More

    ಬೇಸ್​ಮೆಂಟ್​ ತೆರವು ನನೆಗುದಿಗೆ!

    ಬೆಳಗಾವಿ: ಮಹಾನಗರದಲ್ಲಿ ಸಂಚಾರ ದಟ್ಟಣೆಗೆ, ಪಾರ್ಕಿಂಗ್​ ಸಮಸ್ಯೆಗೆ ಮೂಲ ಕಾರಣವಾಗಿರುವ ಬೇಸ್​ಮೆಂಟ್​ (ನೆಲಮಹಡಿ) ಕಟ್ಟಡಗಳ ತೆರವು ಕಾರ್ಯಾಚರಣೆ ನನೆಗುದಿಗೆ ಬಿದ್ದಿದ್ದು, ನಾಲ್ಕೆದು ವರ್ಷಗಳಿಂದ ಅರ್ಧಕ್ಕೆ ಮೊಟಕುಗೊಂಡಿದೆ.

    ಮಹಾನಗರ ಪಾಲಿಕೆ ವ್ಯಾಪ್ತಿಯ ಮಾರುಕಟ್ಟೆ ಪ್ರದೇಶಗಳಲ್ಲಿ ನಿಯಮಾನುಸಾರ ವಾಹನ ನಿಲುಗಡೆಗೆ ಅವಕಾಶ ನೀಡದೆ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಬೇಸ್​ಮೆಂಟ್​ ವ್ಯಾಪಾರಿ ಮಳಿಗೆ ತೆರವುಗೊಳಿಸಲು ಪಾಲಿಕೆಯು ಹಿಂದೇಟು ಹಾಕುತ್ತಿದೆ. ಪರಿಣಾಮ ಸಂಚಾರ ದಟ್ಟಣೆ, ಪಾರ್ಕಿಂಗ್​ ಸಮಸ್ಯೆಯಿಂದ ಜನರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.

    ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಸುಮಾರು 540ಕ್ಕೂ ಅಧಿಕ ನೆಲಮಹಡಿ ಕಟ್ಟಡಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ 2016ರಲ್ಲಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಮುಂದಿನ ಹೆಜ್ಜೆ ಇಟ್ಟಿತ್ತು. ಅಲ್ಲದೆ, ಕಟ್ಟಡಗಳಿಗೆ ವಿದ್ಯುತ್​, ನೀರು ಪೂರೈಕೆ ನಿಲ್ಲಿಸಿ ಟ್ರೇಡ್​ ಲೈಸೆನ್ಸ್​ ರದ್ದುಪಡಿಸಲು ಕ್ರಮ ವಹಿಸಿತ್ತು. ಬಳಿಕ ರಾಜಕೀಯ ಒತ್ತಡ ಇತರ ಕಾರಣಗಳಿಂದಾಗಿ ಬೇಸ್​ಮೆಂಟ್​ ಕಾರ್ಯಾಚರಣೆ ಅರ್ಧಕ್ಕೆ ಉಳಿದುಕೊಂಡಿದೆ. ಅಲ್ಲದೆ, ಬೇಸ್​ಮೆಂಟ್​ ಅಂಗಡಿ ತೆರವುಗೊಳಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ, ಬುಡಾ, ಹೆಸ್ಕಾಂ, ಲೋಕೋಪಯೋಗಿ ಸೇರಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆ ಇಲ್ಲಿಯವರೆಗೆ ಸಭೆಗಳು ನಡೆದಿಲ್ಲ.

    2015ರಿಂದ 2018ರ ಅವಧಿಯಲ್ಲಿ ಮಹಾನಗರ ಪಾಲಿಕೆಯು ನಿಯಮಾನುಸಾರ ವಾಹನ ನಿಲುಗಡೆಗೆ ಅವಕಾಶ ನೀಡದೆ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಬೇಸ್​ಮೆಂಟ್​ ವ್ಯಾಪಾರಿ ಮಳಿಗೆಗಳನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಲು ನೋಟಿಸ್​ ನೀಡಿತ್ತು. ಆದರೆ, ಇಲ್ಲಿಯವರೆಗೆ ಯಾರೊಬ್ಬರೂ ಅದಕ್ಕೆ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಸುಮಾರು 310 ಕಟ್ಟಡಗಳಿಗೆ ವಿದ್ಯುತ್​, ಕುಡಿಯುವ ನೀರು ಸ್ಥಗಿತಗೊಳಿಸಿ ಟ್ರೇಡ್​ ಲೈಸೆನ್ಸ್​ ರದ್ದುಪಡಿಸಿ ನಂತರ ಎಲ್ಲ ಅಂಗಡಿ ತೆರವುಗೊಳಿಸಲು ಪಾಲಿಕೆ ಕೈಗೊಂಡ ಆದೇಶ ಕಾರ್ಯರೂಪಕ್ಕೆ ಬಂದಿಲ್ಲ.

    ನಗರದ ಕೆಲವು ಕಡೆ ನಿಯಮ ಉಲ್ಲಂನೆ ಮಾಡಿದ್ದೂ ಅಲ್ಲದೆ ಬೇಸ್​ಮೆಂಟ್​ಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಗ್ಯಾಸ್​ ಸಿಲಿಂಡರ್​ಗಳ ಸಂಗ್ರಹ ಮಾಡಲಾಗಿದೆ. ಜತೆಗೆ ನೆಲಮಹಡಿಯಲ್ಲಿ ಡಯಾಲಿಸೀಸ್​ ಕೇಂದ್ರ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

    ನಗರದ ಬಹುಮಹಡಿ ಕಟ್ಟಡಗಳಲ್ಲಿನ ಬೇಸ್​ಮೆಂಟ್​ ಮಳಿಗೆಗಳನ್ನು ತೆರವುಗೊಳಿಸಲು ಮಹಾನಗರ ಪಾಲಿಕೆಯುವ ಕ್ರಮ ಕೈಗೊಂಡಿದೆ. ಈಗಾಗಲೇ 170 ಕಟ್ಟಡಗಳ ಮಾಲೀಕರಿಗೆ ನೋಟಿಸ್​ ಜಾರಿ ಮಾಡಲಾಗಿದೆ. ಮಳೆಗಾಲ ಮುಗಿದ ಮೇಲೆ ಕಾರ್ಯಾಚರಣೆ ಆರಂಭಿಸಲಾಗುವುದು.
    | ಡಾ.ರುದ್ರೇಶ ಘಾಳಿ, ಮಹಾನಗರ ಪಾಲಿಕೆ ಆಯುಕ್ತ

    ನೋ ಪಾರ್ಕಿಂಗ್​ ಸಮಸ್ಯೆ: ಮಹಾನಗರ ಪ್ರಮುಖ ರಸ್ತೆ, ಮಾರುಕಟ್ಟೆಗಳಲ್ಲಿ ಪಾರ್ಕಿಂಗ್​ ಮಾಡಲು ಸೂಕ್ತ ವ್ಯವಸ್ಥೆ ಮಾಡಿಲ್ಲ. ಆದರೆ, ರಸ್ತೆ ಪಕ್ಕದಲ್ಲಿ, ಖಾಲಿ ಪ್ರದೇಶಗಳು, ಅಂಗಡಿಗಳ ಮುಂಭಾಗದಲ್ಲಿ ನೋ ಪಾರ್ಕಿಂಗ್​ ಬೋರ್ಡ್​ ಅಳವಡಿಸಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ನೆಲ ಮಹಡಿ ಅಂಗಡಿಗಳನ್ನು ತೆರವುಗೊಳಿಸಿದ ನಂತರ ವಾಹನ ನಿಲುಗಡೆಗೆ ಅನುಕೂಲವಾಗುವಂತೆ ಕಟ್ಟಡ ಮಾಲೀಕರಿಂದಲೆ ತಕ್ಷಣ ರ್ಯಾಂಪ್​ (ವಾಹನ ಪ್ರವೇಶಕ್ಕೆ ದಾರಿ) ನಿರ್ಮಿಸಲು ಪಾಲಿಕೆ ಕ್ರಮ ವಹಿಸಬೇಕು ಎಂದು ಸ್ಥಳಿಯ ನಿವಾಸಿಗಳಾದ ರವಿ ಎಸ್​.ಪಾಟೀಲ, ರಾಹುಲ ಅನಗೋಳಕರ ಆಗ್ರಹಿಸಿದ್ದಾರೆ.

    ಅಧಿಕಾರಿಗಳಿಂದ ಅನುಮತಿ: ಮಹಾನಗರ ಪಾಲಿಕೆಯು ಬಹುಮಡಿ ಕಟ್ಟಡಗಳಿಗೆ ವ್ಯಾಪಾರ&ವಹಿವಾಟು ನಡೆಸಲು ಪರವಾನಗಿ ನೀಡುತ್ತಿರುವ ಸಂದರ್ಭದಲ್ಲಿ ನೆಲಮಹಡಿ ಪಾರ್ಕಿಂಗ್​ ಎಂದು ಉಲ್ಲೇಖಿಸುತ್ತಾರೆ. ಬಳಿಕ ಪಾಲಿಕೆಯ ಅಧಿಕಾರಿಗಳೇ ಬೇಸ್​ಮೆಂಟ್​ನಲ್ಲಿ ಅಂಗಡಿಗಳಿಗೆ ಕುಡಿಯುವ ನೀರು, ವಿದ್ಯುತ್​ ಸೌಲಭ್ಯ ಕಲ್ಪಿಸಿ ಪರವಾನಗಿ ನೀಡಿ ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದಾರೆ. ಪಾಲಿಕೆಯ ಅಧಿಕಾರಿಗಳೇ ಅಕ್ರಮಕ್ಕೆ ದಾರಿ ಮಾಡಿಕೊಡುತ್ತಿರುವುದರಿಂದ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ.

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts