುಗಿಸಬೇಕಾದ ತಾಲೂಕಾಡಳಿತ ಕ್ರಮಕ್ಕೆ ಮುಂದಾಗದಿದ್ದರೆ ಹೇಗೆ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

    ಜಾಗೃತಿ ವಹಿಸದ ಶಿಕ್ಷಣ ಇಲಾಖೆ: ತಾಲೂಕಿನಲ್ಲಿ ಶಾಲೆಗಳು ಮತ್ತೆ ಆರಂಭವಾಗಿವೆ. ಆದರೆ, ಸದ್ಯ ನಡೆಯುತ್ತಿರುವ ಪಿಯುಸಿ, ಪದವಿ ಸೇರಿ ಇನ್ನಿತರ ಕಾಲೇಜ್‌ಗಳಲ್ಲಿ 3-4 ವಿದ್ಯಾರ್ಥಿಗಳನ್ನು ಒಂದೇ ಬೇಂಚ್‌ನಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ಚಿಕ್ಕ ಕೊಠಡಿಯಲ್ಲಿ 60-70 ಮಕ್ಕಳನ್ನು ಒಟ್ಟಿಗೆ ಕೂರಿಸುತ್ತಿರುವುದರಿಂದ ಪಾಲಕರಿಗೂ ಚಿಂತೆ ಕಾಡತೊಡಗಿದೆ. ತಮ್ಮ ಮಕ್ಕಳನ್ನು ಶಾಲೆಗೆ ಮಕ್ಕಳನ್ನು ಕಳಿಹಿಸುವುದೋ? ಬೇಡವೋ? ಎಂಬ ಸಂದಿಗ್ಧತೆಗೆ ಸಿಲುಕಿದ್ದಾರೆ. ಇತ್ತೀಚೆಗೆ ಕಿತ್ತೂರಿನ ವಸತಿ ಶಾಲೆಯೊಂದರಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಕರೊನಾ ಸೋಂಕಿಗೆ ತುತ್ತಾಗಿದ್ದಾರೆ. ಆದರೂ ಶಿಕ್ಷಣ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಪಾಲಕರ ಸಮೂಹ, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ತಾಲೂಕಿನಲ್ಲಿ ಕರೊನಾ ನಿಯಮಾವಳಿ ಪಾಲಿಸಲು ಕ್ರಮ ಜರುಗಿಸಲಾಗುವುದು. ಕರೊನಾ ಪರೀಕ್ಷೆ ಹೆಚ್ಚಿಸಲಾಗುವುದು. ಹೋಂ ಐಸೋಲೇಷನ್ ಆದವರಿಗೆ, ಆಸ್ಪತ್ರೆಯಲ್ಲಿರುವ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಸೋಂಕು ಹರಡದಂತೆ ಜಾಗೃತಿ ಮೂಡಿಸಲಾಗುವುದು.
    | ಬಸವರಾಜ ನಾಗರಾಳ
    ತಹಸೀಲ್ದಾರ್,ಬೈಲಹೊಂಗಲ

    | ಬಸವರಾಜ ಕಲಾದಗಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts